ಪತ್ನಿ, ಮಗನನ್ನು ಕೊಲೆ ಮಾಡುವುದಾಗಿ ವೈದ್ಯರಿಗೆ ಬೆದರಿಕೆ: ಬಲೆಗೆ ಬಿದ್ದ ಆರೋಪಿ

ಹತ್ತು ಲಕ್ಷ ಹಣ ನೀಡದಿದ್ದರೆ ಪತ್ನಿ ಹಾಗೂ ಮಗನನ್ನು ಕೊಲೆ ಮಾಡುವುದಾಗಿ ನಗರದಪ್ರತಿಷ್ಠಿತ ಆಸ್ಪತ್ರೆ ವೈದ್ಯರಿಗೆ ಬೆದರಿಕೆ ಇ ಮೇಲ್ ಹಾಗೂ ಫೋನ್ ಕರೆ ಮಾಡಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ...
ಬಂಧಿತ ಆರೋಪಿ ಮಹಮ್ಮದ್ ವಸೀಂ
ಬಂಧಿತ ಆರೋಪಿ ಮಹಮ್ಮದ್ ವಸೀಂ

ಬೆಂಗಳೂರು: ಹತ್ತು ಲಕ್ಷ ಹಣ ನೀಡದಿದ್ದರೆ ಪತ್ನಿ ಹಾಗೂ ಮಗನನ್ನು ಕೊಲೆ ಮಾಡುವುದಾಗಿ ನಗರದ ಪ್ರತಿಷ್ಠಿತ ಆಸ್ಪತ್ರೆ ವೈದ್ಯರಿಗೆ ಬೆದರಿಕೆ ಇ ಮೇಲ್ ಹಾಗೂ ಫೋನ್ ಕರೆ ಮಾಡಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ಉಪನಗರ ಸಮೀಪದ ಶಾರದ ನಗರ ನಿವಾಸಿ ಮಹಮ್ಮದ್ ವಸೀಂ(28) ಬಂಧಿತ ಆರೋಪಿ.ಐಟಿಐ ಪೂರ್ಣಗೊಳಿಸಿದ್ದ ಆರೋಪಿ, ಮೊಬೈಲ್  ಫೋನ್ ರಿಪೇರಿ ಹಾಗೂ ಫೋನ್ ಗಳ ಡೀಲರ್ಶಿಪ್ ಪಡೆದಿದ್ದ. ಆದರೆ, ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಹೀಗಾಗಿ, ಸುಲಭವಾಗಿ ಹಣ ಸಂಪಾದಿಸಲು ವೈದ್ಯರಿಗೆ ಬೆದರಿಕೆಹಾಕಿ ಹಣ ಸುಲಿಗೆ ಮಾಡಲು ಮುಂದಾಗಿದ್ದ.

ಮೂರು ತಿಂಗಳ ಹಿಂದೆ ನಾರಾಯಣ ಹೃದಯಾಲಯದ ಖ್ಯಾತ ವೈದ್ಯರೊಬ್ಬರು ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದ್ದರು. ಆರೋಪಿಯುಅದೇ ಶಿಬಿರಕ್ಕೆ ಹೋಗಿದ್ದ. ಈ ವೇಳೆ ವೈದ್ಯರಿಂದ ದೂರವಾಣಿ ಸಂಖ್ಯೆ ಸೇರಿದಂತೆ ಇತರ ಮಾಹಿತಿ ಇರುವ ವಿಸಿಟಿಂಗ್ ಕಾರ್ಡ್ ಪಡೆದುಕೊಂಡಿದ್ದ. ವೈದ್ಯರ ಹೆಸರನ್ನು ಗೂಗಲ್ ಸರ್ಚ್ ಎಂಜಿನ್ ನಲ್ಲಿ ಹುಡುಕಾಡಿದ್ದಾನೆ. ಅಲ್ಲದೇ ಫೋಸ್ಬುಕ್ ನಲ್ಲಿ ಹುಡುಕಾಟ ನಡೆಸಿದಾಗ ವೈದ್ಯರು ಪತ್ನಿ ಹಾಗೂ ಮಗನೊಂದಿಗೆ ಇರುವ ಫೋಟೊಗಳು ಕಂಡಿವೆ. ಹೀಗಾಗಿ, ಅವರನ್ನೇ ಅಪಹರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರೆ ಅವರು ಹಣ ನೀಡಬಹುದು ಎಂದು ಯೋಜಿಸಿದ್ದ.

ಇ ಮೇಲ್ ಬೆದರಿಕೆ: ಅಪ್ಸರ್ ಹೆಸರಿನಲ್ಲಿ ಕಳೆದ ಆರೇಳು ವಾರಗಳಿಂದ ವೈದ್ಯರಿಗೆ ಇ ಮೇಲ್ ಮಾಡಿ ರು.10 ಲಕ್ಷ ನೀಡಬೇಕು. ಇಲ್ಲದಿದ್ದರೆ ನಿಮ್ಮ ಹೆಂಡತಿ ಮಕ್ಕಳನ್ನು ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ. ಆರಂಭದಲ್ಲಿ ವೈದ್ಯರು ಬೆದರಿಕೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಸಂದೇಶಗಳ ಜತೆ ಫೋನ್ ಕರೆಗಳು ಹೆಚ್ಚಾದಾಗ ಆತಂಕಗೊಂಡು ಜ.19ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

 ಭೀತಿಯಿಂದ ಹಲವು ದಿನಗಳಿಂದ ಮಗನನ್ನು ಶಾಲೆಗೆ ಕಳುಹಿಸುವುದನ್ನೇ ನಿಲ್ಲಿಸಿದ್ದರು. ದೂರಿನ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಇ ಮೇಲ್ ನ ಬಗ್ಗೆ ಇಂಟರ್ನೆಟ್ ಪ್ರೊಟೋಕಾಲ್(ಐಪಿ) ವಿಳಾಸ ಪತ್ತೆ ಮಾಡಿದ್ದರು. ಆದರೆ, ಆರೋಪಿ ಬೇರೆ ಬೇರೆ ದಿನಗಳಂದು ಸಿಸಿಟಿವಿ ಕ್ಯಾಮೆರಾ ಅಳವಡಿಸದೆ ಇರುವ ಶಿವಾಜಿನಗರ, ನಾಗವಾರ, ರಾಮಮೂರ್ತಿನಗರ ಮತ್ತು ಬಂಗಾರಪೇಟೆ ಸೈಬರ್ ಕೆಫೆಗಳಿಗೆ ತೆರಳಿ ವೈದ್ಯರಿಗೆ ಬೆದರಿಕೆ ಇ ಮೇಲ್ ಮಾಡುತ್ತಿದ್ದ. ಸೈಬರ್ ಕೇಂದ್ರದಲ್ಲಿರುವ ಲಾಗ್ ಪುಸ್ತಕದಲ್ಲಿ ತಪ್ಪು ಹೆಸರು, ದೂರವಾಣಿ ಸಂಖ್ಯೆ ಬರೆಯುತ್ತಿದ್ದ.

ಅಷ್ಟೇ ಅಲ್ಲದೆ, ನಗರದ ಟ್ಯಾನರಿ ರಸ್ತೆ, ಚಿಕ್ಕಬಳ್ಳಾಪುರ ಹಾಗೂ ಆಂಧ್ರಪ್ರದೇಶದ ಹಿಂದೂಪುರಗಳಲ್ಲಿರುವ ಕಾಯಿನ್ ಬಾಕ್ಸ್ಗಳಿಂದ ವೈದ್ಯರಿಗೆ ಫೋನ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದ. ಹೀಗಾಗಿ, ಆರೋಪಿಯ ಬಂಧನ ಕಷ್ಟಕರವಾಗಿತ್ತು. ಕೊನೆಗೆ ಪೊಲೀಸರು ವೈದ್ಯರಿಂದಲೇ ಹಣ ಕೊಡಿಸುವ ಯೋಜನೆ ರೂಪಿಸಿದರು.

ಹಣ ಕೊಡುವ ನೆಪದಲ್ಲಿ ಅರೆಸ್ಟ್

ಮೊದಲು ರು.10 ಲಕ್ಷ ಕೇಳಿದ್ದ ಆರೋಪಿ, ಬಳಿಕ ರು20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಫೆ.24 ರಂದು ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಣ ತರುವಂತೆ ಹೇಳಿದ್ದ. ಹೀಗಾಗಿ, ಮಫ್ತಿಯಲ್ಲಿ ಪೊಲೀಸರು ಕೆಟ್ಟು ಹೋಗಿದ್ದ ಲಾರಿ ರಿಪೇರಿ ಮಾಡುವ ನೆಪದಲ್ಲಿ ಆರೋಪಿಗಾಗಿ ಕಾಯುತ್ತಿದ್ದರು. ಹಣ ನೀಡಲು ಬಂದವರಂತೆ ವೈದ್ಯ ದಂಪತಿ ಹೇಳಿದ ಸ್ಥಳಕ್ಕೆ ಹೋಗಿದ್ದರು. ಮಂಗಳವಾರ ಇಡೀ ದಿನ ಕಾಯ್ದರು ಆರೋಪಿ ಬಂದಿರಲಿಲ್ಲ. ಆದರೆ, ಬುಧವಾರ ಬೆಳಗ್ಗೆ ದಂಪತಿಯಿಂದ ಹಣ ಪಡೆಯಲು ವಸೀಂ ಬರುತ್ತಿದ್ದಂತೆ ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com