ಕೈಗಾರಿಕಾ ಸ್ಥಾನಮಾನಕ್ಕೆ ಯತ್ನ

ಹೋಟೆಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡುವುದು ಸೇರಿದಂತೆ ತೆರಿಗೆ ವಿನಾಯಿತಿ, ಸಬ್ಸಿಡಿ ಹಾಗೂ ಇತರೆ ಸೌಲಭ್ಯಗಳನ್ನು ನೀಡುವ ಸಂಬಂಧ...
ಕೈಗಾರಿಕಾ ಸ್ಥಾನಮಾನಕ್ಕೆ ಯತ್ನ

ಬೆಂಗಳೂರು: ಹೋಟೆಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡುವುದು ಸೇರಿದಂತೆ ತೆರಿಗೆ ವಿನಾಯಿತಿ, ಸಬ್ಸಿಡಿ ಹಾಗೂ ಇತರೆ ಸೌಲಭ್ಯಗಳನ್ನು ನೀಡುವ ಸಂಬಂಧ ಉದ್ಯಮದ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲು ತಾವು ಸಿದ್ಧ. ಯಾವುದೇ ಸಂದರ್ಭದಲ್ಲೂ ಉದ್ಯಮದ ಪ್ರತಿನಿಧಿಗಳು ತಮ್ಮನ್ನು ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಭರವಸೆ ನೀಡಿದರು.

ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಸಂಘವು ಮಂಗಳವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ `ಸ್ಪಂದನ-2015' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಘದ ಅಧ್ಯಕ್ಷ ಎಂ.ರಾಜೇಂದ್ರ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸರ್ಕಾರದ ಮುಂದಿಟ್ಟ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಹೋಟೆಲ್ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ ನೀಡುವುದು ಹಣಕಾಸು ಇಲಾಖೆಗೆ ಸಂಬಂಧಿಸಿದ್ದು. ಆದರೂ, ತಾವು ಈ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿ ಸಾಕಷ್ಟು ಭೂಮಿಯಿದೆ.

ಕೇರಳ ಮಾದರಿಯಲ್ಲಿ ಈ ಭೂಮಿಗಳನ್ನು ಲೀಸ್ ಆಧಾರದಲ್ಲಿ ಆಸಕ್ತರಿಗೆ ನೀಡಿ, ಅಲ್ಲಿ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ರುವ 319 ಪ್ರವಾಸಿ ತಾಣಗಳನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು. ಈಗಾಗಲೇ ರಾಜ್ಯದ 23 ಕರಾವಳಿ ತೀರಗಳ  ಅಭಿವೃದ್ಧಿಗೆ ಯೋಜನೆಗೆ ಸಿದ್ಧವಾಗಿದೆ.

ಉಳಿದಂತೆ ಎಲ್ಲ ಪ್ರವಾಸಿ ತಾಣಗಳ ರಸ್ತೆ ಅಭಿವೃದ್ಧಿ ಗೆ ಈ ವರ್ಷ ರು.200 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದಲೇ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಿಯಾ ಯೋಜನೆ ಸಿದ್ಧವಾಗಿದೆ. ಪ್ರಮುಖವಾಗಿ ಈಗ ನಾಲ್ಕು ಕಡೆಗಳಲ್ಲಿ ಈ ಯೋಜನೆ ಕಾರ್ಯಗತಗೊಳ್ಳುತ್ತಿದೆ ಎಂದರು.

ನೀವೇ ಅನ್ನದಾತರು: ಸಂಸದ ಪ್ರತಾಪಸಿಂಹ ಮಾತನಾಡಿ, ಹೋಟೆಲ್ ಮಾಲೀಕರೇ ನಿಜವಾದ ಅನ್ನದಾತರು. ಯಾವುದೇ ಸಮಯದಲ್ಲಿ ಹೋದರೂ ಗ್ರಾಹಕರಿಗೆ ಊಟ ಬಡಿಸುವ ಅವರ ಸೇವೆಯನ್ನು ತಮ್ಮ 11 ವರ್ಷದ ಒಟನಾಟದ ಮೂಲಕ ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷ ಎಂ. ರಾಜೇಂದ್ರ, ಇಂದಿಗೂ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ ಸಿಕ್ಕಿಲ್ಲ. ತೆರಿಗೆ ವಿನಾಯಿತಿ, ಸಬ್ಸಿಡಿ ಸೌಲಭ್ಯ ನಿಂತಿದೆ. ಆಹಾರ ಭದ್ರತೆ ಕಾಯಿದೆ ತೊಡಕಾಗಿದೆ. ಇವೆಲ್ಲವನ್ನು ಸರ್ಕಾರಗಳು ಬಗೆಹರಿಸಬೇಕಿದೆ ಎಂದು ಒತ್ತಾಯಿಸಿದರು.

ಸಂಘದ ಗೌರವ ಕಾರ್ಯದರ್ಶಿ ಮಧುಕರ ಎಂ.ಶೆಟ್ಟಿ ಸ್ವಾಗತಿಸಿದರು. ಜಂಗಲ್ ಲಾಡ್ಜ್ ಮತ್ತು ರೆಸಾಟ್ರ್ಸ್ ಅಧ್ಯಕ್ಷ ಅಸಗೋಡು ಜಯಸಿಂಹ, ದಕ್ಷಿಣ ಭಾರತ ಹೊಟೇಲ್ಸ್ ಮತ್ತು ರೆಸಾಟ್ರ್ಸ್ ಸಂಘದ ಅಧ್ಯಕ್ಷ ಕೆ. ಶಾಮರಾಜು, ಭಾರತೀಯ ಹೊಟೇಲ್ ಮತ್ತು ರೆಸಾಟ್ರ್ಸ್ ಸಂಘಗಳ ಒಕ್ಕೂಟದ ಅಧ್ಯಕ್ಷ ಟಿ.ಎಸ್. ವಾಲಿಯಾ ಹಾಜರಿದ್ದರು. ರಮೇಶ್ ಚಂದ್ರ ಮತ್ತು ತಂಡದವರು ಭಾವಗೀತೆ ಗಳನ್ನು ಹಾಡಿ, ಪ್ರೇಕ್ಷಕರನ್ನು ರಂಜಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com