ಪಠ್ಯದಲ್ಲಿ ಕೋಮುವಾದ ಅಪಾಯಕಾರಿ: ರಹಮತ್ ತರೀಕೆರೆ

ಶಾಲಾ ಪಠ್ಯ ಪುಸ್ತಕಗಳಿಗೆ ಬಲಪಂಥೀಯ ಮತೀಯವಾದಿಗಳು ತಮ್ಮ ಪರವಾದ ಅಪಾಯಕಾರಿ ಕೋಮುವಾದಿ ಆಯಾಮಗಳನ್ನು ನೀಡುತ್ತಿದ್ದಾರೆ.
ರಹಮತ್ ತರೀಕೆರೆ
ರಹಮತ್ ತರೀಕೆರೆ

ಮಂಗಳೂರು: ಶಾಲಾ ಪಠ್ಯ ಪುಸ್ತಕಗಳಿಗೆ ಬಲಪಂಥೀಯ ಮತೀಯವಾದಿಗಳು ತಮ್ಮ ಪರವಾದ ಅಪಾಯಕಾರಿ ಕೋಮುವಾದಿ ಆಯಾಮಗಳನ್ನು ನೀಡುತ್ತಿದ್ದಾರೆ.
ನಮ್ಮ ಮಕ್ಕಳು ಓದುವ ಪಠ್ಯಗಳಲ್ಲಿ ಮತೀಯ ಸಂಘರ್ಷಗಳನ್ನು ಹುಟ್ಟು ಹಾಕುವ, ಹೃದಯಗಳನ್ನು ಒಡೆಯುವ ಪಾಠಗಳು ಸೇರಿಕೊಂಡಿವೆ.ಮಕ್ಕಳ ಮುಗ್ಧ ಮನಸ್ಸನ್ನು ಕೆಡಿಸುವ ವ್ಯವಸ್ಥಿತ ಹುನ್ನಾರ ಇದು. ಪಠ್ಯಕ್ರಮದಲ್ಲಿ ಕಡ್ಡಾಯವಾಗಿ ದೇಶದ ಬುನಾದಿಯಾಗಿರುವ ಬಹುತ್ವದ ವಿಚಾರಗಳನ್ನು ಸೇರಿಸಲೇಬೇಕು ಎಂದು ಹಿರಿಯ ಸಾಹಿತಿ ರಹಮತ್ ತರೀಕೆರೆ ಆಗ್ರಹಿಸಿದ್ದಾರೆ.
ಮಂಗಳೂರಿನ ಶಾಂತಿ ಕಿರಣ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ `ಜನನುಡಿ' ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು. ಪಠ್ಯಪುಸ್ತಕಗಳಲ್ಲಿ ಬ್ರಾಹ್ಮಣ ಮೌಲ್ಯಗಳನ್ನು, ಸಂಕುಚಿತ ಮನೋಭಾವಗಳನ್ನು, ಧರ್ಮಗಳ ನಡುವೆ ವಿಷಬೀಜ ಬಿತ್ತುವಂಥ ಚಿಂತನೆಗಳನ್ನು ಹೇರಲಾಗಿದೆ. ಶೂದ್ರ ಸಂಸ್ಕೃತಿಯನ್ನು ತಿರಸ್ಕಾರ ಮಾಡಲಾಗಿದೆ. ದೇಶದ ಸೌಂದರ್ಯ ಇರುವುದೇ ಬಹುತ್ವದಲ್ಲಿ. ಇದನ್ನು ಅರ್ಥ ಮಾಡಿಕೊಳ್ಳದೆ ಇರುವ ಸಾಂಸ್ಕೃತಿಕ ಬಡತನದ ಕಾರಣದಿಂದಲೇ ಇಂತಹ ವ್ಯತಿರಿಕ್ತ ಪ್ರಕ್ರಿಯೆಗಳು ನಡೆಯುತ್ತಿವೆ.
ದೇಶದ ಬಹುತ್ವದ ಮೇಲೆ ಸಂಕುಚಿತ ಮನೋಧರ್ಮದ ಒತ್ತಡಗಳನ್ನು ಪ್ರಬಲವಾಗಿ ವಿರೋಧಿಸಲೇಬೇಕಿದೆ ಎಂದು ತರೀಕೆರೆ ಅಭಿಪ್ರಾಯಟ್ಟರು. ಮತೀಯವಾದಿಗಳಿಗೆ ಹಕ್ಕು ಕೊಟ್ಟವರಾರು?: 'ಲುಂಗಿ- ಟೋಪಿ ಧರಿಸುವ ವ್ಯಕ್ತಿ ಹಸಿ ಮರಗಳನ್ನು ಕಡಿಯುತ್ತಾನೆ, ಹಕ್ಕಿ ಮರಿಗಳು ಚೀರುತ್ತವೆ. ಆದರೆ ರಾಮಣ್ಣ ಎನ್ನುವ ವ್ಯಕ್ತಿ ಕೇವಲ ಒಣ ಮರಗಳನ್ನೇ ಕಡಿಯುತ್ತಾನೆ' ಎಂದು ಪಠ್ಯಪುಸ್ತಕಗಳಲ್ಲಿ ಹೇಳಲಾಗಿದೆ. ಇದು ಒಂದು ಉದಾಹರಣೆಯಷ್ಟೇ.
ಇದು ಏನನ್ನು ಸೂಚಿಸುತ್ತದೆ? ಪಠ್ಯದಲ್ಲೇ ಬಹುತ್ವವನ್ನು ತರದಿದ್ದರೆ ದೇಶವನ್ನು ಕಟ್ಟಲು ಹೇಗೆ ಸಾಧ್ಯವಾಗುತ್ತದೆ? ಧರ್ಮಗಳ ನಡುವಿನ ಅಂತರ್ಯುದ್ಧಗಳ ಮೂಲಕ ಯಾವ ದೇಶ ಬಲಿಷ್ಠವಾಗಿದೆ? ಪಠ್ಯಪುಸ್ತಕಗಳಲ್ಲಿ ಮತೀಯ
ವಾದವನ್ನು ಸೇರಿಸುವ ಮೂಲಕ ಈ ದೇಶದ ಸಾಂಸ್ಕೃತಿಕ ವಾರಸುದಾರಿಕೆಯ ಮೇಲೆ ಮತೀಯವಾದಿಗಳಿಗೆ ಹಕ್ಕು ಕೊಟ್ಟವರು ಯಾರು? ಇಂಥ ಏಕರೂಪಿ ಸಂಸ್ಕೃತಿ ದೇಶದ ಜಾತ್ಯತೀತೆಗೆ ಅತ್ಯಂತ ಅಪಾಯಕಾರಿ. ಶುದ್ಧ ಇಸ್ಲಾಂ ಮತ್ತು ಶುದ್ಧ ಹಿಂದುತ್ವ ದೇಶಕ್ಕೆ ಅತ್ಯಂತ ಅಪಾಯಕಾರಿ. ವೈಚಾರಿಕತೆಯ ವಿರುದ್ಧ ನಡೆಯುತ್ತಿರುವ ಕುತಂತ್ರಗಳಿಗೆ ಅವರಲ್ಲಿರುವ ಕೀಳರಿಮೆಯೇ ಕಾರಣ. ಇದರ ಹಿನ್ನೆಲೆಯಲ್ಲೇ ಎಂ.ಎಂ. ಕಲಬುರ್ಗಿಯವರ ಹತ್ಯೆ ನಡೆದಿದೆ ಎಂದು ಅವರು ಒತ್ತಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಚಿಂತಕ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಬಸವಣ್ಣ, ಬುದ್ಧ, ಅಂಬೇಡ್ಕರ್, ಪೆರಿಯಾರ್, ನಾರಾಯಣಗುರುಗಳು ಆಯಾ ಕಾಲಘಟ್ಟದಲ್ಲಿ ಅಸಹಿಷ್ಣುತೆ ವಿರುದ್ಧವೇ ಹೋರಾಟ ಮಾಡಿದವರು. ಆದರೆ ಈಗ ಅಸಹಿಷ್ಣುತೆಯ ವಿರುದ್ಧದ ಹೋರಾಟವನ್ನು ಧಮನಿಸಲು ಪ್ರಭುತ್ವವೇ ಬೆಂಗಾವಲಾಗಿ ನಿಂತಿದೆ. ಸಂವಿಧಾನೇತರ ಶಕ್ತಿಗಳು ದೇಶದ ಜನಪ್ರತಿನಿಧಿಗಳನ್ನೇ ಕೈಗೊಂಬೆಯನ್ನಾಗಿ ಮಾಡಿ ಆಡಳಿತ ನಡೆಸುತ್ತಿವೆ. ಇದು ಅತ್ಯಂತ ಅಪಾಯಕಾರಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com