
ಬೆಂಗಳೂರು: ಅನುಷ್ಠಾನಗೊಳ್ಳದ ಕನ್ನಡ ನಾಡುನುಡಿಪರ ವರದಿಗಳ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕನ್ನಡ ನುಡಿ-ಕನ್ನಡ ಗಡಿ ಜಾಗೃತಿ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯದ ಸಂಸದರಿಗೆ ಪತ್ರ ಬರೆದಿದ್ದಾರೆ.
ಕನ್ನಡಿಗರಿಗೆ ಉದ್ಯೋಗದಲ್ಲಿ ಸೂಕ್ತ ಅವಕಾಶಕ್ಕಾಗಿ ಡಾ.ಸರೋಜಿನಿ ಮಹಿಷಿ ವರದಿಯನ್ನು ಈಗಿನ ಕಾಲಕ್ಕೆ ತಕ್ಕಂತೆ ಪರಿಷ್ಕರಿಸಿ ಅನುಷ್ಠಾನ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗಿತ್ತಾದರೂ ಅದು ಅನುಷ್ಠಾನವಾಗಿಲ್ಲ, ಇತ್ತೀಚಿಗೆ ಕೆಪಿಟಿಸಿಎಲ್ ಎಂಜಿನಿಯರ್ ನೇಮಕಾತಿಯಲ್ಲಿ ಕನ್ನಡದ ಜ್ಞಾನವಿಲ್ಲದವರೂ ಆಯ್ಕೆಯಾಗಿದ್ದಾರೆ. ಮಾತೃಭಾಷಾ ಶಿಕ್ಷಣ ಮಾಧ್ಯಮದ ವಿಚಾರದಲ್ಲಿ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲು ತಾವು ಕರೆದ ತಜ್ಞರ ಸಭೆಯಲ್ಲಿ ಬಿನ್ನವಿಸಿಕೊಳ್ಳಲಾಗಿತ್ತು. ಆ ವಿಚಾರವೂ ಏನಾಯಿತೆಂಬ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡಿಗರ ಆಶೋತ್ತರಗಳನ್ನು ಈಡೇರಿಸಲು ಅಸ್ತಿತ್ವಕ್ಕೆ ಬಂದಿದ್ದು, ಅದಕ್ಕೆ ಸದಸ್ಯರ ನೇಮಕ ಆಗದೇ ಇದ್ದರೆ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಸಂಸದರಿಗೆ ಬರೆದ ಪತ್ರದಲ್ಲಿ ಕೇಂದ್ರದಿಂದ ಆಗಬೇಕಾಗಿರುವ ಕೆಲಸ ಕಾರ್ಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದರೂ ಸವಲತ್ತು ಸಿಗದೇ ಇರುವ ಕುರಿತಾಗಿ, ತ್ರಿಭಾಷಾ ಸೂತ್ರ, ಮಾತೃಭಾಷಾ ಶಿಕ್ಷಣ, ಸ್ಥಳೀಯರಿಗೆ ಉದ್ಯೋಗ ರಾಷ್ಟ್ರೀಯ ನೀತಿ, ಗಡಿ ಅಭಿವೃದ್ಧಿಗೆ ವಿಶೇಷ ಯೋಜನೆ, ಜಲ ವಿವಾದ ಪರಿಹಾರದ ಕುರಿತು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
Advertisement