
ಬೆಂಗಳೂರು: ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ನ್ಯಾ.ಡಾ.ಭಕ್ತವತ್ಸಲ ಅವರು ನೀಡಿರುವ ವರದಿ ಆಧರಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಆದೇಶ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಶ್ವವಿದ್ಯಾಲಯಗಳನ್ನು ಉಳಿಸಿ ವೇದಿಕೆ ಅಧ್ಯಕ್ಷ ಕೆ.ಎಸ್ ಶಿವರಾಮು ಆರೋಪಿಸಿದ್ದಾರೆ.
ಅವ್ಯವಹಾರದ ಕುರಿತು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಸೂಚನೆ ನೀಡಿ 2 ತಿಂಗಳು ಕಳೆದಿದೆ. ಆದರೆ ಅವ್ಯವಹಾರದ ಪ್ರಮುಖ ಸೂತ್ರಧಾರರಾಗಿರುವ ಮೈಸೂರು ವಿಶ್ವವಿದ್ಯಾಲಯದ ಹಾಲಿ ಕುಲಪತಿ ಪ್ರೊ.ಕೆ.ಎಸ್ ರಂಗಪ್ಪ ಮತ್ತು ಇತರ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ರಂಗಪ್ಪ ಅವರನ್ನು ಕುಲಪತಿಯಾಗಿ ಮುಂದುವರೆಸಲಾಗಿದೆ ಎಂದು ಶಿವರಾಮು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು ಪ್ರಧಾನಿ ಮೋದಿ ಅವರೊಂದಿಗೆ ಕುಲಪತಿಯವರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಭ್ರಷ್ಟಾಚಾರದ ಆರೋಪ ಇರುವ ರಂಗಪ್ಪ ಅವರನ್ನು ಪ್ರಧಾನಿ ಉಪಸ್ಥಿತಿಯಲ್ಲಿ ವೇದಿಕೆಯಲ್ಲಿ ಭಾಗವಹಿಸದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಅವ್ಯವಹಾರದ ಬಗ್ಗೆ ಈಗಾಗಲೇ ಪ್ರಧಾನಿ ಕಚೇರಿಗೆ ಮಾಹಿತಿ ನೀಡಲಾಗಿದ್ದು ಅಲ್ಲಿಂದ ವಿವರ ಕೇಳಿ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬಂದಿದೆ ಎಂದು ಶಿವರಾಮು ತಿಳಿಸಿದ್ದಾರೆ.
ಡಾ.ಕೆ ಭಕ್ತವತ್ಸಲಾ ಅವರು ಸುಮಾರು 10 ತಿಂಗಳು ತನಿಖೆ ನಡೆಸಿ ಅಕ್ಟೋಬರ್ ತಿಂಗಳಲ್ಲಿ 2 ಸಂಪುಟಗಳುಳ್ಳ 612 ಪುಟಗಳನ್ನು ಒಳಗೊಂಡ ಸತ್ಯಶೋಧನಾ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು. ವಿಶ್ವವಿದ್ಯಾಯದಲ್ಲಿ 14 ಅವ್ಯವಹಾರಗಳು ನಡೆದಿರುವುದು ವರದಿಯಲ್ಲಿ ಸಾಬೀತಾಗಿದೆ.
Advertisement