ನೈಸ್ ಅಕ್ರಮ: ಅಧಿಕಾರಿಗಳ ವಿರುದ್ಧ ಆಕ್ರೋಶ

ನೈಸ್ ಸಂಸ್ಥೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸರ್ಕಾರ ರಚಿಸಿರುವ ವಿಧಾನಸಭೆ ಸದನ ಸಮಿತಿಯ ಸೂಚನೆಯನ್ನೇ...
ನೈಸ್‍ ರಸ್ತೆ
ನೈಸ್‍ ರಸ್ತೆ

 ಬೆಂಗಳೂರು: ನೈಸ್ ಸಂಸ್ಥೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸರ್ಕಾರ ರಚಿಸಿರುವ ವಿಧಾನಸಭೆ ಸದನ ಸಮಿತಿಯ ಸೂಚನೆಯನ್ನೇ ಅಧಿಕಾರಿಗಳು ಪಾಲಿಸುತ್ತಿಲ್ಲ. ನೈಸ್‍ಗೇ ಅನುಕೂಲ ಮಾಡಿಕೊಟ್ಟು ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಸದನ ಸಮಿತಿಯ ಸದಸ್ಯರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದೊಂದಿಗೆ  ಮಾಡಿಕೊಂಡಿರುವ ಒಪ್ಪಂದದಂತೆ ಸಂಸ್ಥೆ ನಡೆದುಕೊಂಡಿಲ್ಲ. ಹೀಗಾಗಿ, ನೈಸ್‍ನ `ಟೋಲ್' ರಸ್ತೆಯನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಬೇಕು. ಈ ಬಗ್ಗೆ ಕಾನೂನು ಇಲಾಖೆಯೂ ಸಮ್ಮತಿಸಿದೆ. ಆದರೂ ಲೋಕೋಪಯೋಗಿ ಹಾಗೂ ಕೆಐಎಡಿಬಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ನಾವು ಸಭೆ ನಡೆಸುತ್ತೇವೆ. ಆದರೆ,
ಸದನ ಸಮಿತಿಯ ಸೂಚನೆಯನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ. ಇನ್ನು ಸಭೆ ಏಕೆ ನಡೆಯಬೇಕು ಎಂದು ಸದಸ್ಯರು ಬುಧವಾರದ ಸಭೆಯಲ್ಲಿ ಪ್ರತಿಭಟಿಸಿದರು.
ಈ ಪ್ರತಿಭಟನೆಯ ಪ್ರತಿಫಲವಾಗಿ ನೈಸ್ ರಸ್ತೆಯ ಅನುಷ್ಠಾನ ಹಾಗೂ ವ್ಯವಹಾರದ ಲೋಪದೋಷಗಳ ಮಧ್ಯಂತರ ವರದಿಯನ್ನು ಮುಂದಿನ ಅಧಿವೇಶನದಲ್ಲೇ ಸಲ್ಲಿಸಲು
ಸಮಿತಿ ಅಧ್ಯಕ್ಷ ಹಾಗೂ ಕಾನೂನು ಸಚಿವ ಟಿ.ಬಿ. ಜಯಚಂದ್ರ ಭರವಸೆ ನೀಡಿದ್ದಾರೆ. ಈ ವರದಿಯನ್ನು ಸದನದಲ್ಲಿ ಮಂಡಿಸಿ ಕ್ರಮಕ್ಕೆ ಶಿಫಾರಸು ಮಾಡಲೂ ಹೇಳುವುದಾಗಿ ಭರವಸೆ ನೀಡಿದ ನಂತರ ಸಭೆ ಮುಂದುವರಿಯಿತು.
ಆರಂಭದಲ್ಲಿಯೇ  `ಈವರೆಗೆ ನಡೆಸಿದ ಏಳು ಸಭೆಗಳಲ್ಲಿ ಹಲವು ಅವ್ಯವಹಾರದ ಮಾಹಿತಿಗಳು ಹೊರಬಂದಿವೆ. ಈ ಬಗ್ಗೆ ಕಾನೂನು ಇಲಾಖೆಯ ಸಲಹೆಯನ್ನೂ ಪಡೆದುಕೊಂಡು ಕ್ರಮ ಕೈಗೊಳ್ಳಲುನಿರ್ಧರಿಸಲಾಗಿದೆ. ಆದರೆ, ಲೋಕೋಪಯೋಗಿ ಹಾಗೂ ಕೆಐಎಡಿಬಿ ಅ„ಕಾರಿಗಳು ಇದುವರೆಗೂ ಯಾವುದೇ ಕ್ರಮವನ್ನೂ ಜರುಗಿಸಿಲ್ಲ. ಸಭೆಗೊಂದು ಬೆಲೆ ಬೇಡವೆ?,' ಎಂದು ಬಿಜೆಪಿಯ ಎಸ್.ಆರ್. ವಿಶ್ವನಾಥ್ ಹಾಗೂ ಎಂ.ಸತೀಶ್‍ರೆಡ್ಡಿ ಆರೋಪಿಸಿದರು.
ಸಿಮೆಂಟ್ ರಸ್ತಗಳಾಗಿರಬೇಕಾದ ನೈಸ್ ಸಂಸ್ಥೆ ನಿರ್ಮಿಸಿದ ರಸ್ತೆಗಳಿನ್ನೂ ಡಾಂಬಾರ್ ರಸ್ತೆಗಳಾಗಿವೆ. ಕಾಂಕ್ರೀಟ್ ರಸ್ತೆ ನಿರ್ಮಿಸಲು ನೈಸ್‍ಗೆ ನೀಡಿದ 8 ವರ್ಷಗಳ ಕಾಲಾವಕಾಶ 2012ಕ್ಕೇ ಮುಗಿದಿದೆ. ಸುಪ್ರೀಂ ಕೋರ್ಟ್ ಕೂಡ ಕಾಂಕ್ರೀಟ್ ರಸ್ತೆಯನ್ನೇ ಮಾಡಬೇಕೆಂದು ತಾಕೀತು ಮಾಡಿತ್ತು. ಕಾನೂನು ರೀತಿಯಲ್ಲೇ ಕ್ರಮ ಕೈಗೊಂಡು, ಸರ್ಕಾರ ನೈಸ್ ರಸ್ತೆಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳಬಹುದಿತ್ತು. ಕೂಡಲೇ ಕ್ರಮ ಕೈಗೊಳ್ಳಿ ಎಂದು ಹಿಂದಿನ ಸಭೆಯಲ್ಲಿಯೇ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
ಅಧಿಕಾರಿಗಳು ಯಾವುದೇ ಕ್ರಮವನ್ನೂ ಕೈಗೊಳ್ಳದಿರುವುದು ಸಮಿತಿ ಸದಸ್ಯರನ್ನು ಕೆರಳಿಸಿದೆ. ಸಭೆ ಬಹಷ್ಕಾರ ಹಾಕುವ ಮೂಲಕ ಇದನ್ನು ಹೊರಹಾಕಿದರು. ವಿಶ್ವನಾಥ್ ಹಾಗೂ ಸತೀಶ್ ರೆಡ್ಡಿ ಅವರೊಂದಿಗೆ ಸದಸ್ಯರಾದ ಕೆ.ಎಂ. ಶಿವಲಿಂಗೇಗೌಡ, ಸುಧಾಕರ್‍ಲಾಲ್ ಕೂಡ ಸೇರಿಕೊಂಡು ಅಧಿಕಾರಿಗಳು ಸಮಿತಿ ಸೂಚನೆ ಪಾಲಿಸಬೇಕು ಎಂದು ಪಟ್ಟು ಹಿಡಿದರು. ಅಲ್ಲದೆ, ಮಧ್ಯಂತರ ವರದಿ ಸಲ್ಲಿಸಲೂ ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷ ಟಿ.ಬಿ. ಜಯಚಂದ್ರ ಮಣಿದು, ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಧ್ಯಂತರ ವರದಿಯನ್ನೂ ಸಲ್ಲಿಸುವ ಭರವಸೆ ನೀಡಿದರು.


ಅಧಿವೇಶನದ ಸಂದರ್ಭದಲ್ಲಿ ಸಮಿತಿ ಸಭೆ ನಡೆಸಲು ಸಾಧ್ಯವಾಗಿಲ್ಲ. ಈವರೆಗೆ ಏಳು ಸಭೆಗಳನ್ನು ನಡೆಸಲಾಗಿದ್ದು, ಹಲವು ರೀತಿಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಡತ ಕಾಣೆ ಬಗ್ಗೆಯೂ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಹೇಳಲಾಗಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಅಂತಿಮ ವರದಿಯನ್ನು ಸಲ್ಲಿಸಲಾಗುತ್ತದೆ.
- ಟಿ.ಬಿ. ಜಯಚಂದ್ರ, ಸಮಿತಿ ಅಧ್ಯಕ್ಷ


ಅಕ್ರಮವಾಗಿ ಟೋಲ್ ಸಂಗ್ರಹಿಸುತ್ತಿರುವ ನೈಸ್ ಸಂಸ್ಥೆ ವಿರುದ್ಧ  ಕ್ರಮ ಕೈಗೊಳ್ಳಬೇಕು ಹಾಗೂ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಸಮಿತಿ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ನೈಸ್ ಸಂಸ್ಥೆಯ ಪ್ರಭಾವಕ್ಕೆ ಒಳಗಾಗಿರುವ ಅಧಿಕಾರಿಗಳು ಸರ್ಕಾರಕ್ಕೆ ನಷ್ಟ ಉಂಟು
ಮಾಡುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಆಲಿಸಲು ಸಭೆ  ನಿಗದಿ ಮಾಡಿ ಎಂದರೂ ಮಾಡುತ್ತಿಲ್ಲ. ಇವೆಲ್ಲವಕ್ಕೂ ಸಮಿತಿ ಅಧ್ಯಕ್ಷರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಾದು ನೋಡುತ್ತೇವೆ.
- ಎಸ್.ಆರ್. ವಿಶ್ವನಾಥ್,
ಎಂ. ಸತೀಶ್‍ರೆಡ್ಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com