
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ ಬಿಸಿ ವಿಧಾನಸೌಧಕ್ಕೆ ತಟ್ಟುತ್ತಿದ್ದಂತೆ ಸಂಜೆ 6.30ಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಸ್ಥಳಕ್ಕೆ ದೌಡಾಯಿಸಿದರು.
ಪ್ರತಿಭಟನಾನಿರತರ ಜತೆ ಮಾತುಕತೆ ನಡೆಸಿದ ಅವರು, ಸದ್ಯಕ್ಕೆ 2 ಬೇಡಿಕೆಗಳನ್ನು ಈಡೇರಿಸಿ, ಉಳಿದ ಬೇಡಿಕೆಗಳನ್ನು ಪರಿಶೀಲಿಸಿ ಹಂತಹಂತವಾಗಿ ಈಡೇರಿಸುವ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲು ಕಾರ್ಯಕರ್ತೆಯರು ಒಪ್ಪಿದರು. ಅಂಗನವಾಡಿಗಳನ್ನು ಖಾಸಗೀಕರಣ ಮಾಡುವ ಉದ್ದೇಶ ಕೈಬಿಡಲಾಗುತ್ತದೆ. ಮುಂಬರುವ ಬಜೆಟ್‍ನಲ್ಲಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ರು. 1 ಸಾವಿರಕ್ಕೆ ಹೆಚ್ಚಿಸುವುದಾಗಿ ಉಮಾಶ್ರೀ ಭರವಸೆ ಕೊಟ್ಟಿದ್ದಾರೆ.
ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಪ್ರತಿಭಟನೆ ಕೈಗೊಂಡಿದ್ದಕ್ಕೆ ನೀಡಲಾಗಿದ್ದ ನೋಟಿಸ್ ಹಿಂಪಡೆಯಲಾಗುವುದು. ಮುಷ್ಕರ ವೇಳೆ ಕೆಲಸ ಮಾಡಿರದಿದ್ದರೂ 11 ದಿನಗಳ ಗೌರವಧನ ನೀಡಲಾಗುವುದು. ಪಿಂಚಣಿ ನೀಡುವ ಸಂಬಂಧ ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಕಾರ್ಯಕರ್ತೆಯರಿಗೆ ರು. 5,500 ಹಾಗೂ ಸಹಾಯಕಿಯರಿಗೆ ರು. 2,750 ಗೌರವಧನ ನೀಡಲಾಗುತ್ತಿದೆ. ಗೌರವಧನ ಹೆಚ್ಚಳ ಮಾಡದಿದ್ದರೆ ಮತ್ತೆ ಪ್ರತಿಭಟನೆಗೆ ಇಳಿಯುವುದಾಗಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಹಿತರಕ್ಷಣಾ ಸಮಿತಿ ತಿಳಿಸಿದೆ.
Advertisement