ಮಾಧ್ಯಮ ಸ್ವಯಂ ನಿಯಂತ್ರಣ ಹೇರಿಕೊಳ್ಳಲಿ

ಟಿಆರ್‌ಪಿ ಎನ್ನುವುದು ಬ್ಲಡ್ ಪ್ರೆಶರ್ ರೇಟಿಂಗ್ ಪಾಯಿಂಟ್ ಆಗಿದೆ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಮಾಧ್ಯಮಗಳನ್ನು ನಿಯಂತ್ರಿಸುವ ಕೆಲಸಕ್ಕೆ ಸರ್ಕಾರ ಕೈ ಹಾಕುವುದಿಲ್ಲ, ಆದರೆ ಮಾಧ್ಯಮ ಸಂಸ್ಥೆಗಳೇ ಸ್ವಯಂ ನಿಯಂತ್ರಣ ಹೇರಿಕೊಂಡು ಮಾರ್ಗದರ್ಶಿ ಸೂತ್ರ ರೂಪಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಾಧ್ಯಮಗಳನ್ನು ನಿಯಂತ್ರಿಸುವುದು ಸಮಂಜಸವಲ್ಲ. ಆದರೆ ಮಾಧ್ಯಮಗಳು ಸ್ವೇಚ್ಛೆಯಿಂದ ವರ್ತಿಸುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಮಾಧ್ಯಮ ಸಂಸ್ಥೆಗಳೇ ಈ ಬಗ್ಗೆ ಚಿಂತಿಸಬೇಕಿದು.

ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ಅದು ಅನಿವಾರ್ಯವೂ ಹೌದು ಎಂದು ಅವರು ದಿ ಗ್ಲೋಬಲ್ ಕಮ್ಯುನಿಕೇಷನ್ ಅಸೋಸಿಯೇಷನ್ ಆಯೋಜಿಸಿದ್ದ 9ನೇ ಸಮ್ಮೇಳನಕ್ಕೆ ಚಾಲನೆ ನೀಡಿ ಅಭಿಪ್ರಾಯಪಟ್ಟರು.

ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳು ಸತ್ಯಕ್ಕಿಂತ ಹೆಚ್ಚಾಗಿ ರೋಚಕ ವಿಷಯಗಳೆಡೆಗೆ ಹೆಚ್ಚು ಗಮನ ನೀಡುತ್ತವೆ. ಪರಿಣಾಮವಾಗಿ ವಿಶ್ವಾಸಾರ್ಹತೆ ಕುಂದುತ್ತಿದೆ. ಇವಕ್ಕೆ ಹೋಲಿಸಿದಲ್ಲಿ ಮುದ್ರಣ ಮಾಧ್ಯಮಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.

ರಚನಾತ್ಮಕ ಟೀಕೆಗಳನ್ನು ಎಲ್ಲ ಸರ್ಕಾರಗಳೂ ಸ್ವಾಗತಿಸುತ್ತವೆ. ರೋಚಕ ಸುದ್ದಿಗಳಿಗಾಗಿ ಸತ್ಯವನ್ನು ಮರೆಮಾಚುವ ಕೆಲಸ ನಡೆಯಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ಇದರೊಂದಿಗೆ ಸಾಮಾಜಿಕ ತಾಣಗಳು ಮಾಧ್ಯಮ ಪ್ರಪಂಚದಲ್ಲಿ ಹೊಸ ಕ್ರಾಂತಿ ಮಾಡುತ್ತಿವೆ. ಜನರನ್ನು ತಲುಪಲು ಇದು ಉತ್ತಮ ಮಾರ್ಗವೂ ಹೌದು. ಆದರೆ ಸಾಮಾಜಿಕ ತಾಣಗಳಲ್ಲಿ ಟೀಕೆ ಅಥವಾ ವಿಷಯಗಳು ವ್ಯಕ್ತಿಗತವಾಗಿರದೇ ವಿಷಯಾಧಾರಿತವಾಗಿರಬೇಕು. ಆಗ ಸಾಮಾಜಿಕ ತಾಣಗಳ ಉದ್ದೇಶ ಈಡೇರುತ್ತದೆ ಎಂದರು.

ಟಿಆರ್‌ಪಿ ಎಂಬ ಅನಾರೋಗ್ಯಕರ ಗೀಳು
ಮಾಧ್ಯಮ ಕ್ಷೇತ್ರದಲ್ಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್(ಟಿಆರ್‌ಪಿ) ಎಂಬ ವಿಚಾರವೂ ಅನಾರೋಗ್ಯಕರ ಗೀಳು ಸೃಷ್ಟಿಸಿದೆ. ಟಿಆರ್‌ಪಿಗಾಗಿ ಬಹುತೇಕ ವಿದ್ಯುನ್ಮಾನ ಮಾಧ್ಯಮಗಳು ಮಾರಾಮಾರಿ ನಡೆಸುತ್ತಿವೆ.

ಟಿಆರ್‌ಪಿ ಎನ್ನುವುದು ಬ್ಲಡ್ ಪ್ರೆಶರ್ ರೇಟಿಂಗ್ ಪಾಯಿಂಟ್ ಆಗಿದೆ. ಇದು ಬದಲಾಗಬೇಕಿದ್ದು, ಈ ನಿಟ್ಟಿನಲ್ಲಿ ಡಿಡಿ ನ್ಯೂಸ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಟಿಆರ್‌ಪಿ ಗೀಳಿನಿಂದ ಬೇಸತ್ತವರಿಗೆ ಆರೋಗ್ಯಕರ ಸುದ್ದಿಯನ್ನು ನೀಡಲಾಗುತ್ತಿದೆ ಎಂದು ಪ್ರಸಾರ ಭಾರತಿ ಅಧ್ಯಕ್ಷ ಡಾ.ಎ.ಸೂರ್ಯಪ್ರಕಾಶ್ ಹೇಳಿದರು.

ಇಂದು ಅಭಿವೃದ್ಧಿ ಪಥದಲ್ಲಿರುವ ಎಲ್ಲ ಮಾಧ್ಯಮಗಳಿಗೆ ನ್ಯೂ ಮೀಡಿಯಾ ಸವಾಲು ಒಡ್ಡಲಿದೆ. ಸಾರ್ವಜನಿಕರಿಗೆ ಇದು ದಿನದಿಂದ ದಿನಕ್ಕೆ ಹತ್ತಿರವಾಗುತ್ತಿದೆ. ಆದರೆ ಮಾಧ್ಯಮ ಸಂಸ್ಥೆಗಳು ಅದಕ್ಕೆ ತಕ್ಕಂತೆ ಬದಲಾವಣೆ ಕಾಣಬೇಕಿದೆ. ಸಂಕ್ಷಿಪ್ತವಾಗಿ ಸಂಪೂರ್ಣ ಸುದ್ದಿಗಳನ್ನು ನೀಡುವ ಜತೆಗೆ ಸುಲಭವಾಗಿ ಸಾಮಾನ್ಯ ಮೊಬೈಲ್‌ಗಳಲ್ಲಿಯೂ ದೊರಕುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com