
ಬೆಂಗಳೂರು: ಸವಾರನ ನಿಯಂತ್ರಣ ಕಳೆದುಕೊಂಡ ಬೈಕ್ ಅಡ್ಡಾದಿಡ್ಡಿ ಚಲಿಸಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಕಂಪನಿ ಉದ್ಯೋಗಿ ಮೃತಪಟ್ಟು, ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ.
ಉಡುಪಿ ಮೂಲದ ಎಲಿವಿಸ್ ಮ್ಯಾಕ್ಸ್ ಮಾಂಟೋರಿಯಾ (32) ಮೃತರು. ಇವರ ಸ್ನೇಹಿತ ಚೇಸ್ ಫರ್ನಾಂಡಿಸ್(23) ಗಾಯಗೊಂಡಿದ್ದಾರೆ. ಮೃತ ಎಲಿವಿಸ್, 2 ವರ್ಷದಿಂದ ನಗರದ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಹೊಸಕೆರೆಹಳ್ಳಿಯಲ್ಲಿ ನೆಲೆಸಿದ್ದರು. ಶುಕ್ರವಾರ ರಾತ್ರಿ 1 ಗಂಟೆವರೆಗೆ ಸ್ನೇಹಿತರ ಜತೆ ಮನೆಯಲ್ಲೇ ಮದ್ಯದ ಪಾರ್ಟಿ ಮಾಡಿ ಫರ್ನಾಂಡಿಸ್ ಜತೆ ಬೈಕ್‍ನಲ್ಲಿ ಸುತ್ತಾಟಕ್ಕೆ ತೆರಳಿದ್ದರೆಂದು ಪೊಲೀಸರು ಹೇಳಿದ್ದಾರೆ.
ಬನ್ನೇರುಘಟ್ಟ ರಸ್ತೆ ಮಾರ್ಗವಾಗಿ ಬರುತ್ತಿದ್ದಾಗ ದಾಲ್ಮಿಯಾ ಜಂಕ್ಷನ್‍ನಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ ರಸ್ತೆ ವಿಭಜಕಕ್ಕೆ ಗುದ್ದಿದೆ. ಎಲಿವಿಸ್ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟರು. ಫರ್ನಾಂಡಿಸ್‍ಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದಾಗ ಎಲಿವಿಸ್ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಜಯನಗರ ಸಂಚಾರ ಪೊಲೀಸರು ಹೇಳಿದ್ದಾರೆ.
ಮತ್ತೊಂದು ಪ್ರಕರಣ: ಬಾಗಲೂರಿನಲ್ಲಿ ರಸ್ತೆ ಬದಿಯ ಪಾನಿಪೂರಿ ಗಾಡಿಗೆ ಬೈಕ್ ಗುದ್ದಿ ಸವಾರ ಮೋಹನ್ ಕುಮಾರ್(42) ಎಂಬುವರು ಮೃತಪಟ್ಟಿದ್ದಾರೆ. ಜಾಲ ಹೋಬಳಿ ಯರಪ್ಪನಹಳ್ಳಿ ನಿವಾಸಿ ಮೋಹನ್, ಖಾಸಗಿ ಭದ್ರತಾ ಏಜೆನ್ಸಿ ಮೇಲ್ವಿಚಾರಕರಾಗಿದ್ದರು. ಶುಕ್ರವಾರ ರಾತ್ರಿ 7.30ರಲ್ಲಿ ಕೆಲಸ ಮುಗಿಸಿ ಬೈಕ್‍ನಲ್ಲಿ ಮನೆಗೆ ಹೋಗುತ್ತಿದ್ದಾಗ ಈ
ಅವಘಡ ಸಂಭವಿಸಿದೆ.
Advertisement