ಚರ್ಚ್‍ಸ್ಟ್ರೀಟ್ ಸ್ಫೋಟ ತನಿಖೆಗೆ ಹೊಸ ತಂಡ
ಬೆಂಗಳೂರು: ಚರ್ಚ್‍ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಗಾಗಿ ಮೂವರು ಎಸಿಪಿಗಳನ್ನು ಒಳಗೊಂಡ ಹೊಸ ತನಿಖಾ ತಂಡವನ್ನು ರಚಿಸಿ ನಗರ ಪೊಲೀಸ್ ಆಯುಕ್ತ ಎಂ. ಎನ್. ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣದ ತನಿಖಾಧಿಕಾರಿಯಾಗಿದ್ದ ಎಸಿಪಿ ಓಂಕಾರಯ್ಯ ಅವರು ಪೊಲೀಸ್ ವರಿಷ್ಠಾಧಿಕಾರಿಯಾಗಿ(ಎಸ್‍ಪಿ) ಬಡ್ತಿ ಹೊಂದಿದ್ದು, ಗುಪ್ತಚರ ಇಲಾಖೆಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಈ ಹೊಸ ತಂಡ ರಚಿಸಲಾಗಿದೆ. ಹೊಸ ತನಿಖಾ ತಂಡದಲ್ಲಿ ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಶೋಭಾರಾಣಿ, ಹೈಕೋರ್ಟ್ ಭದ್ರತೆ ವಿಭಾಗದ ಎಸಿಪಿ ಬಿ.ಎ.ಅಂಗಡಿ ಹಾಗೂ ವಿಜಯನಗರ ಉಪ ವಿಭಾಗದ ಎಸಿಪಿ ಉಮೇಶ ಇದ್ದು, ಇವರ ನೇತೃತ್ವದಲ್ಲಿ ತಂಡ ತನಿಖೆಯನ್ನು ಮುಂದುವರಿಸಲಿದೆ.
ಡಿ.28ರಂದು ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಚೆನ್ನೈ ಮೂಲದ ಭವಾನಿ ಎಂಬುವರು ಮೃತಪಟ್ಟು, ಐವರು ಗಾಯಗೊಂಡಿದ್ದರು. ರಾಷ್ಟ್ರೀಯ ತನಿಖಾ ತಂಡ ಹಾಗೂ ನಗರ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದು, ಘಟನೆ ನಡೆದು ಒಂದೂವರೆ ತಿಂಗಳಾದರೂ ಈವರೆಗೆ ಆರೋಪಿಗಳ ಸುಳಿವು ಮಾತ್ರ ಪತ್ತೆಯಾಗಿಲ್ಲ.

