
ಬೆಳಗಾವಿ: ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಹೆಸರು ಗಳಿಸಿರುವ ಕೆಎಲ್‍ಇ ಸಂಸ್ಥೆ ಇದೇ ವರ್ಷದಿಂದ ಕ್ರೀಡಾ ಅಕಾಡೆಮಿ ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದ ಕ್ರೀಡಾ ಪ್ರತಿಭೆಗಳಿಗೆ ಹೊಳಪು ನೀಡುವ ಕಾರ್ಯ ಮಾಡಲಿದೆ.
ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಅಕಾಡೆಮಿಯ ಮುಂದಾಳತ್ವ ವಹಿಸಿಕೊಂಡು, ಮಾರ್ಗದರ್ಶನ ಮಾಡಲಿದ್ದಾರೆ. ಅಕಾಡೆಮಿಗೆ ಆರಂಭಿಸಲು ಅಗತ್ಯ ತಯಾರಿ ನಡೆಸಲಾಗಿದೆ ಎಂದು ಕೆಎಲ್‍ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಪ್ರಕಟಿಸಿದ್ದಾರೆ. ಕೆಎಲ್‍ಇ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೀಡಾ ಅಕಾಡೆಮಿ ಸ್ಥಾಪಿಸುವಂತೆ ಕುಂಬ್ಳೆ ಸಲಹೆ ನೀಡಿದ್ದಾರೆ. ಅದರ ಮುಂದಾಳತ್ವವನ್ನು ಅವರೇ ವಹಿಸಲಿದ್ದಾರೆ. ಈಗಾಗಲೇ ಟೆನಿಸ್, ಈಜು,
ಬ್ಯಾಡ್ಮಿಂಟನ್ ಸೇರಿ ಹಲವು ಕ್ರೀಡೆಗಳಿಗೆ ಅಗತ್ಯ ಕ್ರೀಡಾಂಗಣ ನಿರ್ಮಿಸಲಾಗಿದೆ. ಇದೇ ವರ್ಷದಿಂದಲೇ ಕ್ರೀಡಾ ಅಕಾಡೆಮಿ ಸ್ಥಾಪಿಸಲಾಗುವುದು ಎಂದರು.
ಕೆಎಲ್‍ಇ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಗುರುವಾರ ಅನಿಲ್ ಕುಂಬ್ಳೆ ಶತಮಾನೋತ್ಸವ ಜ್ಯೋತಿ ಬೆಳಗಿ ಚಾಲನೆ ನೀಡಿದರು. ಶತಮಾನೋತ್ಸವದ 18 ತಿಂಗಳು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದ ಕೋರೆ, ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಉತ್ತರ ಕರ್ನಾಟಕದ ಭಾಗ್ಯ:
ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅನಿಲ್ ಕುಂಬ್ಳೆ, ಕೆಎಲ್‍ಇ ಸಂಸ್ಥೆ ಇಲ್ಲದಿದ್ದರೆ ಉತ್ತರ ಕರ್ನಾಟಕದ ಶಿಕ್ಷಣ, ಆರೋಗ್ಯ ಕ್ಷೇತ್ರವನ್ನು ಊಹಿಸುವುದೂ ಕಷ್ಟ ಸಾಧ್ಯವಾಗುತ್ತಿತ್ತು ಎಂದು ಹೇಳಿದರು. ಈ ಭಾಗದ ಹಲವಾರು ಪ್ರಮುಖರು ಕೆಎಲ್‍ಇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಎಂಬುದು ಹೆಮ್ಮೆಯ ವಿಷಯ. ಇಂತಹ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದೇ ನನ್ನ ಸೌಭಾಗ್ಯ. ನಾನೂ ಸಹ ಕೆಎಲ್‍ಇ ಸಂಸ್ಥೆಯ ಹಳೆಯ ವಿದ್ಯಾರ್ಥಿ ಆಗಬೇಕಿತ್ತು. ಜೆಎನ್‍ಎಂಸಿಯಲ್ಲಿ ನನಗೆ ವೈದ್ಯಕೀಯ ಸೀಟ್ ಸಿಕ್ಕಿತ್ತು. ಆದರೆ ಕ್ರಿಕೆಟ್ ಮೇಲಿನ ಆಸಕ್ತಿ ನನ್ನನ್ನು ಎಂಜಿನಿಯರಿಂಗ್ ಕ್ಷೇತ್ರದತ್ತ ಸೆಳೆಯಿತು. ಇಲ್ಲವಾದರೆ ನಾನು ಜೆಎನ್ ಎಂಸಿಯಲ್ಲೇ ವೈದ್ಯ ಶಿಕ್ಷಣ ಪಡೆದು ಕೆಎಲ್‍ಇ ಹಳೆ ವಿದ್ಯಾರ್ಥಿ ಆಗುತ್ತಿದ್ದೆ ಎಂದರು. ಆದರೆ ಈಗ ನಾನು ಕೆಎಲ್‍ಇ ಕುಟುಂಬ ಸೇರಿದ್ದೇನೆ. ಕೆಎಲ್‍ಇ ಸಂಸ್ಥೆಗೆ ವಿವಿಧ ಕ್ರೀಡೆಗಳ ಕುರಿತು ಸಲಹೆ, ಮಾರ್ಗದರ್ಶನ ನೀಡುತ್ತಿದ್ದೇನೆ ಎಂದರು.
ಯಾವುದೇ ಸಂಸ್ಥೆಯ ಶತಮಾನೋತ್ಸವ ಮೈಲಿಗಲ್ಲು. ಅದರಲ್ಲೂ ಕೆಎಲ್‍ಇಯಂತಹ ಬೃಹತ್ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮ ನಿಜಕ್ಕೂ ಹೆಮ್ಮೆ. ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ, ಲಕ್ಷಾಂತರ ಜನರ ಆರೋಗ್ಯ ಕಾಪಾಡುತ್ತಿರುವ, ಸಾವಿರಾರು ಜನರಿಗೆ ಉದ್ಯೋಗದ ಅವಕಾಶ ನೀಡಿರುವ ಕೆಎಲ್‍ಇ ರಾಜ್ಯಕ್ಕಷ್ಟೇ ಅಲ್ಲ, ರಾಷ್ಟ್ರಕ್ಕೂ ಹೆಮ್ಮೆ ಎಂದು ಕುಂಬ್ಳೆ ಮುಕ್ತ ಕಂಠದಿಂದ ಶ್ಲಾಘಿಸಿದರು.
ಏಳು ಮಂದಿ ಮಹನೀಯರ ದೂರದೃಷ್ಟಿ ಇಂತಹ ಸಂಸ್ಥೆ ಪ್ರಾರಂಭವಾಗಿದೆ. ಸಂಸ್ಥೆ ಪ್ರಾರಂಬಿಸುವುದು ಸುಲಭ. ಆದರೆ ಮುನ್ನಡೆಸುವುದು ಕಷ್ಟ ಸಾಧ್ಯ ಎಂದ ಕುಂಬ್ಳೆ,
ಪ್ರಭಾಕರ ಕೋರೆ ಅವರ ನಾಯಕತ್ವ, ನೇತೃತ್ವವನ್ನು ಶ್ಲಾಘಿಸಿದರು. ಕೋರೆ ಅವರ ದೂರದೃಷ್ಟಿ, ಕರ್ತೃತ್ವಶಕ್ತಿಯಿಂದಾಗಿ ಕೆಎಲ್‍ಇ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಗುಣಾತ್ಮಕ ಶಿಕ್ಷಣ, ಆರೋಗ್ಯ ಸೇವೆ ನೀಡುತ್ತಿದೆ. ಅವರು ಕಾರ್ಯಾಧ್ಯಕ್ಷರಾದ ಬಳಿಕ ಸಂಸ್ಥೆಗೆ 200 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸೇರಿಸುವ ಮೂಲಕ ಶಿಕ್ಷಣ ಪ್ರಿಯರೆನಿಸಿಕೊಂಡಿದ್ದಾರೆ ಎಂದರು.
ಸಿಡಿಮದ್ದಿನ ಪ್ರದರ್ಶನ, ಲೇಸರ್ ಶೋ ಸಹ ಗಮನ ಸೆಳೆಯಿತು. ಕೆಎಲ್‍ಇ ಆಡಳಿತ ಮಂಡಳಿ ಸದಸ್ಯರಾದ ಮಹಾಂತೇಶ ಕವಟಗಿಮಠ, ವಿ.ಎಸ್.ಸಾಧನವರ. ಶಂಕರ ಮುನವಳ್ಳಿ, ಶಿವಾನಂದ ಕೌಜಲಗಿ, ಪ್ರೀತಿ ದೊಡ್ಡವಾಡ, ಅಶೋಕ ಬಾಗೇವಾಡಿ, ಕಾರ್ಯದರ್ಶಿ ಬಿ.ಜಿ.ದೇಸಾಯಿ, ಶಾಸಕ ವಿಶ್ವನಾಥ ಪಾಟೀಲ ಪಾಲ್ಗೊಂಡಿದ್ದರು.
Advertisement