
ಬೆಂಗಳೂರು: ಒಂದನೇ ತರಗತಿಯಿಂದ ಐದನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವು ಮಾತೃಭಾಷೆ ಕನ್ನಡದಲ್ಲೇ ಕಡ್ಡಾಯಗೊಳಿಸಲು ಸರಕಾರ ನಿರ್ಣಯ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಇಲ್ಲಿಯವರೆಗೆ ಅಸ್ತಿತ್ವದಲ್ಲಿದ್ದ ಕಾಯಿದೆ ಪ್ರಕಾರ 'ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಗುವಿನ ಮಾತೃಭಾಷೆಯಲ್ಲಿಯೇ ಇರತಕ್ಕದ್ದು' ಎಂದು ಇತ್ತು . ಅದನ್ನು ಈಗ 'ಒಂದನೇ ತರಗತಿಯಿಂದ ಐದನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆ ಕನ್ನಡದಲ್ಲೇ ಇರತಕ್ಕದ್ದು' ಎಂದು ತಿದ್ದುಪಡಿ ತರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದೇ ವೇಳೆ ಮಕ್ಕಳ ಉಚಿತ ಶಿಕ್ಷಣ ಹಾಗೂ ಕಡ್ಡಾಯ ಕಾಯಿದೆ-2012ರ ಸೆಕ್ಷನ್ 29(2)ಎಫ್‌ಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದ್ದು, ಜಂಟಿ ಅಧಿವೇಶನದಲ್ಲಿ ತಿದ್ದುಪಡಿ ಕಾಯಿದೆಯನ್ನು ಮಂಡಿಸಲಾಗುತ್ತದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ 'ಭಾಷಾ ಮಾಧ್ಯಮ ನೀತಿ ಸಂಬಂಧ ಹೈಕೋರ್ಟ್, ಸುಪ್ರೀಂಕೋರ್ಟ್ ಈಗಾಗಲೇ ತೀರ್ಪು ಕೊಟ್ಟಿವೆ. ಅದನ್ನು ಪುನರ್ ಪರಿಶೀಲಿಸುವಂತೆ ರಾಜ್ಯ ಸರಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ. ಏತನ್ಮಧ್ಯೆ ನ್ಯಾಯಾಂಗ ನಿಂದನೆ ಅರ್ಜಿಗಳು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿರುವ ಮರುಪರಿಶೀಲನಾ ಅರ್ಜಿಗೆ ಬೆಂಬಲವಾಗಿ ಕಾಯಿದೆಗೆ ತಿದ್ದುಪಡಿ ಸರಕಾರ ತರಲು ಮುಂದಾಗಿದೆ'' ಎಂದು ಹೇಳಿದ್ದಾರೆ
''ಭಾಷಾ ಮಾಧ್ಯಮ ನೀತಿಯ ವಿಷಯದಲ್ಲಿ ರಾಜ್ಯದ ನಿಲುವು ಸ್ಪಷ್ಟವಾಗಿದ್ದು, ಸುಪ್ರೀಂಕೋರ್ಟ್ ಮರುಪರಿಶೀಲನಾ ಅರ್ಜಿ ವಿಚಾರಣೆ ವೇಳೆ ರಾಜ್ಯದ ಕೋರಿಕೆಯನ್ನು ಬಲಪಡಿಸಲು ಈ ತಿದ್ದುಪಡಿ ಅಗತ್ಯವಾಗಿತ್ತು. ಇಲ್ಲಿಯವರೆಗೆ ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಕಡ್ಡಾಯ ಎಂದಿತ್ತು. ಕನ್ನಡ ಎಂಬ ಸ್ಪಷ್ಟ ಉಲ್ಲೇಖವಿರಲಿಲ್ಲ. ರಾಜ್ಯದ ವಾದವನ್ನು ಸಮರ್ಥಿಸುವಂತೆ ಒಂದರಿಂದ ಐದನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣ ಮಾತೃಭಾಷೆ ಕನ್ನಡದಲ್ಲೇ ಕಡ್ಡಾಯ ಎಂದು ಸೇರ್ಪಡೆ ಮಾಡಿ, ತಿದ್ದುಪಡಿ ವಿಧೇಯಕ ಮಂಡಿಸಲು ಸಚಿವ ಸಭೆ ಒಪ್ಪಿಗೆ ಸೂಚಿಸಿದೆ.
''ಎಲ್ಲಾ ಪ್ರಯತ್ನಗಳ ಮಧ್ಯೆಯೂ ಕನ್ನಡದಲ್ಲೇ ಶಿಕ್ಷಣ ಕಡ್ಡಾಯವಾಗಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಪ್ರಧಾನಿ ಜತೆಯೂ ಚರ್ಚಿಸಿದ್ದಾರೆ. ಕಾಯಿದೆ ತಿದ್ದುಪಡಿ ಹೊರತಾಗಿಯೂ ನಾನಾ ಮಾರ್ಗಗಳಲ್ಲಿ ಕನ್ನಡ ಕಡ್ಡಾಯಗೊಳಿಸಲು ಸರಕಾರ ಯತ್ನ ನಡೆಸುತ್ತಿದೆ'' ಎಂದು ಸಚಿವರು ಹೇಳಿದ್ದಾರೆ .
Advertisement