ಜಾತಿ ಸಂಕೋಲೆಯಿಂದ ಅಲ್ಪಮಾನವ ಸೃಷ್ಟಿ: ಸಿದ್ದರಾಮಯ್ಯ

ಮಕ್ಕಳು ಹುಟ್ಟುವಾಗ ವಿಶ್ವಮಾನವನಾಗಿರುತ್ತಾರೆ. ಆದರೆ, ನಾವು ಜಾತಿ, ಧರ್ಮ ಮತ್ತಿತರ ಸಂಕೋಲೆಗಳಿಂದ ಅಲ್ಪಮಾನವರನ್ನಾಗಿ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅನುರಕ್ತಿ ಕುವೆಂಪು ಕವಿತೆ- ಚಿತ್ರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ- ರಾಜ್ಯಪಾಲ
ಅನುರಕ್ತಿ ಕುವೆಂಪು ಕವಿತೆ- ಚಿತ್ರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ- ರಾಜ್ಯಪಾಲ

ಬೆಂಗಳೂರು: ಮಕ್ಕಳು ಹುಟ್ಟುವಾಗ ವಿಶ್ವಮಾನವನಾಗಿರುತ್ತಾರೆ. ಆದರೆ, ನಾವು ಜಾತಿ, ಧರ್ಮ ಮತ್ತಿತರ ಸಂಕೋಲೆಗಳಿಂದ ಅಲ್ಪಮಾನವರನ್ನಾಗಿ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಎಂ. ಚಂದ್ರಶೇಖರ ಪ್ರತಿಷ್ಠಾನ ಹಾಗೂ ಎಂ. ಮುನಿಸ್ವಾಮಿ ಅಂಡ್ ಸನ್ಸ್ ಸಂಸ್ಥೆ ಕುವೆಂಪು ಕಲಾ ಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಕೆ.ಸಿ. ಶಿವಾರೆಡ್ಡಿ ಸಂಪಾದಕತ್ವದ `ಅನುರಕ್ತಿ' ಕುವೆಂಪು ಕವಿತೆ- ಚಿತ್ರ ಪುಸ್ತಕ ಬಿಡುಗಡೆ ಮಾಡಿ ಸಿಎಂ ಮಾತನಾಡಿದರು. ಕುವೆಂಪು ಮಾನವೀಯತೆ ಮತ್ತು ನಿಸರ್ಗದ ಪ್ರೀತಿಯನ್ನು ಹೊಂದಿದ್ದರಿಂದಲೇ ವಿಶ್ವಮಾನವತೆ ತತ್ವವನ್ನು ಪಸರಿಸಿದರು. ಅವರ ವಿಚಾರಧಾರೆಗಳನ್ನು ಸದಾ ಜ್ಞಾಪಿಸಿಕೊಳ್ಳಬೇಕು. ಧರ್ಮ ಧರ್ಮದ ನಡುವೆ, ಜಾತಿ ಜಾತಿಯ ನಡುವೆ ಸಂಘರ್ಷ ಹುಟ್ಟು ಹಾಕಿ ನಿರ್ಮಿಸಿರುವ ಗೋಡೆಯನ್ನು ನಾವು ನಿರ್ನಾಮ ಮಾಡಬೇಕು ಎಂದು ಹೇಳಿದರು.
ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಕುವೆಂಪು ಕವಿತೆ, ಕಾದಂಬರಿ ಮತ್ತು ವಿಚಾರಧಾರೆಗಳನ್ನು ಆಲಿಸಬೇಕು. ಅವರ ಜಾತ್ಯತೀತ ಪ್ರೇರಿತ ವಿಚಾರಧಾರೆಗಳೇ ನಮ್ಮ ಜಾತ್ಯತೀತ ನಿಲುವಿಗೆ ಸ್ಪೂರ್ತಿಯಾಗಿದೆ. ಜಾತಿ, ಮತ,ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವವರನ್ನು ಸರಿದಾರಿಗೆ ತರಲು ಕುವೆಂಪು ಸಾಹಿತ್ಯ ದಾರಿದೀಪವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಶಿವಾರೆಡ್ಡಿ ಅವರು ಕುವೆಂಪು ಬಗ್ಗೆ ತಿಳಿದುಕೊಂಡಿರುವುದಕ್ಕೆ ಕವಿತೆಗೆ ತಕ್ಕಂತ ಚಿತ್ರಗಳನ್ನು ಸೆರೆ ಹಿಡಿದು ಮುದ್ರಿಸಿದ್ದಾರೆ. ನಾವು ಮೈಸೂರಿನಲ್ಲಿ ಓದುವಾಗ ಕುವೆಂಪು ಅವರನ್ನು ನೋಡಲು ಮತ್ತು ಮಾತನಾಡಿಸುವ ಅವಕಾಶ ಸಿಕ್ಕಿತು. ಅವರ ಕಾವ್ಯವನ್ನು ಓದಿ ಸಾಹಿತ್ಯದ ಒಲವು ಬೆಳೆಸಿಕೊಂಡೆವು. ಅವರು ನಮಗೆ ಇಷ್ಟವಾಗುವುದು ನಿಸರ್ಗದ ಮೇಲಿನ ಪ್ರೀತಿ ಮತ್ತು ಮಾನವೀಯ ಮೌಲ್ಯದ ಅಳವಡಿಕೆಯಿಂದ. ಪ್ರತಿಯೊಬ್ಬರು ಕುವೆಂಪು ಸಾಹಿತ್ಯವನ್ನು ಓದಿ, ಅರ್ಥ ,ಮಾಡಿಕೊಂಡು ಅನುಷ್ಠಾನಕ್ಕೆ ತರಲು ಪ್ರಯತ್ನಿಸುವಂತಾಗಬೇಕು ಎಂದು ಸಿಎಂ ಕಿವಿ ಮಾತು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com