ಕೌಶಿಕ್ ಮುಖರ್ಜಿ ಅವಧಿ 31ಕ್ಕೆ ಮುಕ್ತಾಯ

ರಾಜ್ಯ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕೆನ್ನುವ ಬಗ್ಗೆ ಮಂಗಳವಾರ ಅಂತಿಮ ನಿರ್ಧಾರವಾಗುವ ಸಾಧ್ಯತೆ ಇದೆ....
ಕೌಶಿಕ್ ಮುಖರ್ಜಿ
ಕೌಶಿಕ್ ಮುಖರ್ಜಿ

ಬೆಂಗಳೂರು: ರಾಜ್ಯ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕೆನ್ನುವ ಬಗ್ಗೆ ಮಂಗಳವಾರ ಅಂತಿಮ ನಿರ್ಧಾರವಾಗುವ ಸಾಧ್ಯತೆ ಇದೆ. ಆದರೆ ಹಿರಿಯ ಐಎಎಸ್ ಅಧಿಕಾರಿಗಳಲ್ಲೇ ಪೈಪೋಟಿ ಬಿರುಸಾಗಿದ್ದು, ಇದೀಗ ಇಬ್ಬರ ಹೆಸರು ಅಂತಿಮ ಹಂತ ತಲುಪಿದೆ. ಅವರಲ್ಲಿ ಯಾರು ಮುಖ್ಯ ಕಾರ್ಯದರ್ಶಿಯಾಗುತ್ತಾರೆ ಎನ್ನುವುದು ಮಂಗಳವಾರ ಅಥವಾ ಬುಧವಾರದ ವೇಳೆ ಸ್ಪಷ್ಟವಾಗಲಿದೆ.

ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ಕಾರ್ಯಗಳ ಗುಣಗಾನ ಮಾಡಲಾಗಿದ್ದು, ಅವರಿಗೆ ಸಂಪ್ರದಾಯದಂತೆ ಅಭಿನಂದನೆ ಸಲ್ಲಿಸಲಾಗಿದೆ. ಇದರೊಂದಿಗೆ ಅವರನ್ನು ಮತ್ತೆ ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗುತ್ತದೆ ಎನ್ನುವ ಊಹಾ ಪೋಹಗಳಿಗೆ ತೆರೆ ಬಿದ್ದಿದೆ. ಆದರೆ ಮುಂದಿನ ಮುಖ್ಯ ಕಾರ್ಯದರ್ಶಿ ಯಾರು ಎನ್ನುವ ವಿಚಾರವಾಗಿ ಮಾತ್ರ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ.

ಮುಖ್ಯ ಕಾರ್ಯದರ್ಶಿ ಹುದ್ದೆಗೆ ಯಾವ ಹಿರಿಯ ಐಎಎಸ್ ಅಧಿಕಾರಿಯನ್ನ ಆಯ್ಕೆ ಮಾಡಬೇಕೆನ್ನುವ ಅಧಿಕಾರವನ್ನು ಎಲ್ಲಾ ಸಚಿವರು ಈಗಾಗಲೇ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬಿಟ್ಟಿದ್ದಾರೆ. ಈಗಿನ ಸಿಎಸ್ ಕೌಶಿಕ್ ಮುಖರ್ಜಿ ಅವರ ಮುಂದುವರಿದ ಅವಧಿ ಕೂಡ ಡಿ.31ಕ್ಕೆ ಅಂತ್ಯವಾಗುತ್ತಿರುವುದರಿಂದ ಸರ್ಕಾರ ಇನ್ನೆರಡು ದಿನಗಳಲ್ಲಿ ಮುಂದಿನ ಸಿಎಸ್ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸಿಎಸ್ ಹುದ್ದೆಯ ವ್ಯಕ್ತಿಯನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ಬುಧವಾರದ ವೇಳೆಗೆ ನೂತನ ಮುಖ್ಯ ಕಾರ್ಯದರ್ಶಿ ಹೆಸರು ಪ್ರಕಟಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

1981ರ ಬ್ಯಾಚ್‍ನ ಐಎಎಸ್ ಅಧಿಕಾರಿ ಕೆ. ರತ್ನಪ್ರಭ ಸದ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಇವರನ್ನೇ ಮುಖ್ಯ ಕಾರ್ಯದರ್ಶಿ ಮಾಡಬೇಕೆಂದು ಸರ್ಕಾರದ ಮಟ್ಟದಲ್ಲಿ ಒತ್ತಡಗಳು ಹೆಚ್ಚಾಗುತ್ತಿವೆ. ಇದೇ ಹುದ್ದೆಗೆ ಗೃಹ ಇಲಾಖೆ ಹೆಚ್ಚುವರಿಕಾರ್ಯದರ್ಶಿಕೆ.ಪಟ್ಟನಾಯಕ್(1982) ಪ್ರಯತ್ನಿಸುತ್ತಿದ್ದು, ಹಿಂದುಳಿದ ವರ್ಗಕ್ಕೆ ಸೇರಿದ ಇವರನ್ನು ಸಿಎಸ್ ಮಾಡಲೇಬೇಕೆನ್ನುವ ಬಗ್ಗೆಯೂ ಒತ್ತಡವಿದೆ. ಇದರೊಂದಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಉಮೇಶ್(1981) ಅವರ ಹೆಸರೂ ಹೆಚ್ಚು ಚಾಲ್ತಿಯಲ್ಲಿದೆ. ಸದ್ಯದ ಮಟ್ಟಿಗೆ ರತ್ನಪ್ರಭಾ ಮತ್ತು ಪಟ್ಟಾನಾಯಕ್ ಅವರ ಹೆಸರು ಅಂತಿಮ ಹಂತಕ್ಕೆ ಬಂದಿದ್ದು, ಇವರಿಬ್ಬರಲ್ಲಿ ಮುಖ್ಯ ಕಾರ್ಯದರ್ಶಿ ಯಾರಾಗುತ್ತಾರೆ ಎಂದು ಮುಖ್ಯಮಂತ್ರಿ ತೀರ್ಮಾನಿಸಲಿದ್ದಾರೆ ಎಂದು ಸಚಿವರೊಬ್ಬರು ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com