ಕಬ್ಬು ಕಾರ್ಖಾನೆಗಳ ಬಾಕಿ ವಸೂಲಿಗೆ ರಾಜಿ ಸೂತ್ರ

ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಿರುವ ಬಾಕಿ ಮೊತ್ತದ ಸಂಬಂಧ ರಾಜ್ಯ ಸರ್ಕಾರ ಸಂಧಾನ ಸೂತ್ರವೊಂದನ್ನು ಮುಂದಿಟ್ಟಿದೆ. ....
ಕಬ್ಬು
ಕಬ್ಬು

ಬೆಂಗಳೂರು: ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಿರುವ ಬಾಕಿ ಮೊತ್ತದ ಸಂಬಂಧ ರಾಜ್ಯ ಸರ್ಕಾರ ಸಂಧಾನ ಸೂತ್ರವೊಂದನ್ನು ಮುಂದಿಟ್ಟಿದೆ. ಅದಕ್ಕೆ ಬಹುತೇಕ  ಫ್ಯಾಕ್ಟರಿಗಳು ಸಮ್ಮತಿಸಿರುವುದರಿಂದ ಆದಷ್ಟು ಬೇಗ ಕಬ್ಬು ಬೆಳೆಗಾರರಿಗೆ ಬಾಕಿ ಹಣ ಸಂದಾಯವಾಗುವ ಸಾಧ್ಯತೆಗಳಿವೆ. ರೈತರಿಗೆ ಪಾವತಿಸಬೇಕಿದ್ದ ಬಾಕಿ ಹಣದ ಬಗ್ಗೆ ಸಕ್ಕರೆ ಕಾರ್ಖಾನೆಗಳು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ಸಕ್ಕರೆ ಕಾರ್ಖಾನೆಗಳ ಗೋದಾಮುಗಳನ್ನು ಜಪ್ತಿ ಮಾಡಿ ಸಕ್ಕರೆ ಹರಾಜು ಪ್ರಕ್ರಿಯೆಗೆ ಮುಂದಾಗಿತ್ತು.

ಈ ಹಂತದಲ್ಲಿ ಜಿಲ್ಲಾ„ಕಾರಿಗಳ ಕ್ರಮಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ಅದನ್ನು ತೆರವುಗೊಳಿಸಿ ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳುವ ಸೂತ್ರವೊಂದನ್ನು ರಾಜ್ಯ ಸರ್ಕಾರ ಫ್ಯಾಕ್ಟರಿಗಳ ಮುಂದಿಟ್ಟಿದೆ. 36 ಸಕ್ಕರೆ ಕಾರ್ಖಾನೆಗಳು ಸಕ್ಕರೆ ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ ತಂದಿವೆ. ಆ ತಡೆಯಾಜ್ಞೆ ತೆರವಿಗೆ ಸರ್ಕಾರ ಪ್ರಯತ್ನಿಸುತ್ತಿದೆ. ಈ ಮಧ್ಯೆ ಸಂಧಾನ ಸೂತ್ರವೊಂದನ್ನು ಸಹ ರೂಪಿಸಲಾಗಿದೆ.

ಆಯಾಯಾ ಫ್ಯಾಕ್ಟರಿಗಳು ರೈತರಿಗೆ ಪಾವತಿಸಬೇಕಿರುವ ಮೊತ್ತವನ್ನಷ್ಟೇ ಸಕ್ಕರೆ ಹರಾಜಿನಿಂದ ಪಡೆದುಕೊಂಡು ಹೆಚ್ಚುವರಿಯಾಗಿ ಬರುವ ಹಣವನ್ನು ಸಕ್ಕರೆ ಕಾರ್ಖಾನೆಗಳಿಗೆ ನೀಡಲಾಗುವುದೆಂದು ಮನವರಿಕೆ ಮಾಡಿಕೊಡಲಾಗಿದೆ. ಅದಕ್ಕೆ ಬಹುತೇಕರು ಒಪ್ಪಿದ್ದಾರೆ ಎಂದು ಸಕ್ಕರೆ ಹಾಗೂ ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಬೆಂಗಳೂರಿನಲ್ಲಿಂದು ತಿಳಿಸಿದರು.

ರಾಜ್ಯದ ಎಲ್ಲಾ 64 ಸಕ್ಕರೆ ಕಾರ್ಖಾನೆಗಳು ಈ ವರ್ಷದ ಕಬ್ಬು ಅರೆಯುವ ಕೆಲಸ ಆರಂಭಿಸಿವೆ, ರೈತರೊಂದಿಗೆ ಅವರದೇ ಆದ ಒಪ್ಪಂದ ಮಾಡಿಕೊಂಡು ಕಬ್ಬು ಅರೆಯುವ ಕೆಲಸ ಶುರು ಮಾಡಿವೆ. ಆದರೆ ಕೇಂದ್ರ ಸರ್ಕಾರ ಟನ್‍ಗೆ ಕನಿಷ್ಟ 2300 ರು.ಗಳಂತೆ ನಿಗದಿಪಡಿಸಿರುವ ಎಫ್.ಆರ್.ಪಿ ದರವನ್ನು ಸಕ್ಕರೆ ಕಾರ್ಖಾನೆಗಳು ಕಡ್ಡಾಯವಾಗಿ ಪಾವತಿಸಬೇಕು.ಕೆಲವು ಕಡೆ ಇಳುವರಿ ಆಧಾರದ ಮೇಲೆ ಟನ್‍ಗೆ 2900 ರು. ಇರುತ್ತದೆ. ಸಕ್ಕರೆ ಬೆಲೆ ಕಡಿಮೆ ಇರುವುದರಿಂದ ಈಗ ಎಸ್‍ಎಪಿ ದರ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಡ್ಡಿ ಮನ್ನಾ ಅವಧಿ ಮಾರ್ಚ್ ಗೆ ಅಂತ್ಯ: ಬರ ಪರಿಸ್ಥಿತಿ, ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ ಬಡ್ಡಿ ಮನ್ನಾ ಯೋಜನೆ 2016ರ ಮಾರ್ಚಿಗೆ ಅಂತ್ಯಗೊಳ್ಳಲಿದೆ. ಈಗಾಗಲೇ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳ ಪಾವತಿಯನ್ನು ಒಂದು ವರ್ಷ ಮುಂದೂಡಲಾಗಿದೆ. ಇನ್ನು ಅಲ್ಪಾವಧಿ ಸಾಲವಾಗಿ ನೀಡಿರುವ ಬಡ್ಡಿರಹಿತ ಸಾಲವನ್ನು ವರ್ಷದೊಳಗೆ ಪಾವತಿಸಬೇಕು, ಇದಕ್ಕೆ ಯಾವುದೇ ವಿನಾಯಿತಿ ಇಲ್ಲ ಎಂದು ಸಹಕಾರ ಸಚಿವರು ಸ್ಪಷ್ಟಪಡಿಸಿದರು.

ಏಕ ಗವಾಕ್ಷಿ ಯೋಜನೆ: ಗೃಹ ನಿರ್ಮಾಣ ಸಹಕಾರ ಸಂಘಗಳು ನೇರವಾಗಿ ರೈತರಿಂದ ಭೂಮಿ ಖರೀದಿಸಿ ಬಡಾವಣೆ ಅಭಿವೃದ್ಧಿಪಡಿಸುವ ಸಂಬಂಧ ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲಿಯೂ ಏಕಗವಾಕ್ಷಿ ಯೋಜನೆ ಜಾರಿಗೆ ತರುವ ಸಂಬಂಧ ಮುಂದಿನ ಅಧಿವೇಶನದಲ್ಲಿ ಸಹಕಾರಿ ಕಾಯ್ದೆಗೆ ತಿದ್ದುಪಡಿ ತರಲು ವಿಧೇಯಕ ಮಂಡಿಸುವುದಾಗಿ ತಿಳಿಸಿದ ಅವರು ಸಕಾಲಕ್ಕೆ ನಿವೇಶನ ಹಂಚಿಕೆ ಮಾಡದಿದ್ದರೆ ಬಡ್ಡಿ ಪಾವತಿಸುವ ವ್ಯವಸ್ಥೆ ಬರಲಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com