ಉಪ ಲೋಕಾಯುಕ್ತ ಪದಚ್ಯುತಿ ವಿಚಾರಕ್ಕೆ ಹೊಸ ತಿರುವು

ಉಪಲೋಕಾಯುಕ್ತ ಸುಭಾಷ್ ಬಿ.ಆಡಿ ಪದಚ್ಯುತಿ ವಿಚಾರ ಈಗ ಮತ್ತೊಂದು ತಿರುವು ತೆಗೆದುಕೊಂಡಿದ್ದು, ನಿರ್ಣಯವನ್ನು ಸ್ಪೀಕರ್ ಅಂಗೀಕರಿಸಿಲ್ಲ ಎಂದು...
ಸುಭಾಷ್ .ಬಿ ಆಡಿ
ಸುಭಾಷ್ .ಬಿ ಆಡಿ

ಬೆಂಗಳೂರು: ಉಪಲೋಕಾಯುಕ್ತ ಸುಭಾಷ್ ಬಿ.ಆಡಿ ಪದಚ್ಯುತಿ ವಿಚಾರ ಈಗ ಮತ್ತೊಂದು ತಿರುವು ತೆಗೆದುಕೊಂಡಿದ್ದು, ನಿರ್ಣಯವನ್ನು ಸ್ಪೀಕರ್ ಅಂಗೀಕರಿಸಿಲ್ಲ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸುಳ್ಳು ಮಾಹಿತಿ ನೀಡಿದ್ದಾರೆಯೇ? ಎಂಬ ಅನುಮಾನ
ಸೃಷ್ಟಿಯಾಗಿದೆ.

ಸ್ಪೀಕರ್ ಪದಚ್ಯುತಿ ನಿರ್ಣಯ ಅಂಗೀಕರಿಸಿಲ್ಲ ಎಂದು ಜಯಚಂದ್ರ ಹೇಳಿಕೆ ನೀಡಿದ ಮರುದಿನವೇ ಪ್ರತಿಪಕ್ಷ ಬಿಜೆಪಿ ಇದಕ್ಕೆ ತಿರುಗೇಟು ನೀಡಿದ್ದು, ನವೆಂಬರ್ 27ರಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮಂಡಿಸಿದ ಉಪಲೋಕಾಯುಕ್ತ ಪದಚ್ಯುತಿ ನಿರ್ಣಯ ಸಂದರ್ಭದ ಕಲಾಪ ನಡಾವಳಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ನಿರ್ಣಯ ಅಂಗೀಕಾರಗೊಂಡಿದೆ ಎಂಬ ಅಂಶವೂ ಸೇರಿದೆ.

ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ದಾಖಲೆ ಬಿಡುಗಡೆಗೊಳಿಸಿದ ಬಿಜೆಪಿ ವಕ್ತಾರ ಸುರೇಶ್ ಕುಮಾರ್, ಉಪಲೋಕಾಯುಕ್ತ ಪದಚ್ಯುತಿ ನಿರ್ಣಯ ಅಂಗೀಕಾರಗೊಂಡಿಲ್ಲ ಎಂದು ಸುಳ್ಳು ಹೇಳುವ ಮೂಲಕ ಕಾನೂನು ಸಚಿವ ಟಿ.ಬಿ.ಜಯಚಂದ್ರ ಸದನದ ಹಕ್ಕುಚ್ಯುತಿ ಎಸಗಿದ್ದಾರೆ ಎಂದು ಆಪಾದಿಸಿದ್ದಾರೆ. ಜಯಚಂದ್ರ ಅವರ ವಿರುದ್ದ ಹಕ್ಕು ಚ್ಯುತಿ ನಿರ್ಣಯ ಮಂಡಿಸುವ ಬಗ್ಗೆ ಪಕ್ಷದ ವಲಯದಲ್ಲಿ ಚಿಂತನೆ ನಡೆಯುತ್ತಿದೆ.

ವಿಧಾನ ಪರಿಷತ್ ಚುನಾವಣೆ ಮುಕ್ತಾಯಗೊಂಡ ಬಳಿಕ ಈ ಬಗ್ಗೆ ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದ ಸುರೇಶ್ ಕುಮಾರ್ ನಿರ್ಣಯ ಅಂಗೀಕಾರಗೊಂಡಿದೆ (ಮೋಶನ್ ಅಡ್ಮಿಟೆಡ್) ಎಂದು ಸ್ಪೀಕರ್ ಅವರು ಹೇಳಿರುವ ಕಲಾಪ ದಾಖಲೆಯನ್ನು ಬಿಡುಗಡೆಗೊಳಿಸಿದರು. ಇದು ಕಲಾಪದ ದಾಖಲೆ. ಸಚಿವಾಲಯದ ಮೇಲ್ವಿಚಾರಕರೂ ಆಗಿರುವ ಸಂಸದೀಯ ಸಚಿವ ಜಯಚಂದ್ರ ಅವರು ಈ ವಿಚಾರ ಕಲಾಪ ದಾಖಲೆಯಲ್ಲಿ ಇಲ್ಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.

ಸರ್ಕಾರ ಸದನದ ಸೃಷ್ಟಿ ಎಂಬುದನ್ನು ಅವರು ಮೊದಲು ಅರಿತುಕೊಳ್ಳಬೇಕು. ಸರ್ಕಾರ ಸದನವನ್ನು ಹಾಗೂ ಕಲಾಪ ನಡೆಯನ್ನು ಬೊಂಬೆಯಂತೆ ಬಳಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನವೆಂಬರ್ 27ರಂದು ಶಾಸಕ ತನ್ವೀರ್ ಸೇಠ್ ಅವರು ಉಪ ಲೋಕಾಯುಕ್ತರ ಪದಚ್ಯುತಿ ನಿರ್ಣಯ ಮಂಡಿಸಿದರು. ಇದಾದ ಬಳಿಕ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಈ ನಿರ್ಣಯದ ಜತೆಗೆ ಇರುವ ದಾಖಲೆ ಪತ್ರವನ್ನು ನಾನು ಅಧ್ಯಯನ ಮಾಡಿದ್ದೇನೆ.

ಲೋಕಾಯುಕ್ತ ರಿಜಿಸ್ಟ್ರಾರ್, ತನಿಖಾಧಿಕಾರಿಗಳು, ಅಡ್ವೋಕೇಟ್ ಜನರಲ್ ಅವರ ಜತೆ ಚರ್ಚೆ ನಡೆಸಿದ್ದೇನೆ. ಲೋಕಾಯುಕ್ತ ಅಧಿಕಾರಿಗಳು ಹಾಗೂ ಡಿಪಿಎಆರ್‍ನಿಂದ ನಾನು ಮಾಹಿತಿ ಕೇಳಿದ್ದು. ಮೇಲ್ನೋಟಕ್ಕೆ ಮನದಟ್ಟಾಗಿರುವುದರಿಂದ ನಿರ್ಣಯ ಅಂಗೀಕಾರಗೊಂಡಿದೆ ಎಂದು ಹೇಳಿದ್ದಾರೆ. ಇದು ಸದನದ ದಾಖಲೆಯಾಗಿದೆ. ಸುಳ್ಳು ಮಾಹಿತಿಗಳನ್ನು ನೀಡುವ ಅನಿವಾರ್ಯತೆ ನನಗೆ ಇಲ್ಲ. ಉಪಲೋಕಾಯುಕ್ತರ ಪದಚ್ಯುತಿ ನಿರ್ಣಯದ ದಿನ ಕಲಾಪ ದಾಖಲೆ ನೀಡುವಂತೆ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿಯೇ ತೆಗೆದುಕೊಂಡಿದ್ದೇನೆ ಎಂದು ಹೇಳಿದರು. ಹಾಗಾದರೆ ಸ್ಪೀಕರ್ ಈ ರೀತಿ ಏಕೆ ಹೇಳಿರಬಹುದೆಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಗೋಡು ತಿಮ್ಮಪ್ಪ ಅವರು ಹಿರಿಯರು. ಅನುಭವಿಗಳು ಮಾತ್ರವಲ್ಲ ಕಾನೂನು ಜ್ಞಾನ ಇರುವಂಥವರು. ಬಹುಶಃ ಈ ನಿರ್ಣಯ ಅಂಗೀಕರಿಸುವಂತೆ ಪಕ್ಷದಿಂದ ಅವರನ್ನು ಒಪ್ಪಿಸಿರಬಹುದು. ಆದರೆ ಅವರಿಗೆ ಆ ರೀತಿ ಮಾಡುವುದಕ್ಕೆ ಇಷ್ಟವಿಲ್ಲದೇ ಇದ್ದಿರಬಹುದು ಎಂದು ಅಭಿಪ್ರಾಯಪಟ್ಟರು.

ಸುಳ್ಳು ಹೇಳಿದರೆ ಕಾನೂನು ಸಚಿವ?
ಹಾಗಾದರೆ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜಯಚಂದ್ರ ಉಪಲೋಕಾಯುಕ್ತರ ಪದಚ್ಯುತಿ ವಿಚಾರದಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆಯೇ? ಸುರೇಶ್ ಕುಮಾರ್ ಅವರು ಬಹಿರಂಗಪಡಿಸಿರುವ ದಾಖಲೆ ಪ್ರಕಾರ ಜಯಚಂದ್ರ ಅವರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಎಡವಿ ಬಿದ್ದಂತೆ ತೋರುತ್ತದೆ. ನಿರ್ಣಯ ಅಂಗೀಕಾರವಾಗಿಲ್ಲ ಎಂಬ ದಾಖಲೆಯನ್ನು ಜಯಚಂದ್ರ ಅವರು ಸಿದ್ದಪಡಿಸಿಟ್ಟ್ಟುಕೊಂಡಿದ್ದಾರೆಯೇ ? ಇದು ಸದನ ಕಲಾಪಕ್ಕೆ ಸರ್ಕಾರ ಮಾಡಿದ ಅಪಚಾರವಲ್ಲವೇ ಎಂಬ ಚರ್ಚೆಗಳು ಈಗ ಆರಂಭವಾಗಿದೆ. ಸೋಮವಾರ ಸ್ಪೀಕರ್ ಕಚೇರಿಯಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜಯಚಂದ್ರ ನಿರ್ಣಯ ಅಂಗೀಕಾರವಾಗಿಲ್ಲ ಎಂಬ ದಾಖಲೆಯನ್ನು ಓದಿದ್ದಾರೆ. ಹಾಗಾದರೆ ಯಾರ ಬಳಿ ಇರುವ ದಾಖಲೆ ಸತ್ಯ ? ಸುರೇಶ್‍ಕುಮಾರ್ ಬಳಿ ಇರುವ ದಾಖಲೆ ವಾಸ್ತವದ್ದೋ ? ಅಥವಾ ಜಯಚಂದ್ರ ನಕಲಿ ದಾಖಲೆ ಸೃಷ್ಟಿಸಿದರೋ ? ಈ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com