ಆತ್ಮಹತ್ಯೆಗೆ ವಿದ್ಯಾರ್ಥಿ ಯತ್ನ

ಅಯ್ಯಪ್ಪನಗರದ ಸೌತ್‍ಈಸ್ಟ್ ಏಷಿಯನ್(ಎಸ್‍ಇಎ) ಕಾಲೇಜಿನಲ್ಲಿ ಸಹಪಾಠಿಗಳ ರ್ಯಾಗಿಂಗ್‍ನಿಂದ ನೊಂದ...
ಆತ್ಮಹತ್ಯೆಗೆ ವಿದ್ಯಾರ್ಥಿ ಯತ್ನ

ಅಯ್ಯಪ್ಪನಗರದ ಎಸ್‍ಇಎ ಕಾಲೇಜು ಹಾಸ್ಟೆಲ್‍ನಲ್ಲಿ ಘಟನೆ
ಕೃಷ್ಣರಾಜಪುರ
: ಅಯ್ಯಪ್ಪನಗರದ ಸೌತ್‍ಈಸ್ಟ್ ಏಷಿಯನ್(ಎಸ್‍ಇಎ) ಕಾಲೇಜಿನಲ್ಲಿ ಸಹಪಾಠಿಗಳ ರ್ಯಾಗಿಂಗ್‍ನಿಂದ ನೊಂದ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ತಮಿಳುನಾಡು ಮೂಲದ ತಾಮರೈ ಚೆಲ್ವನ್ (18) ಆತ್ಮಹತ್ಯೆಗೆ ಯತ್ನಿಸಿದವನು. ಆತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವುಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್‍ಇಎ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ನರ್ಸಿಂಗ್ ವಿಭಾಗದಲ್ಲಿ ಚೆಲ್ವನ್ ವ್ಯಾಸಂಗ ಮಾಡುತ್ತಿದ್ದು, ಅದೇ ಕಾಲೇಜಿನ ಹಾಸ್ಟೆಲ್‍ನಲ್ಲಿ ವಾಸವಿದ್ದ. ಜ.28ರಂದು ಆತನ 4 ಸಹಪಾಠಿಗಳು ಮದ್ಯ ಸೇವನೆ ಮಾಡಲು ಇವನ ಬಳಿ ರು. 3 ಸಾವಿರ ಕೇಳಿದ್ದರಂತೆ. ಆದರೆ ಈತ ನಿರಾಕರಿಸಿದ್ದಾನೆ.

ಆಗ ಅವರು ಈತನಿಗೆ ಮಾನಸಿಕ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ನೀನು ಯಾಕೆ ಬದುಕಿದ್ದೀಯಾ, ಸತ್ತು ಹೋಗು ಎಂದು ಮನಸ್ಸಿಗೆ ನೋವಾಗುವಂತೆ ಗೇಲಿ ಮಾಡಿದ್ದಾರೆ. ಈ ವಿಚಾರವನ್ನು ಅದೇ ದಿನ ರಾತ್ರಿ ಫೋನ್ ಕರೆ ಮಾಡಿ ತಿಳಿಸಿದ್ದಾನೆಂದು ಚೆಲ್ವನ್ ತಾಯಿ ಕೆ. ಆರ್.ಪುರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ರ್ಯಾಗಿಂಗ್ ಮಾಡಿದ ಆರೋಪಿಗಳಾದ ನವಾಜ್, ಕಾರ್ತಿಕ್ ಮತ್ತು ಕೃಷ್ಣನ್ ಎಂಬುವರನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿಗಳು ಎಲ್ಲರೂ 18 ವರ್ಷದವರು
ಜ.29ರಂದು ಬೆಳಗಿನ ಜಾವ ತನ್ನ ಅಣ್ಣನಿಗೂ ಕರೆಮಾಡಿ ಕಾಲೇಜಿನಲ್ಲಿ ನಡೆದ ವಿಷಯವನ್ನು ತಿಳಿಸಿದ್ದ. ತನಗೆ ಈ ಹಾಸ್ಟೆಲ್ ನಲ್ಲಿರಲು ಇಷ್ಟವಿಲ್ಲ ಎಂದು ಹೇಳಿಕೊಂಡು ಕಣ್ಣೀರಿಟ್ಟಿದ್ದ. ರ್ಯಾಗಿಂಗ್ ನಿಂದಲೇ ಮಗ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಪಾಲಕರು ಆರೋಪಿಸಿದ್ದಾರೆ.

ಜ.29ರಂದು 11:30ರ ವೇಳೆಗೆ ಚೆಲ್ವನ್ ಹಾಸ್ಟೆಲ್‍ನ ಕೊಠಡಿಯಲ್ಲಿ ನೇಣು ಕುಣಿಕೆಯಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿದ ಹಾಸ್ಟೆಲ್  ಸಿಬ್ಬಂದಿ, ಕೆಳಗಿಳಿಸಿ ನಗರದ ಮಣಿಪಾಲ್  ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತನ ಮೆದುಳು ನಿಷ್ಕ್ರಿಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‍ಇಎ ವಿದ್ಯಾಸಂಸ್ಥೆಗಳ ಸಿಇಓ ಪೂರ್ಣಿಮಾ ಶ್ರೀನಿವಾಸ್, ನಮ್ಮ ವಿದ್ಯಾಸಂಸ್ಥೆಯಲ್ಲಿ ಯಾವುದೇ ರೀತಿಯ ರ್ಯಾಗಿಂಗ್ ನಡೆದಿಲ್ಲ. ಅಲ್ಲದೇ
ರ್ಯಾಗಿಂಗ್ ತಡೆ ಸಮಿತಿ ಸಹ ಕಾರ್ಯ ನಿರ್ವಹಿಸುತ್ತಿದೆ ಎಂದಿದ್ದಾರೆ. ಪೋಷಕರ ಆರೋಪವನ್ನು ತಳ್ಳಿಹಾಕಿದ್ದಾರೆ. ಅಲ್ಲದೇ ವಿದ್ಯಾರ್ಥಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು
ಭರಿಸುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com