
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಮತ್ತು ಕುಂದಾಪುರ ಅಮೃತ ಮಹಲ್ ಕಾವಲ್ ನಲ್ಲಿರುವ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರ(ಬಿಎಆರ್‍ಸಿ)ದಲ್ಲಿ ಮೂಲ ಸೌಲಭ್ಯಗಳ ಕಾಮಗಾರಿಗಳು ನಡೆಯುತ್ತಿವೆಯೇ ವಿನಾ ಹೈಡ್ರೋಜನ್ ಬಾಂಬ್ ತಯಾರಿಕೆಯಂಥ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಸ್ಪಷ್ಟಪಡಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಚಳ್ಳಕೆರೆ ತಾಲೂಕಿನಲ್ಲಿ ಭಾರತೀಯ ವಿಜ್ಞಾನ ಕೇಂದ್ರ (ಐಐಎಸ್‍ಸಿ), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ರಕ್ಷಣಾ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ), ಬಾಬಾ ಅಣುಶಕ್ತಿ ಸಂಶೋಧನಾ ಸಂಸ್ಥೆ (ಬಿಎಆರ್‍ಸಿ), ಸೋಲಾರ್ ಪಾರ್ಕ್‍ಗೆ ಸರ್ಕಾರ ಭೂಮಿ ನೀಡಿದೆ. ಇಲ್ಲಿ ನಡೆಯುವ ಎಲ್ಲ ಚಟುವಟಿಕೆಗಳು ಸಂಶೋಧನೆ ಮತ್ತು ತರಬೇತಿಗೆ ಸಂಬಂಧಿಸಿದ್ದು. ನಾಯಕನಹಟ್ಟಿ ಸಮೀಪದಲ್ಲಿ ಎಲ್ಲ ವಿಜ್ಞಾನ ಸಂಸ್ಥೆಗಳ ನೌಕರರಿಗೆ ವಸತಿ ೇಗೃಹಗಳನ್ನು ನಿರ್ಮಿಸಲಾಗುತ್ತಿದೆ. ಇದನ್ನು ಹೊರತುಪಡಿಸಿ, ಅಣು ಬಾಂಬ್ ತಯಾರಿಕೆ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂದರು.
ಐಐಎಸ್‍ಸಿಯಲ್ಲಿ ಹೈಸ್ಕೂಲು, ಕಾಲೇಜು ಶಿಕ್ಷಕರಿಗೆ ವಿಜ್ಞಾನ ತರಬೇತಿ ನೀಡಲಾಗುತ್ತಿದೆ. ವಿಜ್ಞಾನದ ಬೇರೆ ಬೇರೆ ವಿಭಾಗದ ಸಂಪನ್ಮೂಲ ವ್ಯಕ್ತಿಗಳು ರಾಜ್ಯದ ಎಲ್ಲ ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ. ಇನ್ನುಳಿದ ಸಂಸ್ಥೆಗಳು ಕೇವಲ ಕಾಂಪೌಂಡ್ ರಚಿಸಿಕೊಂಡು, ಒಳಭಾಗದಲ್ಲಿ ರಸ್ತೆ, ನೀರಿನಂಥ ಮೂಲ ಸೌಲಭ್ಯ ಕಲ್ಪಿಸುವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ, ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತಹ ಯಾವುದೇ ಚಟುವಟಿಕೆಗಳು ನಡೆಯುತ್ತಿರುವುದಾಗಲಿ, ನಡೆದಿರುವ ಉದಾಹರಣೆಗಳು ಖಂಡಿತ ಇಲ್ಲ ಎಂದು ಹೇಳಿದರು.
Advertisement