ಮಹಾರಾಣಿ ಪ್ರಮೋದಾದೇವಿಯಿಂದ ಯದುವೀರ್ ಗೋಪಾಲ್ ರಾಜ್ ಅರಸ್ ದತ್ತು ಸ್ವೀಕಾರ

ಮೈಸೂರು ಸಂಸ್ಥಾನವನ್ನು ಹಲವು ಶತಮಾನಗಳಿಂದ ಆಳಿರುವ ಯದುವಂಶದ ಉತ್ತರಾಧಿಕಾರಿಯಾಗಿ ಯದುವೀರ್ ಗೋಪಾಲ್ ರಾಜ್ ಅರಸ್ ದತ್ತು ಸ್ವೀಕಾರ ಕಾರ್ಯಕ್ರಮ ಸಾಂಗವಾಗಿ ನಡೆಯಿತು.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರು: ಮೈಸೂರು ಸಂಸ್ಥಾನವನ್ನು ಹಲವು ಶತಮಾನಗಳಿಂದ ಆಳಿರುವ ಯದುವಂಶದ ಉತ್ತರಾಧಿಕಾರಿಯಾಗಿ ಯದುವೀರ್ ಗೋಪಾಲ್ ರಾಜ್ ಅರಸ್ ದತ್ತು ಸ್ವೀಕಾರ ಕಾರ್ಯಕ್ರಮ ಸಾಂಗವಾಗಿ ನಡೆಯಿತು.

ಮೈಸೂರು ಅರಮನೆಯ ಧರ್ಮಾಧಿಕಾರಿ ಜನಾರ್ದನಾ ಅಯ್ಯಂಗಾರ ಅವರ ನೇತೃತ್ವದಲ್ಲಿ ಮೈಸೂರಿನ ಅಂಬಾವಿಲಾಸಿನಿ ಅರಮನೆಯಲ್ಲಿ ದತ್ತು ಸ್ವೀಕಾರ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಮಹಾರಾಣಿ ಪ್ರಮೋದದೇವಿಯವರು ಯದುವೀರ್ ನನ್ನು ದತ್ತು ಪಡೆದರು. ಈ ವೇಳೆ ಯದುವೀರ್ ಹೆಸರನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಅಧಿಕೃತವಾಗಿ ಬದಲಾಯಿಸಲಾಗಿದೆ.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಯದುವಂಶದ 27ನೇ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಶ್ರೀಕಂಠದತ್ತ ನರಸಿಂಹರಾಜ  ಒಡೆಯರ್ ಹಿರಿಯ ಸಹೋದರಿ ಗಾಯತ್ರಿದೇವಿ ಅವರ ಮೊಮ್ಮಗ ಯದುವೀರ ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲು ಪ್ರಮೋದಾದೇವಿ ಒಡೆಯರ್ ನಿರ್ಧರಿಸಿದ್ದರು.

ದತ್ತು ಸ್ವೀಕಾರ ಕಾರ್ಯಕ್ರಮ ಹಿಂದೂ ಧಾರ್ಮಿಕ ವಿಧಿವಿಧಾನಗಳಂತೆ ನಡೆಯಲಿದ್ದು, ಈ ಕಾರ್ಯ ಕ್ರಮದಲ್ಲಿ ರಾಜಮನೆತನಕ್ಕೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಅರಮನೆಯಲ್ಲಿ ದತ್ತು ಸ್ವೀಕಾರ ವಿಧಾನಗಳು ಮುಗಿದ ಬಳಿಕ ಸಂಜೆ 6.30 ರಿಂದ ಅರಮನೆ ಆವರಣದಲ್ಲಿ ಸಾರ್ವಜನಿಕವಾಗಿ ಬೆಳ್ಳಿ ಪಲ್ಲಕ್ಕಿ  ಉತ್ಸವ ನಡೆಯಲಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮೆರವಣಿಗೆ ಅರಮನೆಯ ಆನೆಬಾಗಿಲಿನಿಂದ ಹೊರಟು ಬಲರಾಮ ದ್ವಾರದಿಂದ ಕೋಟೆ ಗಣಪತಿ ದೇವಸ್ಥಾನ ಹಾಯ್ದು ಚಾಮರಾಜ ವೃತ್ತ ಬಳಸಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ತಲುಪಿ, ಬಳಿಕ ಅರಮನೆಯ ಜಯರಾಮ ದ್ವಾರದಿಂದ ಪ್ರವೇಶಿಸಿ, ವರಾಹ ದೇವಸ್ಥಾನದ ಕಡೆಗೆ ಹೊರಟು ಚಾಮುಂಡಿ ತೊಟ್ಟಿ ಮೂಲಕ ಮತ್ತೆ ಆನೆಬಾಗಿಲು ತಲುಪಲಿದೆ.

ಇದನ್ನು ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಸುಂದರ ಸಮಾರಂಭಕ್ಕೆ ಕಾರಣವಾಗುವ ಅರಮನೆ ದೀಪಾಲಂಕಾರದಿಂದ ಜಗಮಗಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com