ಚರ್ಚ್‌ಸ್ಟ್ರೀಟ್ ಸ್ಫೋಟ: ಬಂಧಿತರು ಅಮಾಯಕರಲ್ಲ
ಬೆಂಗಳೂರು: ಚರ್ಚ್‌ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಸೂಕ್ತ ದಿಕ್ಕಿನಲ್ಲಿ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಬಂಧಿಸಿರುವ ವ್ಯಕ್ತಿಗಳ್ಯಾರೂ ಅಮಾಯಕರಲ್ಲ. ಸಾಕಷ್ಟು ಸಾಕ್ಷ್ಯಗಳ ಆಧಾರದಲ್ಲಿಯೇ ಅವರನ್ನು ಬಂಧಿಸಲಾಗಿದೆ. ಕೆಲವೊಮ್ಮೆ ಸಂಶಯವಿರುವ ವ್ಯಕ್ತಿಗಳನ್ನು ವಿಚಾರಣೆಗಾಗಿಯೂ ವಶಕ್ಕೆ ಪಡೆಯುವುದು ಅನಿವಾರ್ಯವಾಗಿದ್ದು, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಚರ್ಚ್‌ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯೂ ಸೇರಿದಂತೆ ಗಣರಾಜ್ಯೋತ್ಸವಕ್ಕೆ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ತನಿಖೆಯ ಪ್ರಗತಿಯ ವಿವರ ನೀಡಿದರು. ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಡ ನಡೆಸುತ್ತಿರುವ ಕಾರ್ಯಾಚರಣೆ ತೃಪ್ತಿ ನೀಡಿದೆ. ಹಾಗಂತ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ ಎಂದು ಹೇಳಲಾಗದು. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಅದನ್ನು ಪೂರ್ಣ ಪ್ರಮಾಣದಲ್ಲಿ ಭೇದಿಸಿ, ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಇನ್ನಷ್ಟು ಸಮಯ ಬೇಕು ಎಂದು ಸ್ಪಷ್ಟಪಡಿಸಿದರು.
ಕೆಲವೇ ಕೆಲವರ ಕೃತ್ಯದಿಂದ ಭಟ್ಕಳವನ್ನು ಉಗ್ರಗಾಮಿಗಳ ತಾಣವೆಂದು ಬಿಂಬಿಸುವುದು ಸರಿಯಲ್ಲ. ಬಂಧಿತ ವ್ಯಕ್ತಿಗಳ ಕುಟುಂಬಕ್ಕೆ ತೊಂದರೆಯಾಗಿದೆ. ಪೊಲೀಸರ ಭೀತಿಯಿಂದ ಅವರಿಗೆ ಯಾರೂ, ಯಾವ ರೀತಿಯ ಸಹಕಾರವನ್ನೂ ನೀಡುತ್ತಲ್ಲ. ಇದನ್ನು ಸರಿಪಡಿಸಲು ಕೆಲವು ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ. ಮಾನವೀಯ ದೃಷ್ಟಿಯಿಂದ ಸಹಕರಿಸಲು ಇಲಾಖೆಯ ಆಕ್ಷೇಪವಿಲ್ಲ ಎಂದರು.
ಬಂಧಿತರು ಯಾವ ಸಂಘಟನೆಗೆ ಸೇರಿದವರೆಂಬುದಕ್ಕೆ ಮಾಹಿತಿ ನೀಡಲು ನಿರಾಕರಿಸಿದ ಸಚಿವರು, ತನಿಖೆ ಪ್ರಗತಿಯಲ್ಲಿದ್ದು, ಮಾಹಿತಿ ಬಹಿರಂಗವಾದರೆ ತಪ್ಪಿತಸ್ಥರು ಪರಾರಿಯಾಗಬಹುದು. ಉಗ್ರಗ್ರಾಮಿಗಳು, ಸಮಾಜ ಘಾತುಕ ಶಕ್ತಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವುದು ತಮ್ಮ ಉದ್ದೇಶ. ಈ ನಿಟ್ಟಿನಲ್ಲಿ ತನಿಖೆಯನ್ನು ಮತ್ತಷ್ಟು
ಕ್ರಿಯಾಶೀಲಗೊಳಿಸಿ ಶೀಘ್ರವೇ ತಪ್ಪಿತಸ್ಥರನ್ನು ಬಂದಿಸುವ ವಿಶ್ವಾಸವಿದೆ ಎಂದರು.
ಪೊಲೀಸ್ ಇಲಾಖೆಗೆ ರು. 6 ಕೋಟಿ ವೆಚ್ಚದಲ್ಲಿ ಆಧುನಿಕ ಮಾದರಿಯ ಸಶಸ್ತ್ರ ಖರೀದಿಸಲು ಸಚಿವ ಸಂಪುಟ ಅನುಮತಿ ನೀಡಿದೆ. ಇಷ್ಟರಲ್ಲಿಯೇ ಈ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದರು.
ನಗರದ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಚರ್ಚ್‌ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳದ ಮೂವರನ್ನು ಬಂಧಿಸಲಾಗಿದೆ. ಇಬ್ಬರನ್ನು ನಗರದಲ್ಲಿ, ಮತ್ತೊಬ್ಬನನ್ನು ಭಟ್ಕಳದಲ್ಲಿ ವಶಕ್ಕೆ ಪಡೆಯಲಾಗಿದೆ. ಇವರ ಬಂಧನಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿವೆ. ಜತೆಗೆ, ಇವರು ನೀಡಿದ್ದ ಮಾಹಿತಿ ಆಧಾರದಲ್ಲಿಯೇ ದಾಳಿ ಮಾಡಿ ವಿಧ್ವಂಸಕ ವಸ್ತುಗಳನ್ನು ವಶಕ್ಕೆ ಪಡೆದ ಮನೆ, ಬಳಕೆಯಲ್ಲಿ ಇರಲಿಲ್ಲ. ಅಲ್ಲದೆ, ಸಾಕ್ಷಿಗಳ ಸಮ್ಮುಖದಲ್ಲಿಯೇ ಮಹಜರು ನಡೆಸಿ ಕಾನೂನು ಪ್ರಕಾರ ಎಲ್ಲವನ್ನೂ ನಡೆಸಲಾಗಿದೆ ಎಂದರು.
ಬಾಂಬ್ ಸ್ಫೋಟದ ತನಿಖೆ ಐದಾರು ಮಾರ್ಗಗಳಲ್ಲಿ ಸಾಗಿದೆ. ತಂಡ ಅತ್ಯಂತ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಬ್ರೇಕ್‌ಥ್ರೂ ಎನ್ನುವ ಹಾಗೆ ಇನ್ನೂ ಯಾವುದೇ ಮಹತ್ವದ ಸುಳಿವು ಸಿಕ್ಕಿಲ್ಲ. ಆದರೆ ಎಷ್ಟು ಬೇಗ ತಪ್ಪಿತಸ್ಥರನ್ನು ಪತ್ತೆ ಹಚ್ಚುತ್ತೇವೆಯೋ ಎನ್ನುವ ಕಾತುರ ನಮಗೂ ಇದೆ. ಸದ್ಯಕ್ಕೆ ಅದು ಸಾಧ್ಯವಾಗುತ್ತಿಲ್ಲ. ಇನ್ನೂ ಸಮಯಬೇಕಿದೆ. ಆ ಕಾಲ ಮಾತ್ರ ಹತ್ತಿರದಲ್ಲಿಯೇ ಇದೆ ಎನ್ನುವ ವಿಶ್ವಾಸವಿದೆ.
-ಎಂ.ಎನ್ ರೆಡ್ಡಿ
ನಗರ ಪೊಲೀಸ್ ಆಯುಕ್ತ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ