ಮುಖ್ಯಮಂತ್ರಿ ದಿಲ್ಲಿಗೆ ರಾಜ'ಕಾರಣ'ವೇನು?

ಸಿಎಂ ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸದ ಗುಟ್ಟೇನು? ರಾಜ್ಯ ರಾಜಕಾರಣದಲ್ಲಿ ಇದು ಹೆಚ್ಚು ಚರ್ಚಿತ ಸಂಗತಿ. ಪಕ್ಷ ಸಂಘಟನೆ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಕರೆದ ಸಭೆ ಮುಕ್ತಾಯಗೊಂಡ...
ಸೋನಿಯಾ ಗಾಂಧಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ
ಸೋನಿಯಾ ಗಾಂಧಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸದ ಗುಟ್ಟೇನು? ರಾಜ್ಯ ರಾಜಕಾರಣದಲ್ಲಿ ಇದು ಹೆಚ್ಚು ಚರ್ಚಿತ ಸಂಗತಿ.

ಪಕ್ಷ ಸಂಘಟನೆ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಕರೆದ ಸಭೆ ಮುಕ್ತಾಯಗೊಂಡ ಎರಡು ದಿನಗಳ ಬಳಿಕ 'ಪಕ್ಷ ಸಂಘಟನೆ' ಸಭೆಯಲ್ಲಿ ಭಾಗಿಯಾಗುತ್ತಿರುವ ಸುದ್ದಿ ಹರಡಿಸಿ ಗೃಹ ಸಚಿವ ಕೆ.ಜೆ.ಜಾರ್ಜ್ ಜತೆ ಸಿದ್ದರಾಮಯ್ಯ ದೆಹಲಿಗೆ ಹಾರಿರುವುದೇ ಈ ಎಲ್ಲ ಕುತೂಹಲಕ್ಕೆ ಮೂಲ ಕಾರಣ.

ಜತೆಗೆ ಸಿಎಂ ಕಾರ್ಯಾಲಯದ ಅಧಿಕೃತ ಪ್ರವಾಸ ಪಟ್ಟಿಯಲ್ಲಿ 'ಹೈಕಮಾಂಡ್ ಜತೆ ಚರ್ಚೆ' ಎಂಬ ಪದ ಪ್ರಯೋಗವೇ ಇಲ್ಲ. ಬದಲಾಗಿ ಕೇಂದ್ರ ಸಚಿವರ ಭೇಟಿ ಎಂಬ ಉಲ್ಲೇಖವಿದ್ದು, ಶಿಷ್ಟಾಚಾರ ವಿಧಿ ವಿಧಾನ ಅನುಸರಿಸುವಂತೆ ದೆಹಲಿ ಕರ್ನಾಟಕ ಭವನದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಈ ಪತ್ರದಲ್ಲೂ ಕೆಲವು ಅನುಮಾನಾಸ್ಪದ ಸಂಗತಿಗಳಿವೆ. ಸಿಎಂ ಎಷ್ಟು ಹೊತ್ತಿಗೆ, ಕೇಂದ್ರದ ಯಾವ ಸಚಿವರನ್ನು ಭೇಟಿಯಾಗುತ್ತಾರೆ ಎಂಬ ಪ್ರಸ್ತಾಪವಿಲ್ಲ. ಬದಲಾಗಿ ಸಿದ್ದರಾಮಯ್ಯನವರು ವಿಶೇಷ ವಾಮಾನದಲ್ಲಿ ದೆಹಲಿಗೆ ಆಗಮಿಸುವ ಮತ್ತು ನಿರ್ಗಮಿಸುವ ವಿಚಾರ ಮಾತ್ರವಿದ್ದು, ತುರ್ತು ದೆಹಲಿ ಭೇಟಿ ಹಿಂದೆ ಜಟಿಲ ರಾಜ'ಕಾರಣ'ವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಹಿಂದೆ ಅಂದರ ಜ.7ರಂದೇ ಅವರು ಸೋನಿಯಾ ಗಾಂಧಿಯವರಿಗೆ ಹೊಸ ವರ್ಷದ ಶುಭಾಶಯ ಹೇಳಲು ದೆಹಲಿಗೆ ತೆರಳಬೇಕಿತ್ತು. ಆದರೆ ಕಾಂಗ್ರೆಸ್ ಅಧಿನಾಯಕಿಯ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಪ್ರವಾಸ ರದ್ದಾಗಿತ್ತು.

ಈ ನಡುವೆ ಅರ್ಕಾವತಿ ಡಿನೋಟಿಫಿಕೇಷನ್ ವಿವಾದದ ಬಗ್ಗೆ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಿರುವುದು, ರಾಜ್ಯಪಾಲರು ಸಿದ್ದರಾಮಯ್ಯ ಪಾತ್ರದ ಬಗ್ಗೆ ತನಿಖೆ ನಡೆಸುವುದಕ್ಕೆ ಅನುಮತಿ ನೀಡುತ್ತಾರೆ ಎಂದು ವದಂತೆ ಹಬ್ಬಿರುವುದೇ ಸಿದ್ದರಾಮಯ್ಯನವರ ದೆಹಲಿ ಭೇಟಿಯ ಮೂಲ ಉದ್ದೇಶ ಎನ್ನಲಾಗುತ್ತಿದೆ.

ತಮ್ಮ ವಿರುದ್ಧ ಕೇಳಿ ಬರುತ್ತಿರುವ ಎಲ್ಲ ಆರೋಪಗಳ ಬಗ್ಗೆ ಖುದ್ದು ಸೋನಿಯಾಗಾಂಧಿಯವರಿಗೆ ಅವರು ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದರ ಜತೆಗೆ ಇದ್ದಕ್ಕಿದಂತೆ ಎದ್ದಿರುವ 'ದಲಿತ ಮುಖ್ಯಮಂತ್ರಿ' ವಾದವೂ ಸಿದ್ದರಾಮಯ್ಯನವರ ಧೃತಿಗೆಡಿಸಿದ್ದು, ಅರ್ಕಾವತಿ ದೂರಿನ ಬುಡದಲ್ಲೇ ಈ ವಾದ ನಿಂತಿದೆ ಎಂಬ ಅವರ ಆಪ್ತರ ಸಲಹೆ ಸಿದ್ಧರಾಮಯ್ಯನವರನ್ನು ದೆಹಲಿಯವರೆಗೆ ಕರೆತಂದಿದೆ ಎನ್ನಲಾಗಿದೆ.

ಒಂದೊಮ್ಮೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ಕೊಟ್ಟರೆ ಸ್ವಪಕ್ಷೀಯರಿಂದಲೇ ಸಿದ್ದರಮಾಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಬೇಕೆಂಬ ಆಗ್ರಹ ಹೆಚ್ಚುತ್ತದೆ. ಮತ್ತು ಅದೇ 'ದಲಿತ ಮುಖ್ಯಮಂತ್ರಿ'ವಾದದ ಕೇಂದ್ರ ಬಿಂದುವಾಗಿ ಪರಿಣಮಿಸುತ್ತದೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಈ ಹಂತದಿಂದಲೇ ದಾಳ ಉರುಳಿಸಲು ಆರಂಭಿಸಬಹುದೆಂಬ ಕಾರಣಕ್ಕೆ ಸೋನಿಯಾಗೆ ಆಪ್ತರಾಗಿರುವ ಜಾರ್ಜ್ ಜತೆ ಸಿಎಂ ದೆಹಲಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ಡಿನೋಟಿಫಿಕೇಷನ್ ವಿವಾದ: ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ, ಸಿದ್ಧರಾಮಯ್ಯ, ಗೃಹ ಸಚಿವರ ಮೂಲಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಅವರ ಭೇಟಿ ನಿಗದಿ ಮಾಡಿಸಿಕೊಂಡಿದ್ದಾರೆ.

ಅರ್ಕಾವತಿ ವಿಚಾರ ಕೇಳಿದ ಸೋನಿಯಾ: ಅರ್ಕಾವತಿ ಡಿನೋಟಿಫಿಕೇಷನ್ ವಿವಾದಕ್ಕೆ ಸಂಬಂಧಿಸಿದ ಒಂದು ಪ್ರತಿ ದಾಖಲೆಯನ್ನು ತಮಗೆ ನೀಡುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಿಎಂ ಸಿದ್ಧರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಸೋನಿಯಾ ಭೇಟಿ ಸಂದರ್ಭದಲ್ಲಿ ಈ ವಿಚಾರ ಚರ್ಚೆಗೆ ಬಂದಿದ್ದು, ಆರೋಪಗಿಳಿಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ಆದರೂ ಇವೆಲ್ಲದಕ್ಕೆ ಸಂಬಂಧಿಸಿದ ಒಂದು ಪ್ರತಿ ದಾಖಲೆಯನ್ನು ತಮಗೆ ಕಳುಹಿಸಿ ಕೊಡುವಂತೆ ಕೇಳಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com