ಬೆಂಗಳೂರು: `ನ್ಯಾಯಾಂಗ ನಿಂದನೆ ಭೀತಿಯಿದ್ದರೆ, ಈಗಿರುವ ಕಚೇರಿ ಜಾಗ ತೆರವುಗೊಳಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ. ಸಾಕಷ್ಟು ವ್ಯಾಜ್ಯದಲ್ಲಿ ಮುಳುಗಿರುವ ಈ ಜಾಗವೇ ನಿಮಗೇಕೆ ಬೇಕು? ಕಚೇರಿ ಆರಂಭಿಸಲು ನಗರದಲ್ಲಿ ನಿಮಗೆ ಬೇರೆಲ್ಲೂ ಜಾಗವಿಲ್ಲವೇ?' ಎಂದು ಹೈಕೋರ್ಟ್ ಜೆಡಿಎಸ್‍ಗೆ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಜೆಡಿಎಸ್ ಕಚೇರಿ ನಿರ್ಮಾಣಕ್ಕೆ ವೈಯ್ಯಾಲಿಕಾವಲ್ ಬಳಿ ಬಿಬಿಎಂಪಿ ಮಂಜೂರು ಮಾಡಿರುವ ಒಂದು ಎಕರೆ ಒಂದು ಗುಂಟೆ ಜಾಗ ತಮಗೆ ಸೇರಿದ್ದಾಗಿರುವುದಾಗಿ ಕೆ.ಜಿ. ಚಂದ್ರಶೇಖರ್ ಭಟ್ ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠ, ಈ ಹಿಂದೆ ಭೂಮಿ ಮಂಜೂರಿಗೆ ನೀಡಿದ್ದ ತಡೆಯಾಜ್ಞೆ ಮುಂದಿನ ವಿಚಾರಣೆಗೆ ಮುಂದುವರಿಸುವಂತೆ ಸೂಚಿಸಿ ವಿಚಾರಣೆಯನ್ನು ಫೆ..9ಕ್ಕೆ ಮುಂದೂಡಿತು. ಅಲ್ಲದೇ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಮತ್ತು ಬಿಡಿಎಯನ್ನು ಪ್ರತಿವಾದಿ ಮಾಡುವಂತೆಯೂ ನಿರ್ದೇಶಿಸಿದೆ.
ಮಂಗಳವಾರ ಅರ್ಜಿ ವಿಚಾರಣೆ ವೇಳೆ ಪ್ರಕರಣದ ಎಲ್ಲಾ ಪ್ರತಿ ವಾದಿಗಳ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾದರು. ಈ ವೇಳೆ ಪ್ರತಿಕ್ರಿಯಿಸಿದ ನ್ಯಾ.ಬಿ.ವಿ.ನಾಗರತ್ನ ಅವರು, `ಈ ಜಮೀನು ತನ್ನದೆಂದು ಬಿಡಿಎ, ಬಿಬಿಎಂಪಿ, ಅರ್ಜಿದಾರ ಚಂದ್ರಶೇಖರ್ ಭಟ್, ಆದಾಯ ತೆರಿಗೆ ಇಲಾಖೆ ಮತ್ತು ಶ್ರೀಕಂಠದತ್ತ ಒಡೆಯರ್ ಪತ್ನಿ ಪ್ರಮೋದಾದೇವಿ ಪ್ರತಿಪಾದಿಸುತ್ತಿದ್ದಾರೆ. ಇದರಿಂದ ಪ್ರಕರಣ ಗೊಂದಲದ ಗೂಡಾಗಿ ಪರಿಣಮಿಸಿದೆ. ಹೀಗಾಗಿ ಪ್ರಕರಣವನ್ನು ತಾವು ಸಂಪೂರ್ಣವಾಗಿ ಅಧ್ಯಯನ ನಡೆಸಬೇಕಾದ ಅವಶ್ಯವಿದ್ದು ಕಾಲಾವಕಾಶಬೇಕಿದೆ' ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಪರ ವಕೀಲರು, `ಕಚೇರಿಯ ಜಾಗವನ್ನು ತೆರವು ಮಾಡುವ ವಿಚಾರದಲ್ಲಿ ತಮಗೆ ಸುಪ್ರೀಂಕೊರ್ಟ್ ನಿಂದ ನ್ಯಾಯಾಂಗ ನಿಂದನೆ ಭೀತಿಯಿದೆ. ಆದ್ದರಿಂದ ಪ್ರಕರಣ ತುರ್ತಾಗಿ ಇತ್ಯರ್ಥಪಡಿಸಬೇಕಿದೆ' ಎಂದು ಪೀಠದ ಗಮನಕ್ಕೆ ತಂದರು. ಈ ವಾದ ಅಲ್ಲಗೆಳೆದ ಪೀಠ, `ನ್ಯಾಯಾಂಗ ನಿಂದನೆ ಭೀತಿಯಿದ್ದರೆ, ಮೊದಲು ಜಾಗ ತೆರವುಗೊಳಿಸಿ, ಈ ಅರ್ಜಿ ಇತ್ಯರ್ಥದವರೆಗೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ. ಕಚೇರಿಯನ್ನು ತೆರವುಗೊಳಿಸುವುದಕ್ಕೂ ಹಾಗೂ ಈ ಜಮೀನು ಮಂಜೂರು ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ.ಆದ್ದರಿಂದ ಈಗಿರುವ ಜಾಗವನ್ನು ಖಾಲಿ ಮಾಡಿ ಬೇರೆಡೆಗೆ ಸ್ಥಳಾಂತರಗೊಳ್ಳಿ ಎಂದು ಮೌಖಿಕವಾಗಿ ತಾಕೀತು ಮಾಡಿತು.
`ಪ್ರಕರಣ ಸಾಕಷ್ಟು ಗೊಂದಲದಿಂದ ಕೂಡಿದೆ. ಪ್ರತಿಯೊಬ್ಬರ ಕಕ್ಷಿದಾರರ ವಾದ ಆಲಿಸಿದ ನಂತರವೇ ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ' ಎಂದು ಅಭಿಪ್ರಾಯಪಟ್ಟು ವಿಚಾರಣೆಯನ್ನು ಫೆ.9ಕ್ಕೆ ಮುಂದೂಡಿದರು.
Advertisement