ಬೆಂಗಳೂರು: ದೇಶದಲ್ಲಿ ಎಲ್ಲೋ ಒಂದೆರಡು ಕಡೆ ಕೆಲವು ಘಟನೆಗಳು ನಡೆದರೆ ಅದನ್ನು ಅಸಹಿಷ್ಣುತೆ ಎಂದು ಕರೆಯಲು ಸಾಧ್ಯವಿಲ್ಲ ಎಂದು ಆರ್ಟ್ ಆಫ್ ಲಿವಿಂಗ್‍ನ ರವಿಶಂಕರ್ ಗುರೂಜಿ ಅಭಿಪ್ರಾಯಪಟ್ಟರು.
ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳದ ಅಂಗವಾಗಿ ಭಾನುವಾರ ನಡೆದ ಪರಮವೀರ ವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅರೇಬಿಯಾ ರಾಷ್ಟ್ರಗಳ ಪತ್ರಿಕೆಗಳಲ್ಲಿ ಭಾರತದ ಸಹಿಷ್ಣುತೆ ಬಗ್ಗೆ ಎಷ್ಟೆಲ್ಲಾ ಲೇಖನಗಳು ಪ್ರಕಟವಾಗಿವೆ. ಭಾರತೀಯರಲ್ಲಿ ಹಿಂಸಾ ಪ್ರವೃತ್ತಿ ಕಡಿಮೆಯಿದೆ. ಒಂದು ವೇಳೆ ಇಂತಹ ಘಟನೆಗಳು ನಡೆದಾಗ ಕಾನೂನು ಕ್ರಮ ಕೈಗೊಳ್ಳುತ್ತದೆ. ಕೆಲವರು ಆಡುವ ಮಾತುಗಳಿಂದ ಭಾರತವೇ ಅಸಹಿಷ್ಣುತೆಯಿಂದ ಕೂಡಿದೆ ಎಂದರೆ ತಪ್ಪಾಗುತ್ತದೆ ಎಂದರು.
ಯುವ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಭಾರತ ಜಗತ್ತೆಲ್ಲವನ್ನೂ ಆಳಿತು. ಆದರೆ ಜಗತ್ತಿನ ಯಾವುದೇ ರಾಷ್ಟ್ರಗಳ ಮೇಲೆ ದಾಳಿ ಮಾಡಿಲ್ಲ. ತಮ್ಮ ವೃತ್ತಿಯಲ್ಲಿ ತೃಪ್ತಿಯಿದೆ ಎಂದು ಹೇಳಿದರೆ ಅದು ಸೈನಿಕರು ಮಾತ್ರ ಎಂದು ಹೇಳಿದರು.
ಭಾರತೀಯರು ಸೋತಿದ್ದರೆ ರಾಜಕಾರಣಿಗಳ ಪಡಸಾಲೆಯಲ್ಲೇ ವಿನಃ ಯುದ್ಧಭೂಮಿಯಲ್ಲಲ್ಲ. 1965ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ರಾಷ್ಟ್ರಕ್ಕಾಗಿ ಯೋಧರು ಊಟಲೆಕ್ಕಿಸದೆ ಮದ್ದು ಗುಂಡುಗಳನ್ನು ನೀಡಿ ಎಂದು ಬೇಡಿಕೊಂಡರೂ ನಮ್ಮ ದೇಶಕ್ಕೆ ಅದನ್ನು ನೀಡಲು ಸಾಧ್ಯವಾಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಭಾರತ ಯಾರ ಮೇಲೂ ಯುದ್ಧ ಮಾಡದ ಕಾರಣ ಭಾರತ ನಿಶ್ಯಕ್ತ ರಾಷ್ಟ್ರವೆನಿಸಿಕೊಂಡರೂ, ಧರ್ಮಕ್ಕಾಗಿ ಹಿಂಸೆ ಮಾಡಲಾಗಿದೆ. ಯುದ್ಧ ಸ್ವಾರ್ಥಕ್ಕೋಸ್ಕರವಲ್ಲ ಧರ್ಮಕ್ಕಾಗಿ ನಡೆದಿದೆ. ಎಲ್ಲ ಯುದ್ಧಗಳು ನಿರೀಕ್ಷಿತವಾಗಿರದಿದ್ದರೂ ಸೈನಿಕರು ಎಂದಿಗೂ ಎದೆಗುಂದದೆ ಸಂದಿಗ್ಧ ಪರಿಸ್ಥಿತಿಯಲ್ಲಿ ಮನೆಯವರನ್ನೂ ನೆನಪಿಸಿಕೊಳ್ಳದೆ ಯುದ್ಧ ಮಾಡಿದ ನಿಜವಾದ ದೇಶದ ಪ್ರತಿನಿಧಿಗಳು ಸೈನಿಕರು ಎಂದರು.
ಕಳೆದ 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡಿದ್ದ ಲಕ್ಷ್ಮಣ್ ಬೀರಣ್ಣನವರ್, ಗೋಪಿಚಂದ್ ವೆಂಕಟೇಶ್ ಸವಾಸೇರ್, ಅಬ್ದುಲ್ ಹಮೀದ್ ಅಮೀನ್‍ಸಾಬ್ ಮುಲ್ಲಾ, ಬಸವಣ್ಣಪ್ಪ ಕಾರ್ಗೆ ಹಾಗೂ ಈಶ್ವರ್ ಜೋಯಿಸ್ ಸೇರಿ ಒಟ್ಟು ಐವರು ಹಿರಿಯ ಯೋಧರನ್ನು ಸನ್ಮಾನಿಸಲಾಯಿತು. ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ದೇಶದ ಕುರಿತು ಭಾಷಣ ಮಾಡಿದ ಚಂದನಾ, ತ್ರಿವಿಕ್ರಮ್, ವೈದೇಹಿ, ನಾಗಶ್ರೀ, ಪ್ರಣವ್, ಧರಣಿಯವರಿಗೆ ಪ್ರಶಸ್ತಿ, 21 ಸಾವಿರ ನೀಡಿ ಗೌರವಿಸಲಾಯಿತು.
Advertisement