
ಬೆಂಗಳೂರು: ರಾಜ್ಯದ ಹೊಸ ಪೊಲೀಸ್ ಮಹಾನಿರ್ದೇಶಕರನ್ನಾಗಿ ಯಾರನ್ನು ನೇಮಕ ಮಾಡಬೇಕೆಂಬ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನೂ ಗೊಂದಲದಲ್ಲಿ ಮುಳುಗಿದೆ. ಹಾಲಿ ಡಿಜಿಪಿ ಲಾಲ್ ರುಕಾಮ್ ಪಚಾವೋ ಅವರ ಅಧಿಕಾರಾವಧಿ ಶುಕ್ರವಾರ ಮುಕ್ತಾಯಗೊಳ್ಳಲಿದ್ದು, ಆರ್.ಕೆ.ದತ್ತಾ ಮತ್ತು ಓಂ ಪ್ರಕಾಶ್ ಅವರ ಪೈಕಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ವಿಚಾರದಲ್ಲಿ ಇನ್ನೂ ಗೊಂದಲ ಪರಿಹಾರವಾಗಿಲ್ಲ. ಹೀಗಾಗಿ ಗುರುವಾರ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಸರ್ಕಾರದ ವಿವಿಧ ಹಂತದಲ್ಲಿ ಈ ಸಂಬಂಧ ಸಭೆ ನಡೆದಿವೆಯಾದರೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ಪದ್ಧತಿ ಪ್ರಕಾರ ನಿವೃತ್ತಿಗೆ ಸಜ್ಜಾಗಿರುವ ಹಾಲಿ ಡಿಜಿಪಿ ಪಚಾವೋ ಅವರಿಗೆ ನಿರ್ಗಮನ ಪಥ ಸಂಚಲನ ನೀಡಲು ಪೊಲೀಸ್ ಇಲಾಖೆ ಪದ್ದತಿ ಪ್ರಕಾರ ಸಿದ್ದವಾಗಿದೆ. ಆದರೆ ಸಾಯಂಕಾಲ ಪಚಾವೋ ಯಾರಿಗೆ ಅಧಿಕಾರ ದಂಡ ಹಸ್ತಾಂತರಿಸಲಿದ್ದಾರೆ ಎಂಬುದು ಮಾತ್ರ ಇನ್ನೂ ಬಗೆಹರಿದಿಲ್ಲ. ಸೇವಾ ಜೇಷ್ಠತೆ ಪ್ರಕಾರ ಸುಶಾಂತ್ ಮಹಾಪಾತ್ರ, ಓಂಪ್ರಕಾಶ್, ಆರ್. ಕೆ.ದತ್ತಾ ಹಾಗೂ ಬಿಪಿನ್ ಗೋಪಾಲ್ ಕೃಷ್ಣ ಸರ್ಕಾರ ಕೇಂದ್ರ ಲೋಕಸೇವಾ ಆಯೋ ಗಕ್ಕೆ ಕಳುಹಿಸಿದ ಅರ್ಹತಾ ಪಟ್ಟಿಯಲ್ಲಿದ್ದಾರೆ. ಆದರೆ ಸೇವಾ ದಕ್ಷತೆ ಆಧಾರದ ಮೇಲೆ ದತ್ತಾ ಮತ್ತು ಓಂ ಪ್ರಕಾಶ್ ಅವರತ್ತ ಸಿಎಂ ಸಿದ್ದರಾಮಯ್ಯ ಒಲವು ಹೊಂದಿದ್ದಾರೆ. ಗುರುವಾರ ನಡೆದ ಸಭೆಯಲ್ಲಿ ಯಾವುದೇ ನಿರ್ಧಾರ ಪ್ರಕಟವಾಗದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳು ಮತ್ತು ಗೃಹ ಸಚಿವರ ಜತೆ ಸಭೆ ನಡೆಸಿ ಅಧಿಕೃತವಾಗಿ ಪೋಲೀಸ್ ಮಹಾನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ ಎಂಬುದನ್ನು ಪ್ರಕಟಿಸಲಿದ್ದಾರೆ. ಆದರೆ ಪೊಲೀಸ್ ವಲಯದಲ್ಲಿ ಓಂಪ್ರಕಾಶ್ ಅವರು ಪೋಲೀಸ್ ಮಹಾನಿರ್ದೇಶಕರಾಗಿ ಆಯ್ಕೆಗೊಳ್ಳುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆಯಾದರೂ, ಖಚಿತಗೊಂಡಿಲ್ಲ.
Advertisement