ಪಿಕೆ ವೈಚಾರಿಕ ಪ್ರಜ್ಞೆಯ ಚಿತ್ರ

ಅಮೀರ್‌ಖಾನ್ ಅಭಿನಯದ 'ಪಿಕೆ' ಒಂದು ವೈಚಾರಿಕ ಪ್ರಜ್ಞೆಯ ಚಿತ್ರ. ಇಂಥ ಚಿತ್ರವನ್ನು...
ಪಿಕೆ ವೈಚಾರಿಕ ಪ್ರಜ್ಞೆಯ ಚಿತ್ರ

ಬೆಂಗಳೂರು: ಅಮೀರ್‌ಖಾನ್ ಅಭಿನಯದ 'ಪಿಕೆ' ಒಂದು ವೈಚಾರಿಕ ಪ್ರಜ್ಞೆಯ ಚಿತ್ರ. ಇಂಥ ಚಿತ್ರವನ್ನು ಧಾರ್ಮಿಕ ವಿಚಾರಗಳಿಗೆ ತಳಕು ಹಾಕಿ ವಿರೋಧಿಸುವವರದ್ದು ರೋಗಗ್ರಸ್ತ ಮನಸ್ಸು. ಜತೆಗೆ ಅವರು ವೈಚಾರಿಕತೆಯ ವಿರೋಧಿಗಳು ಎಂದು ಸಾಹಿತಿ, ನಾಟಕಕಾರ ಗಿರೀಶ್ ಕಾರ್ನಾಡ್ ದೂರಿದರು.

ಸಿಪಿಎಂನ 21ನೇ ರಾಜ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಶನಿವಾರ ಟೌನ್‌ಹಾಲ್ ಎದುರು ಆಯೋಜಿಸಿದ್ದ 'ಪಿಕೆ' ಚಿತ್ರ ಸಂವಾದ ಕಾರ್ಯಕ್ರಮದಲ್ಲಿ ಅಳರು ಮಾತನಾಡಿ, ಬದ್ಧತೆ, ಕಾಳಜಿ ಇಲ್ಲದ ಪಲಾಯನವಾದದ ಕಮರ್ಷಿಯಲ್ ಚಿತ್ರಗಳೇ ಇಂದು ಹೆಚ್ಚು ಬರುತ್ತಿವೆ.

ಈ ಹೊತ್ತಿನಲ್ಲಿ ಬಂದ ಪಿಕೆ ಕಥೆಯೊಂದಿಗೆ ತಾಂತ್ರಿಕತೆ, ಸಂಭಾಷಣೆ ಸೇರಿದಂತೆ ಎಲ್ಲ ವಿಧಗಳಲ್ಲೂ ಸುಂದರವಾಗಿ ಮೂಡಿಬಂದಿದೆ. ಇಂಥದ್ದೊಂದು ಚಿತ್ರವೇಕೆ ವಿವಾದಕ್ಕೆ ಕಾರಣವಾಗಿದೆಯೋ ಗೊತ್ತಿಲ್ಲವೆಂದರು.

ಅಮೀರ್‌ಖಾನ್ ಹಿಂದೂ ಆಗಿದ್ದರೆ, ಯಾರೂ ಆ ಬಗ್ಗೆ ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ, ಆತ ಮುಸಲ್ಮಾನ ಎಂಬ ಕಾರಣಕ್ಕೆ ಪಿಕೆ ಚಿತ್ರದಲ್ಲಿನ ವೈಚಾರಿಕ ಸಂಗತಿಗಳನ್ನು ಪ್ರಶ್ನಿಸಲಾಗಿದೆ. ಇದು ಅಮೀರ್ ಖಾನ್ ಅವರ ವಿರುದ್ಧ ಮಾತ್ರವಲ್ಲ, ವೈಚಾರಿಕತೆ ವಿರುದ್ಧ ನಡೆಯುತ್ತಿರುವ ಗೂಂಡಾಗಿರಿ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾಜದಲ್ಲಿ ಧರ್ಮದ ಶೋಷಣೆಗಳನ್ನು ಪ್ರಶ್ನಿಸುತ್ತಿರುವುದು ಇದೇ ಮೊದಲಲ್ಲ. ಕನ್ನಡದ ಮೊದಲ ಕಾದಂಬರಿ ಇಂದಿರಾದಲ್ಲೂ ಈ ಪ್ರಯತ್ನ ನಡೆದಿತ್ತು. ಅದೇ ದಾರಿಯಲ್ಲಿ ಈಗ ಅಮೀರ್‌ಖಾನ್ ಅಭಿನಯದ ಪಿಕೆ ಧರ್ಮದ ಹೆಸರಲ್ಲಿ ನಡೆಯುವ ಶೋಷಣೆಯ ಸಂಗತಿಗಳನ್ನು ಮನರಂಜನೆಯ ರೂಪದಲ್ಲಿ ಕಟ್ಟಿಕೊಟ್ಟಿದೆ. ಹೀಗಾಗಿ ಇದನ್ನು ವಿರೋಧಿಸುವುದರ ಹಿಂದೆ, ಯಾವುದೇ ನೈಜ ಸಂಗತಿಗಳು ಕಾಣುತ್ತಿಲ್ಲ ಎಂದರು.

ಸಂಗೀತ, ನಾಟಕ ಮತ್ತು ಸಿನಿಮಾಗಳು ಜನರನ್ನು ಕೂರಿಸುವ ಶಕ್ತಿ ಹೊಂದಿವೆ. ಮನರಂಜನೆ ಸಿಗುತ್ತದೆ. ಆದರೆ, ಈಗ ಇವುಗಳನ್ನೇ ತಡೆಯಲಾಗುತ್ತಿದೆ. ಹಿಂದೆ ಸಂಸ್ಕಾರ ಚಿತ್ರ ಬಿಡುಗಡೆಯಾದಾಗಲೂ ಹೀಗೆ ಆಗಿತ್ತು.

ಆದರೆ, ಆಗ ನಮಗೆ ತಡೆಯುವ ಶಕ್ತಿ ಇತ್ತು. ಇವತ್ತು ಪುಸ್ತಕಗಳು, ಸಿನಿಮಾಗಳ ಮೇಲೆ ನಡೆಯುವ ದಾಳಿಗಳನ್ನು ತಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ.

ಡಾವೆಂಚಿ ಕೋಡ್ ಸಿನಿಮಾ ಬಂದಾಗ ಮೂಲ ದೇಶಗಳಲ್ಲಿಯೇ ಅದನ್ನು ತಡೆಯುವ ಯತ್ನಗಳು ನಡೆಯಲಿಲ್ಲ. ಆದರೆ, ಇಲ್ಲಿ ತಡೆಯಲು ಯತ್ನಿಸಲಾಗಿತ್ತು. ನಾವು ವಾಸ್ತವವನ್ನು ಅರಿಯದಂಥ ಮೂರ್ಖರಾಗಿದ್ದೇವೆಂದು ತರಾಟೆಗೆ ತೆಗೆದುಕೊಂಡರು.

ಪಿಕೆ ಕಡಿಮೆ ಬಜೆಟ್ ಸಿನಿಮಾ ಅಲ್ಲ. ಇಂಥ ಸಿನಿಮಾಗಳನ್ನು ಮೆಚ್ಚಿಕೊಳ್ಳಬೇಕು. ಅಭಿನಂದಿಸಬೇಕು. ರಾಜ್ಯಸರ್ಕಾರ ಇದಕ್ಕೆ ತೆರಿಗೆ ವಿನಾಯಿತಿ ನೀಡಬೇಕಿತ್ತು. ಜತೆಗೆ ಇಂಥ ಸಿನಿಮಾಗಳು ಬಂದಾಗ ಮುಕ್ತವಾಗಿ ನೋಡುವಂಥ ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.

ಸಾಹಿತಿ ಮರುಳ ಸಿದ್ಧಪ್ಪ ಮಾತನಾಡಿ, ಶೋಷಣೆಗೆ ಬಳಸಿಕೊಳ್ಳುವ ಧರ್ಮ ಮತ್ತು ದೇವರನ್ನು ಇಲ್ಲಿ ವಿಡಂಬನೆಗೆ ಒಳಪಡಿಸುವ ಪ್ರಯತ್ನ ನಡೆದಿದೆ. ಚಿತ್ರ ವಿರೋಧಿಸುವವರು ಅಭಿವ್ಯಕ್ತಿ ಸ್ವತಂತ್ರ್ಯ ದಮನಮಾಡುತ್ತಿದ್ದಾರೆಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com