
ಬೆಂಗಳೂರು: ತಮಿಳುನಾಡಿನ ತಾಳವಾಡಿ ಮತ್ತು ಪಿರ್ಕಾದಲ್ಲಿ ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ತಮಿಳು ಕಲಿಕೆ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಭಾಷ್ ಎಸ್.ಛಾಯಾಗೋಳ್ ಹೇಳಿದ್ದಾರೆ.
ಪ್ರಾಧಿಕಾರಕ್ಕೆ ಅನುದಾನ ಹೆಚ್ಚಿಸುವುದು ಮತ್ತು ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸುವ ವಿಚಾರ ಸಂಬಂಧ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಾಟಾಳ್ ನಾಗರಾಜ್ ಮತ್ತು ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ಸಾಹಿತಿಗಳ ಜತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ಸೋಮವಾರ ಈ ವಿಷಯ ತಿಳಿಸಿದ್ದಾರೆ.
ತಾಳವಾಡಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಈ ಹಿಂದೆ ಕನ್ನಡ ಪ್ರಥಮ ಭಾಷೆಯಾಗಿ ಕಲಿಕೆಯಾಗುತ್ತಿತ್ತು. ಆದರೆ, ತಮಿಳುನಾಡಿನಲ್ಲಿ ತಮಿಳು ಕಲಿಕೆ ಕಡ್ಡಾಯ ಎಂಬ ನಿಯಮ ಜಾರಿಗೆ ತಂದಿರುವ ಅಲ್ಲಿನ ಸರ್ಕಾರ ಗಡಿ ಪ್ರದೇಶವಾದ ತಾಳವಾಡ-ಪಿರ್ಕಾದಲ್ಲೂ ಇದೇ ನೀತಿ ಜಾರಿಗೊಳಿಸಿದೆ. ಆದರೆ, ಇದು ಸಂವಿಧಾನ ವಿರೋಧಿ ಕ್ರಮ ಎಂದು ವಾಟಾಳ್ ನಾಗರಾಜ್ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಹಮತ ವ್ಯಕ್ತಪಡಿಸಿದ ಬರಗೂರು ರಾಮಚಂದ್ರಪ್ಪ, ತಮಿನಾಡುನಾಡು ಸರ್ಕಾರದ ಈ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದೆ. ಸಂವಿಧಾನದ 351ಎ ಮತ್ತು ಬಿ ವಿಧಿ ಪ್ರಕಾರ ಭಾಷಾ ಅಲ್ಪ ಸಂಖ್ಯಾತರ ರಕ್ಷಣೆ ಮಾಡುವುದು ಆಯಾ ರಾಜ್ಯ ಸರ್ಕಾರಗಳ ಹೊಣೆ. ಈ ಕಾರಣಕ್ಕಾಗಿಯೇ ಕರ್ನಾಟಕದಲ್ಲಿ ಕನ್ನಡವೊಂದೇ ಕಡ್ಡಾಯ ಎಂದು ಘೋಷಿಸುವುದಕ್ಕೆ ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೆ ತಮಿಳುನಾಡು ರಾಜ್ಯ ಸರ್ಕಾರದ ಆದೇಶ ಬಿದ್ದು ಹೋಗುತ್ತದೆ ಎಂದು ಸಲಹೆ ನೀಡಿದರು.
Advertisement