ಸ್ತಬ್ಧವಾಯ್ತು ನಗರದ ಹೃದಯ!

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್...
ಪ್ರತಿಭಟನಾ ನಿರತ ಅಂಗನವಾಡಿ ಕಾರ್ಯಕರ್ತೆರು
ಪ್ರತಿಭಟನಾ ನಿರತ ಅಂಗನವಾಡಿ ಕಾರ್ಯಕರ್ತೆರು

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಗುರುವಾರ ಮಧ್ಯಾಹ್ನ 12ರಿಂದ 3 ಗಂಟೆವರೆಗೆ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡಿದರು.

ಬೆಳಗ್ಗೆ 11 ಗಂಟೆಯಿಂದಲೇ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಸೇರಿದ್ದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ರಸ್ತೆಗೆ ಇಳಿಯಲು ಆರಂಭಿಸಿದರು. ಹೀಗಾಗಿ, ರೈಲ್ವೆ ನಿಲ್ದಾಣದ ರಸ್ತೆ, ಗೂಡ್ಸ್ ಶೆಡ್ ರಸ್ತೆ, ಓಕಳಿಪುರ ಮಾರ್ಗಗಳಲ್ಲಿ ವಾಹನ ಸಂಚಾರ ನಿಧಾನಗೊಂಡಿತ್ತು. ಅಲ್ಲಿಂದ ಪಾದಯಾತ್ರೆ ಆರಂಭವಾಗುತ್ತಿದ್ದಂತೆ ವಾಹನ ಸವಾರರಿಗೆ ಕಿರಿಕಿರಿ ಆರಂಭವಾಯಿತು.

ರೈಲು ನಿಲ್ದಾಣದಿಂದ ಆನಂದರಾವ್ ಮೇಲ್ಸೇತುವೆ ಮಾರ್ಗವಾಗಿ ಕಾರ್ಯಕರ್ತೆಯರು ಶೇಷಾದ್ರಿ ರಸ್ತೆಯಲ್ಲಿ ಸಾಲಾಗಿ ಸ್ವಾತಂತ್ರ್ಯ ಉದ್ಯಾನದ ಕಡೆ ತೆರಳುತ್ತಿದ್ದರು. ಉದ್ಯಾನದ ಒಳಗೆ ತೆರಳುವ ಬದಲು ಎಲ್ಲರೂ ರಸ್ತೆಯಲ್ಲೇ ಕುಳಿತುಕೊಳ್ಳಲು ಆರಂಬಿsಸಿದರು. ಹೀಗಾಗಿ, ಸಾವಿರಾರು ವಾಹನಗಳು ರಸ್ತೆಯಲ್ಲೇ ನಿಲ್ಲುವಂತಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವುದನ್ನು ಮುಂಚಿತವಾಗಿ ಅರಿತಿದ್ದ ಸಂಚಾರ ಪೊಲೀಸರು, ಆನಂದರಾವ್ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರವನ್ನು ತಡೆದರು.
ಎಲ್ಲ ವಾಹನಗಳನ್ನು ಜೆಡಿಎಸ್ ಕಚೇರಿ, ರೇಸ್ ಕೋರ್ಸ್ ರಸ್ತೆ ಮೂಲಕ ಕಳುಹಿಸಿದರು. ಶೇಷಾದ್ರಿ ರಸ್ತೆ ಮೇಲಿನ ವಾಹನ ಸಂಚಾರ ಒತ್ತಡ ಸಂಪೂರ್ಣವಾಗಿ ರೇಸ್ ಕೋರ್ಸ್ ರಸ್ತೆಗೆ ಬಿದ್ದ ಕಾರಣ, ಗೂಡ್ಸ್ ಶೆಡ್ ರಸ್ತೆ, ಗಾಂಧಿನಗರ, ಕೆಜಿ ರಸ್ತೆ ಹೀಗೆ ಮೆಜೆಸ್ಟಿಕ್ ಸುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು.

ಟ್ರಾಫಿಕ್ ಜಾಮ್ ನಿಂದಾಗಿ ಪ್ರತಿಭಟನಕಾರರು ಹಾಗೂ ಪೊಲೀಸರ ವಿರುದ್ಧ ಸವಾರರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮುಂಚಿತವಾಗಿ ಮಾಹಿತಿ ನೀಡದೆ ಇರುವುದು ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ ಎಂದು ಆಟೋ ಚಾಲಕ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರು ಏಕಾಏಕಿ ಸ್ವಾತಂತ್ರ್ಯ ಉದ್ಯಾನ ಮುಂಭಾಗ ರಸ್ತೆ ಮಧ್ಯೆಯೇ ಕುಳಿತರು. ಅವರ ವಿರುದ್ಧ ಯಾವುದೇ ಬಲ ಪ್ರಯೋಗ ಮಾಡುವಂತಿರಲಿಲ್ಲ. ರಸ್ತೆ ಸಂಚಾರಕ್ಕೆ ತೊಂದರೆ ನೀಡಬೇಡಿ ಎಂದು ಎಷ್ಟೇ ಮನವಿ ಮಾಡಿದರೂ ಕೇಳಲು ಸಿದ್ಧರಿರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು. ದೂರು ಆಲಿಸಲು ಸಚಿವೆ ಉಮಾಶ್ರೀ ಬರುತ್ತಾರೆ ಎನ್ನುವ ಮಾಹಿತಿ ಬಂದ ಬಳಿಕವೇ 4 ಗಂಟೆ ನಂತರ ಎಲ್ಲರೂ ಸ್ವಾತಂತ್ರ್ಯ ಉದ್ಯಾನದೊಳಗೆ ತೆರಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com