
ಮೈಸೂರು: ಈಗ ಯಾವ ಪೋಷಕರನ್ನೇ ಕೇಳಿ, ನಿಮ್ಮ ಮಕ್ಕಳು ಏನಾಗಬೇಕು?' ಎಂದ್ರೆ ಡಾಕ್ಟ್ರು, ಎಂಜಿನಿಯರ್ ಅಂತಾ ಹೇಳ್ತಾರೆ. ಇದರಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ಮೂಲ ವಿಜ್ಞಾನ ಕಲಿಯಲು ಆಸಕ್ತಿ ತೋರಿಸುತ್ತಿಲ್ಲ. ಪರಿಣಾಮ ದೇಶದಲ್ಲಿ ಸಂಶೋಧನಾ ಕ್ಷೇತ್ರಕ್ಕೆ ಪ್ರತಿಭಾವಂತರು ಸಿಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮೂಲ ವಿಜ್ಞಾನದತ್ತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಕರ್ಷಿಸಿ, ವಿಜ್ಞಾನ ಕ್ಷೇತ್ರದಲಲಿ ಹೆಚ್ಚಿನ ಪ್ರಗತಿ ಸಾಧಿಸಲು, ಎಂಜಿನಿಯರಿಂಗ್ ಮತ್ತು ವೈದ್ಯಕ್ಷೇತ್ರದಲ್ಲಿ ನವೀನ ರೀತಿಯ ಸಂಶೋಧನೆಯನ್ನು ಉತ್ತೇಜಿಸಲು ಹಲವು ಯೋಜನೆಗಳನ್ನು ಆರಂಭಿಸಿದೆ. ಅದರಲ್ಲಿ ಪ್ರಥಮ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಆಯೋಜಿಸುತ್ತಿರುವ ಇನ್‌ಸ್ಪೈರ್ (ಇನೋವೇಷನ್ ಇನ್‌ಸೈನ್ಸ್ ಪರ್‌ಸೂಟ್ ಫಾರ್ ಇನ್‌ಸ್ಪೈರಡ್ ರಿಸರ್ಚ್) ಕೂಡಾ ಒಂದು.
ದೇಶದ ಯಾವುದೇ ವಿವಿ ಈ ಯೋಜನೆ ಕಾರ್ಯಗತ ಮಾಡಬಹುದು. ಇದಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ . ಆಯಾ ವಿವಿಗಳೇ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಪ್ರಸ್ತಾವ ಸಲ್ಲಿಸಬೇಕು. ದೇಶದ ಅಥವಾ ರಾಜ್ಯದ ಎಷ್ಟು ವಿವಿಗಳು ಈ ಯೋಜನೆಯ ಲಾಭ ಪಡೆಯುತ್ತಿವೆಯೋ ಗೊತ್ತಿಲ್ಲ. ಆದರೆ, ಮೈಸೂರು ವಿವಿ ಮಾತ್ರ ನಿರಂತರವಾಗಿ ಈ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ಇತರೆ ವಿವಿಗಳಿಗೂ ಮಾದರಿಯಾಗಿದೆ.
10 ವರ್ಷಗಳಿಂದ ಈ ಯೋಜನೆ ಇದ್ದು, ಒಮ್ಮೆ ಇಲ್ಲಿ ಕೂಡಾ ಸ್ಥಗಿತವಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇದಕ್ಕಾಗಿ ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ. ಪಿ. ವೆಂಕಟರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿತಿ ರಚಿಸಲಾಗಿದೆ. ಪ್ರತಿ ವರ್ಷ ಮಾನಸ ಗಂಗೋತ್ರಿಯ ಒಂದೊಂದು ವಿಭಾಗಕ್ಕೆ ಇನ್‌ಸ್ಪೈರ್ ತರಬೇತಿ ಕಾರ್ಯಕ್ರಮ ಆಯೋಜಿಸುವ ಹೊಣೆ ವಹಿಸಲಾಗುತ್ತಿದೆ.
ಭೌತಶಾಸ್ತ್ರ ವಿಭಾಗದ ಪ್ರೊ. ಆರ್ ಸೋಮಶೇಖರ್ ಇನ್‌ಸ್ಪೈರ್‌ನ ನೇತೃತ್ವ ವಹಿಸಿದ್ದು, ಡಾ. ಎಂ.ಎಸ್. ಚಂದ್ರಶೇಖರ ಸಾಥ್ ನೀಡುತ್ತಿದ್ದಾರೆ. ಈ ಬಾರಿ ಜ.19ರಿಂದ 23ರವರೆಗೆ ತರಬೇತಿ ನಡೆಯಲಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಶೇ.90ಕ್ಕಿಂತ ಹೆಚ್ಚಿನ ಅಂಕ ಪಡೆದು, ಹಾಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ 200 ಮಂದಿಗೆ ಭಾಗವಹಿಸಲು ಅವಕಾಶವಿದೆ.
ಅವರಿಗೆ ಊಟ ಮತ್ತು ವಸತಿ ಸೌಲಭ್ಯ, ಬ್ಯಾಗ್, ವಿಜ್ಞಾನ ಕಿಟ್, 1000ರು. ಮೌಲ್ಯದ ಪುಸ್ತಕಗಳನ್ನು ನೀಡಲಾಗುತ್ತದೆ. ಹೊರಗಿನವರಿಗೆ ಪ್ರಯಾಣ ಭತ್ಯೆಯೂ ಉಂಟು. ಇದಕ್ಕಾಗಿ ಮತ್ತು ಸಂಪನ್ಮೂಲ ವ್ಯಕ್ತಿಗಳ ಭತ್ಯೆಗಾಗಿ ಕೇಂದ್ರ ಸರ್ಕಾರ 13 ಲಕ್ಷ ರು. ನೀಡಿದೆ.
ಸಂಪನ್ಮೂಲ ವ್ಯಕ್ತಿಗಳನ್ನು ಇಸ್ರೋ, ಬಿಎಆರ್‌ಸಿ, ಐಐಟಿ ಮತ್ತಿತರ ಪ್ರತಿಷ್ಠಿತ ವಿಜ್ಞಾನ ಸಂಶೋಧನಾ ಸಂಸ್ಥೆಗಳಿಂದ ಕರೆಸಲಾಗುತ್ತದೆ. ಇಸ್ರೋ, ಸಿಎಫ್‌ಟಿಆರ್‌ಐ, ಡಿಎಫ್‌ಆರ್‌ಎಲ್‌ನಂಥ ಸಂಶೋಧನಾ ಸಂಸ್ಥೆಗಳ ಮಹತ್ವ, ಪ್ರೊ.ಸಿ.ಎನ್. ಆರ್ ರಾವ್, ಪ್ರೊ.ಯು. ಆರ್.ರಾವ್, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಮೊದಲಾದವರು ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ವಿವರಿಸಿ, ವಿದ್ಯಾರ್ಥಿಗಳ ಮನಸ್ಥಿತಿ ಬದಲಿಸುವ ಪ್ರಯತ್ನ ನಡೆಸಲಾಗುತ್ತದೆ.
ಮೂಲ ವಿಜ್ಞಾನ ಓದಿದವರು ಸಂಶೋಧನಾ ಕ್ಷೇತ್ರಕ್ಕೆ ಲಭ್ಯವಿಲ್ಲವಾದ್ದರಿಂದ ಎಂಜಿನಿಯರಿಂಗ್ ಓದಿದವರನ್ನೇ ಆಯ್ಕೆ ಮಾಡಿಕೊಂಡು, ಭೌತಶಾಸ್ತ್ರ, ರಾಸಾಯನ ಶಾಸ್ತ್ರ , ಗಣಿತ ಮತ್ತು ಜೀವಶಾಸ್ತ್ರವನ್ನು ಮತ್ತೆ ಹೇಳಿಕೊಟ್ಟು, ತಯಾರು ಮಾಡಬೇಕಾದ ಸ್ಥಿತಿ ಇದೆ.
ತರಬೇತಿಯ ಆಯ್ಕೆ ಅಂಕ ಕಡಿತಗೊಳ್ಳಲಿ
ಕೇಂದ್ರ ಸರ್ಕಾರ ಇಂಥ ತರಬೇತಿಗಳಿಗೆ ಶೇ.90ಕ್ಕಿಂತ ಹೆಚ್ಚು ನಿಗದಿ ಮಾಡಿರುವುದರಿಂದ ಸ್ವಲ್ಪ ತೊಂದರೆಯಾಗುತ್ತಿದೆ. ಏಕೆಂದರೆ ಇಷ್ಟು ಅಂಕಗಳನ್ನು ಪಡೆದವರು, ಎಂಜಿನಿಯರಿಂಗ್, ವೈದ್ಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಂಥವರು ತರಬೇತಿಗೆ ಬರುವುದಿಲ್ಲ. ಬಂದರೂ ಆಗಲೇ ಅವರ ಮನಸ್ಥಿತಿ ಇದರೆಡೆ ಇರುವುದಿಲ್ಲ. ಸಂಶೋಧನಾ ಮಹತ್ವ ವಿವರಿಸಿದರೆ ಎಂಬಿಬಿಎಸ್, ಬಿಇ ಮುಗಿಸಿ, ನಂತರ ಸಂಶೋಧನೆ ಮಾಡುವುದಾಗಿ ಹೇಳುತ್ತಾರೆ. ಹೀಗಾಗಿ ತರಬೇತಿಯ ಆಯ್ಕೆಗೆ ಶೇ. 1ರಿಂದ 2 ರಷ್ಟು ಅಂಕಗಳನ್ನು ಕಡಿಮೆ ಮಾಡಿದರೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವೂ ಇದೆ.
ಅಂಶಿ ಪ್ರಸನ್ನಕುಮಾರ್
Advertisement