ಗಣತಿ ಮಾಡಿದ್ರೆ ಜಾತಿ'ವಾರ್‍'ಗೆ ಸಿದ್ಧರಾಗಿ

ರಾಜ್ಯಾದ್ಯಂತ ಏಪ್ರಿಲ್ ಮೊದಲ ವಾರದಿಂದ ನಡೆಯಲಿರುವ ಜಾತಿವಾರು ಜನಗಣತಿಗೆ ವೀರಶೈವ-ಲಿಂಗಾಯತ ...
ಜನಗಣತಿ (ಸಾಂದರ್ಭಿಕ ಚಿತ್ರ )
ಜನಗಣತಿ (ಸಾಂದರ್ಭಿಕ ಚಿತ್ರ )
Updated on

ಬೆಂಗಳೂರು : ರಾಜ್ಯಾದ್ಯಂತ ಏಪ್ರಿಲ್ ಮೊದಲ ವಾರದಿಂದ ನಡೆಯಲಿರುವ ಜಾತಿವಾರು ಜನಗಣತಿಗೆ ವೀರಶೈವ-ಲಿಂಗಾಯತ ಸಮಾಜ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಉಪಜಾತಿಗಳ ಆಧಾರದಲ್ಲಿ ನಡೆಯುವ ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ-ಲಿಂಗಾಯತ ಸಮಾಜವನ್ನು ಒಡೆಯುವ ಹುನ್ನಾರ ಇದರ ಹಿಂದಿದೆ ಎಂದು ಸಮಾಜದ ಮುಖಂಡರು ಆಂತಕ  ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ನಡೆಸಲುದ್ದೇಶಿಸಿರುವ ಸಮಾಜದ ಬೃಹತ್ ಸಮಾವೇಶದ ಹಿನ್ನೆಲೆಯಲ್ಲಿ ಸೋಮವಾರ ನಗರದ ಅರಮನೆ ರಸ್ತೆಯಲ್ಲಿರುವ ಮಹಾಸಭಾದ ಕಚೇರಿಯಲ್ಲಿ ವೀರಶೈವ-ಲಿಂಗಾಯತ ಸಮಾಜದಜನಪ್ರತಿನಿಧಿಗಳ ಪೂರ್ವಭಾವಿ ಸಭೆ ನಡೆಯಿತು. ಈ  ಸಭೆಯಲ್ಲಿ ಭಾಗವಹಿಸಿದ್ದ ಹಲವು ಮಂದಿ ಮುಖಂಡರು, ಜಾತಿವಾರು ಜನಗಣತಿಯನ್ನು ತೀವ್ರವಾಗಿ ವಿರೋಧಿಸಿದರು .

ಗಣತಿ ನಿಲ್ಲಿಸದಿದ್ದರೆ ಪರಿಣಾಮ

ಕೆಲವು ಮಾಜಿ ಸಚಿವರು, ಶಾಸಕರು ಮತ್ತು ಸಂಘಟನೆಗಳ ಮುಖಂಡರು ಮಾತನಾಡಿ, ಸರ್ಕಾರ ನಡೆಸಲುದ್ದೇಶಿಸಿರುವ ಜಾತಿವಾರು ಜನಗಣತಿಯನ್ನು ತಕ್ಷಣವೇ ನಿಲ್ಲಿಸಬೇಕು. ನಿಲ್ಲಿಸದಿದ್ದರೆ, ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮತ್ತೆ ಕೆಲವು ಮುಖಂಡರು, ವೀರಶೈವ- ಲಿಂಗಾಯತ ಒಂದೇ ಎಂಬ ವಿಚಾರದಲ್ಲಿ ಅನಗತ್ಯ ಗೊಂದಲ ಹುಟ್ಟಿಸುತ್ತಿರುವ ಸ್ವಾಮೀಜಿಗಳು ಹಾಗೂ ನಾಯಕರ ವಿರುದ್ಧ ಕ್ರಮ ಜರುಗಿಸುವಂತೆ ಸಮಾಜದ ಮುಖಂಡರಿಗೆ ಮನವಿ ಮಾಡಿದರು. ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ಸಮಾಜವು ತನ್ನ ಅಸ್ತಿತ್ವಕ್ಕೆ ಭಿನ್ನಾಭಿ ಪ್ರಾಯಗಳನ್ನು ಮರೆತು ಒಂದಾಗಬೇಕಾದ ಸಂದರ್ಭಗಳಲ್ಲಿಯೂ ಅನಗತ್ಯ  ಗೊಂದಲ ಸೃಷ್ಟಿಯಾಗುತ್ತಿವೆ. ವೀರಶೈವ ಲಿಂಗಾಯತರು ಎನ್ನುವ ವಿಚಾರದಲ್ಲಿ ವಿವಾದಗಳು ಹುಟ್ಟಿಕೊಳ್ಳುತ್ತಿವೆ . ಇವುಗಳನ್ನು  ನಿಯಂತ್ರಿಸುವಂತಹ ಶಕ್ತಿಯನ್ನು ವೀರಶೈವ ಮಹಾಸಭಾ ತಂದುಕೊಳ್ಳಬೇಕಾಗಿದೆ. ಇದಕ್ಕೆ ಪೂರಕವಾಗಿ  ಠರಾವುಗಳನ್ನು ತರಬೇಕಿದೆ ಎಂದು ಸಲಹೆ ನೀಡಿದರು.ಜಾತಿವಾರು ಜನಗಣತಿ ಇಷ್ಟರಲ್ಲಿಯೇ  ಶುರುವಾಗಲಿದೆ. ಇದರಿಂದ ವೀರಶೈವ-ಲಿಂಗಾಯತ ಸಮಾಜಕ್ಕೆ ಆಗುವ ಸಾಧಕ-ಬಾಧಕಗಳ ಬಗ್ಗೆಯೂ ಚಿಂಥನ-ಮಂಥನ ನಡೆಯಬೇಕಿದೆ. ಆ ಮೂಲಕ ಇದು ಬೇಕೆ? ಬೇಡವೇ? ಎಂಬುದನ್ನು ನಿರ್ಧರಿಸಿಕೊಂಡು, ಸಮಾಜದ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು. ಸ್ವತಂತ್ರ ಧರ್ಮವೆಂದು ಘೋಷಿಸಿ ವೀರಶೈವ ಮಹಾಸಭಾದ ಹಿರಿಯ ಉಪಾಧ್ಯಕ್ಷ ಎನ್. ತಿಪ್ಪಣ್ಣ ಮಾತನಾಡಿ, ಜಾತಿವಾರು ಜನಗಣತಿ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯತ ಸಮಾಜವನ್ನು ಸ್ವತಂತ್ರ ಧರ್ಮವೆಂದು ಪರಿಗಣಿಸಬೇಕು. ಧರ್ಮದ ಕಾಲಂನಲ್ಲಿ ತಮ್ಮ ಸಮಾಜದವರು ತಮ್ಮ ಇರುವಿಕೆಯನ್ನು ದಾಖಲಿಸಲು ಪ್ರತ್ಯೇಕ ಕೋಡ್ ನೀಡಬೇಕೆಂದು ಕೇಳಿದರೂ ಸರ್ಕಾರಗಳು ಕ್ಯಾರೆ ಎನ್ನುತ್ತಿಲ್ಲ. ಈ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯತ ಸಮಾಜ ತನ್ನ ಶಕ್ತಿ ಪ್ರದರ್ಶಿಸಬೇಕಿದೆ.
ಇದಕ್ಕೆ ಎಲ್ಲರ ಸಹಕಾರ ಬೇಕಿದೆ ಎಂದು ಮನವಿ ಮಾಡಿದರು. ಇದೇ ವೇಳೆ, ಸಮಾಜವನ್ನು ಸಂಘಟಿಸಬೇಕಾದ ಸಂದರ್ಭದಲ್ಲಿ ವಿಘಟನೆ ಮಾಡುವಂತಹ ಬೆಂಕಿ ಹಚ್ಚುವ ಕೆಲಸ ಬೇಡ ಎಂದು ಕೆಲವು ಸ್ವಾಮೀಜಿಗಳ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದರು.

ಪಕ್ಷಾತೀತವಾಗಿ ಒಂದಾಗಬೇಕು
ಕೇಂದ್ರ ಮಾಜಿ ಎಂ.ವಿ. ರಾಜಶೇಖರನ್ ಮಾತಾಡಿ ಜಾತಿವಾರು ಗಣತಿಯಲ್ಲಿ ವೀರಶೈವ-ಲಿಂಗಾಯತ ಎಂದು ಬರೆಸಿದಾಕ್ಷಣ ವೀರಶೈವ-ಲಿಂಗಾಯತ ಸಮಾಜ ಉದ್ಧಾರವಾಗುತ್ತದೆ ಎಂಬ ಭ್ರಮೆ ಬೇಡ. ಸಮಾಜದ ಮುಂದೆ ಇದು ಅನೇಕ ಸಮಸ್ಯೆಗಳಿವೆ. ಸಮಾಜದ ವಿದ್ಯಾವಂತ ಯುವಕ-ಯುವತಿಯರಿಗೆ ಉದ್ಯೋಗ ಸಿಗುತ್ತಿಲ್ಲ. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಜನರ ಸ್ಥಿತಿ ಶೋಚನೀಯವಾಗಿದೆ. ಈ ಹಿನ್ನೆಲೆಯಲ್ಲಿ  ಸಮಾಜದ ಜನರು  ಪಕ್ಷಾತೀತವಾಗಿ ಒಂದಾಗಬೇಕಿದೆ ಎಂದು ವಿನಂತಿಸಿಕೊಂಡರು.

ಸಿಎಂ ಮುಂದೆ ಬಲ ಪ್ರದರ್ಶನ
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಹಾಗೂ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ಹಿಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಸಮಾಜದ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿ ಅವರ ಮುಂದೆ ನಾವೊಂದು ಶಕ್ತಿ ತೋರಿಸಬೇಕಿದೆ. ಜತೆಗೆ ಜಾತಿವಾರು ಜನಗಣತಿ ಬಗ್ಗೆ ಸಮಾಜದ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ಬಗ್ಗೆ ಕೆಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ. ವೀರಶೈವ-ಲಿಂಗಾಯತರದ್ದ ಸ್ವತಂತ್ರ ಧರ್ಮ ಎಂಬುದನ್ನು ಹೇಳಬೇಕಿದೆ. ಈ ಹಿನ್ನೆಲೆಯಲ್ಲಿ ನಡೆಯುವ ಸಮಾವೇಶಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು. ಸಭೆಯ ನಂತರ ಸಮಾವೇಶದ ದಿನಾಂಕ ಹಾಗೂ ಸ್ಥಳ ನಿಗದಿ, ಸಂಘಟನೆಯ ರೂಪುರೇಷೆ, ಸರ್ಕಾರದ ಮುಂದಿಡುವ ಹಕ್ಕೋತ್ತಾಯಗಳ ಬಗ್ಗೆ
ಮಹಾಸಭಾವೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಮುಖಂಡರು ಅನುಮತಿ ನೀಡಿದರು. ಮಾರ್ಚ್ನಲ್ಲಿ ಸಮಾವೇಶ  ನಡೆಸಿ , ಜಾತಿವಾರು ಗಣತಿಯನ್ನು ವೈಜ್ಞಾನಿಕವಾಗಿ ನಡೆಸಬೇಕು. ಅದು ಸಾಧ್ಯವಾಗದಿದ್ದರೆ, ಸರ್ಕಾರದ ನಿರ್ಧಾರದ ವಿರುದ್ಧ  ಜನ ಹೋರಾಟ ಮತ್ತು ಕಾನೂನಿನ ಅಡಿಯಲ್ಲಿ ಹೋರಾಟ ನಡೆಸಲು ಸಭೆ   ನಿರ್ಣಯ ತೆಗೆದುಕೊಂಡಿದೆ.
ಸಭೆಯಲ್ಲಿ ಸಚಿವ ಎಸ್. ಆರ್. ಪಾಟೀಲ್, ಶಾಸಕರಾದ ಅಶೋಕ್ ಖೇಣಿ, ಬಿ.ಆರ್. ಪಾಟೀಲ್, ವಿಜಯಾನಂದ ಕಾಶಪ್ಪನವರ್, ಹಿರಿಯರಾದ ಭೀಮಣ್ಣ ಖಂಡ್ರೆ, ಬಿ.ಜಿ. ಬಣಕಾರ್, ಲೀಲಾದೇವಿ ಆರ್.ಪ್ರಸಾದ್, ರಾಣಿ ಸತೀಶ್, ಅಲ್ಲಂ ವೀರಭದ್ರಪ್ಪ, ಪರಿಮಳ ನಾಗಪ್ಪ, ಎ.ಬಿ. ಮಲಕರೆಡ್ಡಿ, ವೀರಣ್ಣ ಮತ್ತಿಕಟ್ಟಿ, ವೈಜನಾಥ್ ಪಾಟೀಲ್ ಮತ್ತಿತರರು ಭಾಗವಹಿಸಿದ್ದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com