ವಾಂತಿಭೇದಿಯಿಂದ ತಾಯಿ ಮಗಳ ಸಾವು

ಪುಲಕೇಶಿನಗರ ಜೀವನಹಳ್ಳಿಯಲ್ಲಿ ತೀವ್ರ ವಾಂತಿಭೇದಿಯಿಂದ ತಾಯಿ-ಮಗಳು ಮೃತಪಟ್ಟಿದ್ದು, ವಿಷಾಹಾರ...
ವಾಂತಿಭೇದಿಯಿಂದ ತಾಯಿ ಮಗಳ ಸಾವು

ಬೆಂಗಳೂರು: ಪುಲಕೇಶಿನಗರ ಜೀವನಹಳ್ಳಿಯಲ್ಲಿ ತೀವ್ರ ವಾಂತಿಭೇದಿಯಿಂದ ತಾಯಿ-ಮಗಳು ಮೃತಪಟ್ಟಿದ್ದು, ವಿಷಾಹಾರ ಸೇವನೆ ಕಾರಣ ಎನ್ನಲಾಗಿದೆ.

ಇಲ್ಲಿನ ಕೆ.ಆರ್.ಗಾರ್ಡನ್ ನಿವಾಸಿ ಪದ್ಮಾವತಿ (50) ಮತ್ತು ದೀಪಾ (22) ಮೃತರು. ತಾಯಿ ಹಾಗೂ ಸಹೋದರಿಯ ಸಾವಿನಿಂದ ಆಘಾತಗೊಂಡ ಸತೀಶ್ ಎಂಬವರು ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪದ್ಮಾವತಿಯ ಪತಿ ದಯಾಳ್ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ದೀಪಾ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ಓದುತ್ತಿದ್ದು, ಸತೀಶ್ ಕಂಪನಿ ಉದ್ಯೋಗಿಯಾಗಿದ್ದಾರೆ. ಪದ್ಮಾವತಿ ಮನೆ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ವಿಷಾಹಾರ ಸೇವನೆ?
ಭಾನುವಾರ ರಾತ್ರಿ ಮನೆ ಸಮೀಪದ ತಳ್ಳು ಗಾಡಿಯಿಂದ ನೂಡಲ್ಸ್ ಪಾರ್ಸೆಲ್ ತಂದು ಪದ್ಮಾವತಿ ಮತ್ತು ದೀಪಾ ಸೇವಿಸಿದ್ದರು. ರಾತ್ರಿ 9.15ಕ್ಕೆ ಮನೆಗೆ ಬಂದ ಸತೀಶ್‍ಗೂ ತಿನ್ನಲು ಹೇಳಿದ್ದಾರೆ. ಹೊರಗೆ ಊಟ ಮುಗಿಸಿದ್ದರಿಂದ ಬೇಡ ಎಂದಿದ್ದ.

ರಾತ್ರಿ 11 ಗಂಟೆಗೆ ತಾಯಿ-ಮಗಳಿಗೆ ವಾಂತಿಭೇದಿ ಶುರುವಾಗಿತ್ತು. ಹೀಗಾಗಿ, ಸತೀಶ್ ಆಸ್ಪತ್ರೆಗೆ ಹೋಗೋಣ ಎಂದಿದ್ದ. ಆದರೆ, ತಾಯಿ ಸರಿ ಹೋಗುತ್ತದೆಂದು ಉಪ್ಪು, ಸಕ್ಕರೆ ಬೆರೆಸಿಕೊಂಡು ನೀರು ಕುಡಿದು ಮಲಗಿದ್ದರು. ಆದರೆ, ನಸುಕಿನ 5 ಗಂಟೆಗೆ ಮತ್ತೆ ವಾಂತಿ-ಭೇದಿಯಾಗಿ ಪದ್ಮಾವತಿ ತೀವ್ರ ಅಸ್ವಸ್ಥಗೊಂಡಿದ್ದರು. ಬೆಳಗ್ಗೆ 7.45ರಲ್ಲಿ ಆಸ್ಪತ್ರೆಗೆ ಕರೆದೊಯ್ದಾಗ ಚಿಕಿತ್ಸೆ ಫಲಿಸದೆ ಪದ್ಮಾವತಿ ಮೃತಪಟ್ಟಿದ್ದಾರೆ.

ದೀಪಾ ಮಲಗಿದ್ದಲ್ಲೇ ಮೃತಪಟ್ಟಿದ್ದಳು. ಇದನ್ನು ಗಮನಿಸಿದ ಚಿಕ್ಕಮ್ಮನ ಮಗ ಕಾರ್ತಿಕ್, ಸತೀಶ್‍ಗೆ ಕರೆ ಮಾಡಿ ತಿಳಿಸಿದ. ಇದರಿಂದ ಆಘಾತಕ್ಕೆ ಒಳಗಾದ ಸತೀಶ್, ಆಸ್ಪತ್ರೆಯಲ್ಲೇ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾನೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅನುಮಾನ
ರಸ್ತೆ ಬದಿ ತಳ್ಳುಗಾಡಿಯಲ್ಲಿ ನೂಡಲ್ಸ್ ಸೇವಿಸಿದ್ದರಿಂದ ವಾಂತಿ-ಭೇದಿ ಆಗುತ್ತಿದೆ ಎಂದು ಪದ್ಮಾವತಿ, ಮಗ ಸತೀಶ್‍ಗೆ ಹೇಳಿದ್ದರು. ಆದರೆ, ಅಲ್ಲಿ ಆಹಾರ ಸೇವಿಸಿದ ಬೇರೆಯವರಿಗೂ ತೊಂದರೆ ಆಗಬೇಕಿತ್ತು. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ನು ನೂಡಲ್ಸ್ ಯಾವ ತಳ್ಳುಗಾಡಿಯಿಂದ ತರಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಮನೆ ಸಮೀಪದ ತಳ್ಳುಗಾಡಿ, ಹೋಟೆಲ್ ಮಾಲೀಕರ ವಿಚಾರಣೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆಯಲಾಗಿದೆ.

ಮನೆಯಲ್ಲಿದ್ದ ನೂಡಲ್ಸ್‍ನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ್ದು, ವರದಿ ಬಂದ ನಂತರ ಸಾವಿಗೆ ಕಾರಣ ತಿಳಿಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com