
ಬೆಂಗಳೂರು: ಪ್ರಮಾಣ ಪತ್ರ ಖಚಿತಪಡಿಸಿಕೊಳ್ಳುವ ಪ್ರಕ್ರಿಯೆ ಬೇಡ... ಕಚೇರಿಯಲ್ಲಿ ಸರ್ವರ್ ಪ್ರಾಬ್ಲಂ ಇದೆ... ಸರಿಯಾದ ಸ್ವೀಕೃತಿ ಪ್ರತಿ ಇಲ್ಲ. ಅದಕ್ಕೊಂದು ಸೂಕ್ತ ವ್ಯವಸ್ಥೆ ಮಾಡಿ... ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿದೆ. ಹೀಗಾಗಿ ಕೆಲಸಗಳು ಬೇಗ ಆಗುತ್ತಿಲ್ಲ. ಹೀಗೆ ಹತ್ತಾರು ಸಮಸ್ಯೆಗಳು ಕೇಳಿಬಂದಿದ್ದು ಸಾರಿಗೆ ಇಲಾಖೆಯ ಅದಾಲತ್‍ನಲ್ಲಿ. ರಾಜಾಜಿನಗರ ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆಯೋಜಿಸಿದ್ದ ಸಾರಿಗೆ ಅದಾಲತ್‍ನಲ್ಲಿ ಸಮಸ್ಯೆಗಳ ಸುರಿಮಳೆಯನ್ನು ಅಧಿಕಾರಿಗಳು ಎದುರಿಸಬೇಕಾಯಿತು.
ಚಾಲನಾ ಪರವಾನಗಿ ಪಡೆಯಲು 8ನೇ ತರಗತಿ ಉತ್ತೀರ್ಣದ ಪ್ರಮಾಣ ಪತ್ರ ಪರಿಶೀಲನೆ ಮಾಡಬೇಡಿ. ಹಾಗೆಯೇ ಪರವಾನಗಿ ನೀಡಿ. ನೀವು ಶಿಕ್ಷಣ ಇಲಾಖೆಗೆ ಕಳುಹಿಸಿ, ನಂತರ ಅವರು ದೃಢೀಕರಿಸಿದ ಮೇಲೆ ನಮಗೆ ಪರವಾನಗಿ ನೀಡುತ್ತೀರಾ. ಈ ಪರಿಶೀಲನೆ ಪ್ರಕ್ರಿಯೆಗೆ ಸುಮಾರು ಸಮಯ ಬೇಕಾಗುತ್ತದೆ. ಇದರಿಂದ ನಮಗೆ ಸರಿಯಾದ ವೇಳೆಗೆ ಪರವಾನಗಿ ಸಿಗುವುದಿಲ್ಲ. ಗ್ರೀನ್ ಆಟೋಗಳನ್ನು ಖರೀದಿ ಮಾಡಲು ಕೊಡುವ ಸಬ್ಸಿಡಿ ಪ್ರಕ್ರಿಯೆ ಆದಷ್ಟು ಬೇಗ ಪ್ರಾರಂಭಿಸಬೇಕು ಎಂದು ಆಟೋ ಚಾಲಕರು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಾರಿಗೆ ಇಲಾಖೆ ಅಧಿಕಾರಿ ಮೂರ್ತಿ, ಪ್ರಮಾಣ ಪತ್ರ ಪರಿಶೀಲಿಸದಿದ್ದರೆ ಕಾನೂನು ಉಲ್ಲಂಘನೆಯಾಗುತ್ತದೆ. ಇದಕ್ಕೆ ಯಾರೂ ಆಸ್ಪದ ಕೊಡಬಾರದು. ಆದಷ್ಟು ಬೇಗ ಪ್ರಮಾಣ ಪತ್ರಪರಿಶೀಲನೆ ಪ್ರಕ್ರಿಯೆ ಮುಗಿಸಲಾಗುವುದು. ಇನ್ನು ಸಬ್ಸಿಡಿ ಬಗ್ಗೆ ಇಲಾಖೆಗೆ ಬಂದಿರುವ ಅರ್ಜಿಗಳನ್ನು ಕಳುಹಿಸಿದ್ದೇವೆ. ಪರಿಶೀಲಿಸಿ ಬಂದ ಅರ್ಜಿಗಳ ಪ್ರಕಾರ ವಿತರಣೆ ಮಾಡುತ್ತೇವೆ ಎಂದರು.
ಇನ್ನು ಕಚೇರಿಯಲ್ಲಿರುವ ಸಿಬ್ಬಂದಿ ಕೊರತೆ ಹಾಗೂ ಸರ್ವರ್ ಪ್ರಾಬ್ಲಂ ಹಾಗೂ ಸ್ವೀಕೃತಿ ಪತ್ರದ ಬಗ್ಗೆ ಪ್ರಸ್ತಾಪಿಸಿದ ನಾಗರಿಕರೊಬ್ಬರು, ಕಚೇರಿಯಲ್ಲಿ ಯಾವಾಗಲು ಸಿಬ್ಬಂದಿಯ ಕೊರತೆ ಎಂದು ಹೇಳುತ್ತೀರಾ. ಸರ್ವರ್ ಪ್ರಾಬ್ಲಂ ಇದೆ ಹಾಗಾಗಿ ತಡವಾಗುತ್ತಿದೆ ಎಂದು ಸಮಜಾಯಿಷಿ ಕೊಡುತ್ತೀರಾ. 10 ನಿಮಿಷದ ಕೆಲಸಕ್ಕಾಗಿ ಸಾರ್ವಜನಿಕರು ದಿನಗಟ್ಟಲೇ ನಿಂತುಕೊಳ್ಳಲು ಸಾಧ್ಯವಿಲ್ಲ. ಅಲ್ಲಲ್ಲೇ ಅರ್ಜಿಗಳ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ನಿಮ್ಮ ಅಧಿಕಾರಿಗಳು ಸ್ವೀಕೃತಿ ಪತ್ರ ನೀಡುತ್ತಾರೆ. ಅದು ಒಂದು ಖಾಲಿ ಪೇಪರ್ ಮೇಲೆ ಮುದ್ರೆ ಒತ್ತಿ ಕೊಡುತ್ತಾರೆ. ಅದನ್ನು ನೋಡಿದ್ರೆ ಟ್ರಾಫಿಕ್ ಇನ್ಸ್ ಪೆಕ್ಟರ್ ಗಳು ನಕಲಿ ಪತ್ರ ಎಂದು ತಿರಸ್ಕರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement