ಸುದರ್ಶನ್ ವಿರುದ್ಧ ಇನ್ನೊಂದು ಭೂ ಒತ್ತುವರಿ ಆರೋಪ

ಜ್ಯೋತಿ ಎಜ್ಯುಕೇಷನ್ ಟ್ರಸ್ಟ್‌ಗೆ 10 ಎಕರೆ ಕೆರೆ ಜಮೀನು ಮಂಜೂರು ಮಾಡಿಸಿದ್ದಾರೆ ಎಂದು ಆರೋಪ...
ವಿ.ಆರ್.ಸುದರ್ಶನ್
ವಿ.ಆರ್.ಸುದರ್ಶನ್

ಬೆಂಗಳೂರು: ಕೆಪಿಎಸ್‌ಸಿ ನೇಮಕ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಂಡಿರುವ ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ವಿರುದ್ಧ ಬಿಜೆಪಿ ಇನ್ನೊಂದು ಭೂ ಒತ್ತುವರಿ ಆರೋಪ ಮಾಡಿದೆ.

ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಬಿ.ಜಿ.ಪುಟ್ಟಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ಗೌಡ, ಸುದರ್ಶನ್ ಸಭಾಪತಿ ಆಗಿದ್ದ ಸಂದರ್ಭದಲ್ಲಿ ತಮ್ಮ ಪ್ರಭಾವ ಬಳಸಿ ತಮ್ಮ ಪತ್ನಿ ಹೆಸರಿನಲ್ಲಿ ಇರುವ ಜ್ಯೋತಿ ಎಜ್ಯುಕೇಷನ್ ಟ್ರಸ್ಟ್‌ಗೆ 10 ಎಕರೆ ಕೆರೆ ಜಮೀನು ಮಂಜೂರು ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದಕ್ಕೆ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿರುವ ಸುದರ್ಶನ್, ಈ ಆರೋಪ ಶುದ್ಧ ಸುಳ್ಳು. ಬಿಜೆಪಿ ಶಾಸಕರು ಆಧಾರ ರಹಿತವಾಗಿ ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಜ್ಯೋತಿ ಟ್ರಸ್ಟ್‌ಗೂ ನಮ್ಮ ಕುಟುಂಬ ವರ್ಗಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಶಿಫಾರಸು ಮಾಡಿದ ಜಾಗಕ್ಕೆ ಕೆರೆಯ ಲಕ್ಷಣವೇ ಇರಲಿಲ್ಲ ಎಂದು ಹೇಳಿದ್ದಾರೆ.

ರಾಜ್ಯಪಾಲರಿಗೆ ಪತ್ರ: ಸುದರ್ಶನ್ ವಿರುದ್ಧ ನೇರ ಆರೋಪ ಮಾಡಿದ ಪುಟ್ಟಸ್ವಾಮಿ, ಸುದರ್ಶನ್ ಕೆರೆ ಜಮೀನನ್ನೇ ನುಂಗಲು ಹೋಗಿದ್ದರು. ಅವರು ಪ್ರಾಮಾಣಿಕರಲ್ಲ. ಹೀಗಾಗಿ ಅವರನ್ನು ಕೆಪಿಎಸ್‌ಸಿಯಂಥ ಹುದ್ದೆಗೆ ನೇಮಕ ಮಾಡಬಾರದು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧದ ದಾಖಲೆ ಸಮೇತ ರಾಜ್ಯಪಾಲರಿಗೆ ಎರಡು ಪುಟಗಳ ವರದಿ ಕಳುಹಿಸಲಾಗುವುದು ಎಂದರು.

ಸುದರ್ಶನ್ ಸಭಾಪತಿ ಆಗಿದ್ದಾಗ 2003ರಲ್ಲಿ ಅಂದಿನ ಕಂದಾಯ ಸಚಿವರಿಗೆ ಪತ್ರ ಬರೆದು ಕೋಲಾರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಸವನಪ್ಪ ಗ್ರಾಮದಲ್ಲಿ ಕೆರೆಗೆ ಸೇರಿದ 10.19 ಎಕರೆ ಜಾಗವನ್ನು ತಮ್ಮ ಪತ್ನಿ ಮತ್ತು ಸಂಬಂಧಿಗಳು ಟ್ರಸ್ಟಿಗಳಾಗಿರುವ ಜ್ಯೋತಿ ಎಜ್ಯುಕೇಶನ್ ಟ್ರಸ್ಟ್‌ಗೆ ಮಂಜೂರು ಮಾಡುವಂತೆ ಒತ್ತಡ ಹೇರಿದ್ದರು. ಸರ್ಕಾರ ಮಂಜೂರು ಮಾಡಿತ್ತು. ಆದರೆ ಈ ಬಗ್ಗೆ ಕೆಎಟಿ ತಡೆ ನೀಡಿತ್ತು.

ಈಗ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಈ ಜಾಗದಲ್ಲಿ ಹಾಸ್ಟೆಲ್ ಹೆಸರಿನಲ್ಲಿ ನಿರ್ಮಿಸಿರುವ ಕಟ್ಟಡವನ್ನು ಹಿಂದುಳಿದ ವರ್ಗದ ಹಾಸ್ಟೆಲ್‌ಗೆ ಮಾಸಿಕ ರೂ.1.35 ಲಕ್ಷಕ್ಕೆ ಬಾಡಿಗೆ ನೀಡಿದ್ದಾರೆ. ಅಲ್ಲಿದ್ದ ವಿದ್ಯಾರ್ಥಿಗಳನ್ನು ಓಡಿಸಿದ್ದಾರೆ ಎಂದು ಆರೋಪಿಸಿದರು.

ಈ ಆರೋಪ ನಿರಾಕರಿಸಿರುವ ಸುದರ್ಶನ್, ನಮ್ಮ ಸಮುದಾಯದವರು ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕಂದಾಯ ಸಚಿವರಿಗೆ ನಾನು ಶಿಫಾರಸು ಪತ್ರ ನೀಡಿದ್ದೇನೇ ವಿನಾ, ಆದೇಶ ಮಾಡಿಲ್ಲ. ಪುಟ್ಟಸ್ವಾಮಿ ಅವರ ಆದೇಶ ಸಂಪೂರ್ಣ ಸುಳ್ಳು.

ಕಟ್ಟಡದ ಮೊದಲನೇ ಮಹಡಿಯಲ್ಲಿ ಹಾಸ್ಟೆಲ್ ಇದೆ. ಎರಡು ಮತ್ತು ಮೂರನೇ ಮಹಡಿ ಮಾತ್ರ ಬಾಡಿಗೆ ನೀಡಿದ್ದಾರೆ. ಬಿಜೆಪಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com