
ಮೈಸೂರು: ಮೈಸೂರು ಸಂಸ್ಥಾನವನ್ನು ಹಲವು ಶತಮಾನಗಳ ಆಳಿರುವ ಯದುವಂಶದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಯದುವೀರ ಅವರ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅರಮನೆಯಲ್ಲಿ ರಾಜಮನೆತನದಿಂದ ಸಕಲ ಸಿದ್ಧತೆ ನಡೆದಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಿರಿಯ ಸಹೋದರಿ ಗಾಯತ್ರಿದೇವಿ ಅವರ ಮೊಮ್ಮಗ ಯದುವೀರ ಅವರನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲು ಪ್ರಮೋದಾದೇವಿ ಒಡೆಯರ್ ನಿರ್ಧರಿಸಿದ್ದರು. ಅದರಂತೆ ಶನಿವಾರವಷ್ಟೆ ಅಮೆರಿಕದಿಂದ ಮೈಸೂರಿಗೆ ಆಗಮಿಸಿರುವ ಯದುವೀರ ಅರಮನೆಯಲ್ಲಿ ನಡೆಯುತ್ತಿರುವ ಪೂರ್ವ ತಯಾರಿ ಕಾರ್ಯಕ್ರಮದಲ್ಲಿ ಭಾನುವಾರ ತಲ್ಲೀನರಾಗಿದ್ದರು.
ಪ್ರಮೋದಾ ದೇವಿ ಒಡೆಯರ್ ಅಣತಿಯಂತೆ ಹಿಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಡೆಸುತ್ತಿದ್ದ ಮೆರವಣಿಗೆಯ ತಾಲೀಮು ನಡೆಸಿದರು. ಮಿಥುನ ಲಗ್ನದ ಮುಹೂರ್ತ : ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್ ಅವರ ಉತ್ತರಾಧಿಕಾರಿಯಾಗುತ್ತಿರುವ ಯದುವೀರ ಅವರನ್ನು ಪ್ರಮೋದಾದೇವಿ ಒಡೆಯರ್ ಸೋಮ ವಾರ ಅಧಿಕೃತವಾಗಿ ದತ್ತು ಸ್ವೀಕರಿಸುವರು. ಗಂಟೆಗೆ ದತ್ತು ಸ್ವೀಕಾರದ ಫೆ . ೨೩ ರ ಮಧ್ಯಾಹ್ನ ೧ ಗಂಟೆಗೆ ವಿಧಿ -ವಿಧಾನಗಳು ಆರಂಭವಾಗಲಿವೆ. ಬೆಳಗಿನ ಜಾವ 5 ಗಂಟೆಗೆ ರಾಜ ಮನೆತನದ ಪುರೋಹಿತರು ಮತ್ತು ಜ್ಯೋತಿಷಿಗಳು ಶುದ್ಧೀಕರಣ ಕಾರ್ಯಕೈಗೊಳ್ಳುವ ಮೂಲಕ ದತ್ತು ಸ್ವೀಕಾರ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ.
ಯದುವೀರ ಅವರನ್ನು ದತ್ತು ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸೇರಿದಂತೆ ಯದುವೀರ ಹಾಗೂ ಅವರ ಪೋಷಕರು ಭಾನುವಾರ ಸಂಜೆಯಿಂದಲೇ ಉಪವಾಸ ವ್ರತ ಕೈಗೊಂಡಿದ್ದಾರೆ. ನಾಳೆ ಮಧ್ಯಾಹ್ನ 1.20 ರಿಂದ 1.50 ರೊಳಗೆ ಸಲ್ಲುವ ಶುಭ ಮಿಥುನ ಲಗ್ನದಲ್ಲಿ ದತ್ತು ಸ್ವೀಕಾರ ಕಾರ್ಯಕ್ರಮಗಳು ನಡೆಯಲಿವೆ . ಬಳಿಕ ಯದುವೀರ ಬಲಗಿವಿಯಲ್ಲಿ ಪ್ರಮೋದಾದೇವಿ ಒಡೆಯರ್ ಅವರು `ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್' ಎಂದು ಹೇಳುವ ಮೂಲಕ ಹೊಸದಾಗಿ ನಾಮಕರಣವಾಗಲಿದೆ. ಇದಕ್ಕೂ ಮೊದಲು ರಾಜಪುರೋಹಿತರು, ಆಗಮಿಕರಿಂದ ಹಿಂದೂ ಧರ್ಮದ ಪ್ರಕಾರ ಹಲವು ವಿಧಿ ವಿಧಾನಗಳು ಜರುಗಲಿವೆ. ಬೆಳಗ್ಗೆ ಗಣಪತಿ ಹೋಮ, ಪುಣ್ಯಾಹ ವಾಚನೆ, ದತ್ತಕ ಹೋಮ,ಪುತ್ರಭಿಕ್ಷೆ , ಪುತ್ರಾಂಗೀಕಾರ ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ನಡೆಯಲಿರುವ ದತ್ತು ಸ್ವೀಕಾರ ಸಮಾರಂಭದಲ್ಲಿ ಅರಮನೆ ರಾಜಗುರುಗಳಾದ ಪರಕಾಲ ಮಠದ ಸ್ವಾಮೀಜಿ ಪಾದಪೂಜೆ ನಡೆಯಲಿದೆ. ಶೃಂಗೇರಿ, ನಂಜನಗೂಡು, ಮೇಲುಕೋಟೆ ಸೇರಿದಂತೆ ಪ್ರಮುಖ ದೇವಾಲಯಗಳಿಂದ ತರಿಸಲಾದ ಪ್ರಸಾದ ವಿನಿಯೋಗವಾಗಲಿದೆ.
ದತ್ತು ಸ್ವೀಕಾರ ಕಾರ್ಯಕ್ರಮ ಹಿಂದೂ ಧಾರ್ಮಿಕ ವಿಧಿವಿಧಾನಗಳಂತೆ ನಡೆಯಲಿದ್ದು, ಈ ಕಾರ್ಯ ಕ್ರಮದಲ್ಲಿ ರಾಜಮನೆತನಕ್ಕೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಅರಮನೆಯಲ್ಲಿ ದತ್ತು ಸ್ವೀಕಾರ ವಿಧಾನಗಳು ಮುಗಿದ ಬಳಿಕ ಸಂಜೆ 6.30 ರಿಂದ ಅರಮನೆ ಆವರಣದಲ್ಲಿ ಸಾರ್ವಜನಿಕವಾಗಿ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮೆರವಣಿಗೆ ಅರಮನೆಯ ಆನೆಬಾಗಿಲಿನಿಂದ ಹೊರಟು ಬಲರಾಮ ದ್ವಾರದಿಂದ ಕೋಟೆ ಗಣಪತಿ ದೇವಸ್ಥಾನ ಹಾಯ್ದು ಚಾಮರಾಜ ವೃತ್ತ ಬಳಸಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ತಲುಪಿ, ಬಳಿಕ ಅರಮನೆಯ ಜಯರಾಮ ದ್ವಾರದಿಂದ ಪ್ರವೇಶಿಸಿ, ವರಾಹ ದೇವಸ್ಥಾನದ ಕಡೆಗೆ ಹೊರಟು ಚಾಮುಂಡಿ ತೊಟ್ಟಿ ಮೂಲಕ ಮತ್ತೆ ಆನೆಬಾಗಿಲು ತಲುಪಲಿದೆ.
ಇದನ್ನು ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಸುಂದರ ಸಮಾರಂಭಕ್ಕೆ ಕಾರಣವಾಗುವ ಅರಮನೆ ದೀಪಾಲಂಕಾರದಿಂದ ಜಗಮಗಿಸಲಿದೆ. ದತ್ತು ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನದಿಂದ ಅರಮನೆಗೆ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿದೆ. ಅರಮನೆಗೆ ಆಗಮಿಸಿದ ಯದುವೀರ ಅವರು ಭಾನುವಾರ ಸಂಜೆ ಯದುವಂಶದ ಕುಲದೇವತೆ, ನಾಡದೇವತೆಯಾದ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದರು. ರಾಜಮನೆತನದೊಂದಿಗೆ ಚಾಮುಂಡಿಬೆಟ್ಟಕ್ಕೆ ತೆರಳಿದ ಯದುವೀರ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.
Advertisement