ಯಂತ್ರಕ್ಕೆ ದಾಸರಾಗುತ್ತಿರುವುದು ಶೋಚನೀಯ: ಪುಸ್ತಕ ಬಿಡುಗಡೆಯಲ್ಲಿ ಪ್ರಸನ್ನ

ಪಾಪಪ್ರಜ್ಞೆಯಿಂದ ಮನುಷ್ಯ ನರಳುತ್ತಾ ಸುಲಭ ಜೀವನದ ಕಡೆ ಸಾಗುವುದಲ್ಲದೆ, ಪ್ರಶ್ನೆ ಮಾಡದೆ ಬದುಕುತ್ತಿರುವುದು ದುರಂತವೆನಿಸಿದೆ ಎಂದು ಖ್ಯಾತ ರಂಗ ನಿರ್ದೇಶಕ ಪ್ರಸನ್ನ ಆತಂಕ ವ್ಯಕ್ತಪಡಿಸಿದರು.
ಶೂದ್ರರಾಗೋಣ ಬನ್ನಿ ಪುಸ್ತಕ ಬಿಡುಗಡೆ
ಶೂದ್ರರಾಗೋಣ ಬನ್ನಿ ಪುಸ್ತಕ ಬಿಡುಗಡೆ

ಬೆಂಗಳೂರು: ಪಾಪಪ್ರಜ್ಞೆಯಿಂದ ಮನುಷ್ಯ ನರಳುತ್ತಾ ಸುಲಭ ಜೀವನದ ಕಡೆ ಸಾಗುವುದಲ್ಲದೆ, ಪ್ರಶ್ನೆ ಮಾಡದೆ ಬದುಕುತ್ತಿರುವುದು ದುರಂತವೆನಿಸಿದೆ ಎಂದು ಖ್ಯಾತ ರಂಗ ನಿರ್ದೇಶಕ ಪ್ರಸನ್ನ ಆತಂಕ ವ್ಯಕ್ತಪಡಿಸಿದರು.
ಭಾರತ ಯಾತ್ರಾ ಕೇಂದ್ರ ಹಾಗೂ ದೇಸಿ ಸಂಸ್ಥೆಯ ಸಹಯೋಗದೊಂದಿಗೆ ಕನ್ನಡ ಚಿತ್ರಕಲಾ ಪರಿಷತ್‍ನಲ್ಲಿ ಭಾನುವಾರ ಆಯೋಜಿಸಿದ್ದ ತಮ್ಮ `ಶೂದ್ರರಾಗೋಣ ಬನ್ನಿ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದೆ ಉಪಕರಣದ ಬಳಕೆ ಮನುಷ್ಯನಿಗೆ ಸಭ್ಯತೆ ಸಂಕೇತವಾಗಿತ್ತು. ಆದರೆ ಆಧುನಿಕ ಯುಗದಲ್ಲಿ ಯಂತ್ರಗಳ ಅತಿಬಳಕೆ ಮನುಷ್ಯನಿಗೆ ಪ್ರತಿಷ್ಠೆಯಾಗಿ ರೂಪುಗೊಂಡಿದೆ.
ಯಂತ್ರಗಳ ಬಳಕೆಯಿಂದಾಗಿ ಸಮಾಜದಲ್ಲಿ ವರ್ಗವಾಗಿ ರೂಪುಗೊಂಡಿದ್ದರ ಪರಿಣಾಮ ಜಮೀನ್ದಾರ ಹಾಗೂ ಶ್ರಮಿಕ ವರ್ಗ ಎಂದು ಮನುಷ್ಯರಲ್ಲೇ ಅಂತರ ಸೃಷ್ಟಿಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಸರಳ ಜೀವನ ಒಪ್ಪಿಕೊಳ್ಳದೇ, ಸುಲಭ ಜೀವನವನ್ನು ಪ್ರಶ್ನೆ ಮಾಡದೇ ಸ್ವೀಕರಿಸುತ್ತಿರುವುದರಿಂದ ಮನುಷ್ಯ ಪಾಪಪ್ರಜ್ಞೆಯಿಂದ ಬಳಲುವಂತಾಗಿದೆ. ನಿಸರ್ಗದ ಸಕಾಲ ಪ್ರಾಣಿ-ಪಕ್ಷಿಗಳು ತಮ್ಮ ಮಿತಿಯೊಳಗೆ ಇರುವ ಉಪಕರಣ ಬಳಸಿ ಸ್ವಾವಲಂಬಿ ಯಾಗಲು ಪ್ರಯತ್ನಿಸಿದರೆ ಮನುಷ್ಯ ಹೆಚ್ಚೆಚ್ಚು ಯಂತ್ರಗಳನ್ನು ಬಳಸುವ ಮೂಲಕ ಉಪಕರಣಗಳಿಗೆ ದಾಸರಾಗುತ್ತಿರುವುದು ಶೋಚನಿಯ ಎಂದರು.
ಸತ್ಯ ತಿಪ್ಪೆಯ ಮೇಲಿನ ವಸ್ತು: ಸತ್ಯವನ್ನು ಎದುರಿಸುವಾಗ ಪೂರ್ಣಸತ್ಯವನ್ನು ಎದುರಿಸ ಬೇಕೇ ಹೊರತು ಅರ್ಧ ಸತ್ಯದಿಂದಲ್ಲ. ಸತ್ಯ ತಿಪ್ಪೆ ಮೇಲಿನ ವಸ್ತುವಾಗಿದೆ. ಸತ್ಯಕ್ಕೆ ಪ್ರತಿವಾದದ್ದೂ ಸುಳ್ಳಲ್ಲ, ಅರ್ಧಸತ್ಯ. ಇತ್ತೀಚಿನ ವರ್ಷಗಳಲ್ಲಿ ಚಳವಳಿ ಹಾಗೂ ಹೋರಾಟಗಾರರಲ್ಲಿ ಪೂರ್ಣ ಸತ್ಯವನ್ನು ತಿಳಿಯದೆ ಅರ್ಧಸತ್ಯ ಅರಿತಿದ್ದರಿಂದ ಇಂದಿನ ಬಹುತೇಕ ಚಳವಳಿಗಳು ಫಲವಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.
ಸುಲಭ ಜೀವನ ಬೇರೆ, ಸರಳ ಜೀವನ ಬೇರೆ. ಸ್ವಯಂಚಾಲಿತ ಯಂತ್ರಗಳು ಬಂದ ನಂತರ ನಾಗರಿಕ ಬದುಕು ಬುಡಮೇಲಾಗಿದೆ. ಶ್ರಮದಿಂದ ತನ್ನನ್ನು ತಾನು ಸೃಷ್ಟಿಸಿಕೊಳ್ಳಬೇಕು. ಶ್ರಮದ ಹೊರತಾಗಿ ಮನುಷ್ಯನಿಗೆ ಅಸ್ತಿತ್ವವಿಲ್ಲ. ಯಂತ್ರ ಎಂಬ ರಾಕ್ಷಸನನ್ನು ಕೊಲ್ಲಬೇಕಾದರೆ, ಮೊದಲು ನಮ್ಮಲ್ಲಿರುವ ಕೊಳ್ಳುಬಾಕ ಸಂಸ್ಕೃತಿವೆಂಬ ಪ್ರಾಣಪಕ್ಷಿಯನ್ನು ಕೊಲ್ಲಬೇಕು. ಇಲ್ಲದಿದ್ದರೆ ಯಂತ್ರ ರಾಕ್ಷಸ ಸಾಯುವುದಿಲ್ಲ ಎಂದು ವ್ಯಾಖ್ಯಾನಿಸಿದರು.
ನೈತಿಕ ಪ್ರಶ್ನೆ, ಯಂತ್ರಗಳ ಕಳಚುವಿಕೆ, ಸಹಕಾರ ತತ್ವ ಹಾಗೂ ಶ್ರಮ ಜೀವನ ದಿಕ್ಕಿನತ್ತ ಸಾಗುವ ಪಾರಂಪರಿಕ ಲಕ್ಷಣಗಳು ಈ ಕೃತಿಯಲ್ಲಿ ಕಾಣಬಹುದು. ಗಾಂಧಿವಾದ ಹಾಗೂ ಅದರ ವಿಸ್ತರಣೆಯನ್ನು ಸ್ವನುಭವಗಳ ಮೂಲಕ ಕಾಯಕ ವೃತ್ತಿಗೆ ಮಹತ್ವ ಹಾಗೂ ಪುನರ್ ಜಾಗೃತಿ ಕುರಿತು ಸವಿಸ್ತಾರವಾಗಿ ಲೇಖಕರು ಅಕ್ಷರ ರೂಪಕ್ಕೆ ಇಳಿಸಿದ್ದಾರೆ ಎಂದು ಲೇಖಕರು ನುಡಿದರು. ಇದಕ್ಕೂ ಮುನ್ನ ಖ್ಯಾತ ಕವಿ ಅಗ್ರಹಾರ ಕೃಷ್ಣಮೂರ್ತಿ ಅವರು ಕೃತಿ ಬಿಡುಗಡೆ ಮಾಡಿದರು. ಕೃತಿ ಕುರಿತು ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಮಾತನಾಡಿದರು. ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಅಧ್ಯಕ್ಷತೆ ವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com