
ಚಿಕ್ಕಮಗಳೂರು: ಸಮಾಜದ ಮುಖ್ಯವಾಹಿನಿಗೆ ಬಂದು ಜಿಲ್ಲಾಡಳಿತ ಮುಂದೆ ಶರಣಾಗಿರುವ ನಕ್ಸಲ್ ಸಂಘಟನೆಯ ಮಾಜಿ ಮುಖಂಡ ನೂರ್ ಜುಲ್ಫಿಕರ್ ಅವರಿಗೆ ಎಲ್ಲ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದ್ದು, ಅವರು ಶನಿವಾರ ಬಿಡುಗಡೆಯಾದರು.
ಜಿಲ್ಲಾ ಉಪ ಕಾರಾಗೃಹದಿಂದ ಶನಿವಾರ ಬಿಡುಗಡೆಯಾಗಿ ಹೊರ ಬಂದ ನೂರ್ ಜುಲ್ಫಿಕರ್ ಸುದ್ದಿಗಾರೊಂದಿಗೆ ಮಾತನಾಡಿ, ತಾವು ಮುಂದಿನ ದಿನಗಳಲ್ಲಿ ಪ್ರಜಾತಾಂತ್ರಿಕ ಹೋರಾಟದಲ್ಲಿ ಮುಂದುವರಿಯುವುದಾಗಿ ಹೇಳಿದರು.
30 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಕೆಲ ವರ್ಷ ಅಜ್ಞಾತವಾಸದಲ್ಲಿದ್ದೆ. ನಂತರದಲ್ಲಿ ಮುಖ್ಯವಾಹಿನಿಗೆ ಬಂದು, ಈಗ 40 ದಿನ ಕಳೆದಿದ್ದೇನೆ. ಈ ದಿನಗಳನ್ನು ತುಂಬಾ ಅರ್ಥಪೂರ್ಣವಾಗಿ ಕಳೆದಿದ್ದೇನೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಕಾನೂನು ಚೌಕಟ್ಟಿನೊಳಗೆ ಸಹಕಾರ ನೀಡಿದ್ದಾರೆ.
ಜೈಲಿನಲ್ಲಿರುವ ಆರೋಪಿಗಳು ಗೌರವ, ಸ್ನೇಹದಿಂದ ಕಂಡಿದ್ದಾರೆ. ಅಲ್ಪಾವಧಿಯಲ್ಲಿ ಜಾಮೀನು ಸಿಕ್ಕಿ ಹೊರಗೆ ಬಂದಿದ್ದೇನೆ. ಸ್ವಂತ ಊರು ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನ ಹಳ್ಳಿಗೆ ಭೇಟಿ ನೀಡಿ, ನಂತರ ಬೆಂಗಳೂರಿಗೆ ತೆರಳಿ, ಮುಂದಿನ ನಿರ್ಧಾರದ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ಜುಲ್ಫಿಕರ್ ಬಿಡುಗಡೆಯ ವಿಷಯ ತಿಳಿದು, ಅವರ ಸಹೋದರ ಹುಬ್ಬಳ್ಳಿ-ಧಾರಾವಾಡ ಪಾಲಿಕೆ ಆಯುಕ್ತ ನೂರ್ ಮನ್ಸೂರ್ ಹಾಗೂ ಕುಟಂಬದವರು ನಗರಕ್ಕೆ ಆಗಮಿಸಿದ್ದರು.
Advertisement