ಎಸ್ಸೈ ಕೆಲಸ ಕೊಡಿಸುವ ಆಮಿಷ, ಮೂವರ ಸೆರೆ

ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಹುದ್ದೆ ಕೊಡಿಸುವುದಾಗಿ ಎಸ್ಸೈ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳಿಂದ ಹಣ...
ಬಂಧಿತ  ಆರೋಪಿಗಳು
ಬಂಧಿತ ಆರೋಪಿಗಳು
Updated on

ಬೆಂಗಳೂರು: ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಹುದ್ದೆ ಕೊಡಿಸುವುದಾಗಿ ಎಸ್ಸೈ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಮೂವರನ್ನು ಸಿಸಿಬಿ  ಪೊಲೀಸರು `ಸ್ಟಿಂಗ್ ಆಪರೇಷನ್' ನಡೆಸಿ ಬಂಧಿಸಿದ್ದಾರೆ. ವಿದ್ಯಾರಣ್ಯಪುರ ನಿವಾಸಿ, ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಮೀನಾಕ್ಷಿ(48), ಆಂಧ್ರಪ್ರದೇಶದ ಚಿತ್ತೂರು ಮೂಲದ ಚಿಟ್ಟಿಬಾಬು(58) ಹಾಗೂ ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲೂಕು ಕೊಪ್ಪ ಗ್ರಾಮದ ಅಬ್ರಾಹಂ ಚಾಕೋ(59) ಬಂಧಿತರು.


ನಾಗರಿಕ ಹಾಗೂ ಸಶಸ್ತ್ರ ಎಸ್ಸೈ ಹುದ್ದೆಗಳಿಗೆ 2015ರ ಜನವರಿ 11ರಂದು ಲಿಖಿತ ಪರೀಕ್ಷೆ ನಡೆದಿದ್ದು ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಇದೇ ವೇಳೆ ಅಡ್ಡದಾರಿಯಲ್ಲಿ ಹಣ ಸಂಪಾದಿಸಲು ಮುಂದಾದ ಆರೋಪಿಗಳು, ಎಸ್ಸೈ ಪರೀಕ್ಷೆ ಬರೆದ ಆಕಾಂಕ್ಷಿಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುವ ದಂಧೆಗೆ ಇಳಿದಿದ್ದರು. ಅಲ್ಲದೇ, ಕಳದೆ ಹಲವು ದಿನಗಳಿಂದ ಎಸ್ಸೈ ಆಕಾಂಕ್ಷಿಗಳನ್ನು ಸಂಪರ್ಕಿಸಿ ಆಯ್ಕೆ ಸಮಿತಿ ಜತೆ ತಮಗೆ ಸಂಪರ್ಕವಿದ್ದು ರು.25ರಿಂದ ರು.35 ಲಕ್ಷ ಕೊಟ್ಟರೆ ಎಸ್ಸೈ ಹುದ್ದೆ ಕೊಡಿಸುತ್ತೇವೆ
ಎನ್ನುತ್ತಿದ್ದರು.

ಇಂತಹ ವಂಚಕರ ಜಾಲ ಶಿವಾನಂದ ವೃತ್ತದ ಬಳಿಯ ಮೌರ್ಯ ಹೊಟೇಲ್ ಬಳಿ ಸಕ್ರಿಯವಾಗಿದೆ ಎನ್ನುವ ಮಾಹಿತಿ ರಾಜ್ಯ ಪೊಲೀಸ್ ನೇಮಕ ಘಟಕದ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಸಿಸಿಬಿ ಕಾರ್ಯಾಚರಣೆ ಕೈಗೊಂಡಿತು. ಸ್ಟಿಂಗ್ ಆಪರೇಷನ್: ಕೂಡಲೇ ಕಾರ್ಯಪ್ರವೃತ್ತರಾದ ಸಿಸಿಬಿ ಅಧಿಕಾರಿಗಳು, ಎಸ್ಸೈ ಹುದ್ದೆಗೆ ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಯಂತೆ ಒಬ್ಬನನ್ನು ಸಿದ್ಧಪಡಿಸಿ ಹೋಟೆಲ್ ಬಳಿ ಸುತ್ತಾಡಿ ಆರೋಪಿಗಳ ಸಂಪರ್ಕ ಸಾಧಿಸಿದರು. ಗುಪ್ತ ಕ್ಯಾಮೆರಾ ಬಳಸಿ ಓಡಾಡುತ್ತಿದ್ದ ಸಿಸಿಬಿ ಸಿಬ್ಬಂದಿಗೆ ಫೆ.10ರಂದು ಆರೋಪಿ ಬಾಬು ಸಿಕ್ಕಿದ್ದ. ಆತ ಫೆ.11ರಂದು ಮೀನಾಕ್ಷಿ ಬಳಿ ಕರೆದುಕೊಂಡು ಹೋಗಿದ್ದ.

ಆಯ್ಕೆ ಪ್ರಕ್ರಿಯೆಯಲ್ಲಿ ತನಗೆ ಸಾಕಷ್ಟು ಪ್ರಭಾವವಿದೆ. ಹೀಗಾಗಿ, ಎಸ್ಸೈ ಹುದ್ದೆ ಕೊಡಿಸುವುದು ಖಚಿತ ಎಂದು ಮೀನಾಕ್ಷಿ ಸುಳ್ಳು ಹೇಳಿದ್ದಳು. ಅದಕ್ಕಾಗಿ ರು.30 ಲಕ್ಷ ನಗದು ಮುಂಗಡವಾಗಿ ನೀಡಬೇಕಾಗುತ್ತದೆ ಎಂದು ಬೇಡಿಕೆ ಇಟ್ಟಿದ್ದಳು. ಅಷ್ಟೊಂದು ಹಣವನ್ನು ಯಾವ ಗ್ಯಾರಂಟಿ ಮೇಲೆ ಕೊಡುವುದು ಎಂದು ಹೇಳಿದಾಗ, ಮೀನಾಕ್ಷಿ, ತಾನು ಎಲ್ಲಿಯೂ ಓಡಿ ಹೋಗುವುದಿಲ್ಲ. ಬೇಕೆಂದರೆ ಸಹಿ ಮಾಡಿದ ಖಾಲಿ ಚೆಕ್ ಹಾಗೂ ಗುರುತಿನ ಚೀಟಿ ಭದ್ರತೆಗೆ ನೀಡುವುದಾಗಿ ಹೇಳಿದ್ದಳು. ಅಲ್ಲದೇ ಹುದ್ದೆ ಬುಕ್ ಮಾಡಲು ಮುಂಗಡ ಹಣ ನೀಡಲೇಬೇಕಾಗುತ್ತದೆ ಎಂದಿದ್ದಳು.

ಬಲೆಗೆ ಬಿದ್ದ ವಂಚಕರು
ಫೆ.13ರಂದು ಮುಂಗಡ ರು.2 ಲಕ್ಷ ದೊಂದಿಗೆ ಮೌರ್ಯ ಹೋಟೆಲ್ ಪಕ್ಕದಲ್ಲಿರುವ ದಿ ಕಿಂಗ್‍ಡಮ್ ರೆಸ್ಟೊರೆಂಟ್‍ಗೆ ಬರಲು ಹೇಳಿದ್ದರು. ಮೀನಾಕ್ಷಿ ಜತೆಗೆ ಬಾಬು ಹಾಗೂ ಆ್ಯಂಟೋನಿ ಚಾಕೋ ಕೂಡ ಬಂದಿದ್ದರು. ಕೆಲ ಕಾಲ ಮಾತನಾಡಿದ ಆರೋಪಿಗಳು, ಎಸ್ಸೈ ಆಕಾಂಕ್ಷಿಯಾಗಿದ್ದ ಸಿಸಿಬಿ ಸಿಬ್ಬಂದಿಯಿಂದ ರು.2 ಲಕ್ಷ ಪಡೆದರು. ಅದಕ್ಕೆ ಪ್ರತಿಯಾಗಿ ಮೀನಾಕ್ಷಿ ಸಹಿ ಮಾಡಿದ ಖಾಲಿ ಚೆಕ್, ಗುರುತಿನ ಚೀಟಿ ನೀಡಿದ್ದಳು. ಕೂಡಲೇ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ಚೆಕ್, ಪ್ಯಾನ್ ಕಾರ್ಡ್, ಡೆಬಿಕ್ ಕಾರ್ಡ್ ಸೇರಿದಂತೆ ಎಲ್ಲ ದಾಖಲೆಗಳನ್ನು ವಶಪಡಿಸಿಕೊಂಡರು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com