
ಬೆಂಗಳೂರು : ಪದವಿಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ದಾಖಲು ಪ್ರಕ್ರಿಯೆಯನ್ನು ಆನ್‍ಲೈನ್ ಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
2015-16ನೇ ಶೈಕ್ಷಣಿಕ ವರ್ಷದಿಂದ ಪ್ರಥಮ ಪಿಯುಗೆ ಪ್ರವೇಶ ಪಡೆಯುವವರ ಮಾಹಿತಿ ಇಲಾಖೆಯ ವೆಬ್‍ಸೈಟ್‍ನಲ್ಲಿ ಸಂಗ್ರಹವಾಗಲಿದೆ. ಡಾಟಾ ಬೇಸ್ ಮೂಲಕ ವಿದ್ಯಾರ್ಥಿಗಳನ್ನು ಟ್ರ್ಯಾಕ್ ಮಾಡಲು ಈ ತಂತ್ರಾಂಶ ಸಹಕಾರಿಯಾಗಲಿದೆ. ಉನ್ನತ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ ಇದರ ಲಾಭ ಪಡೆಯಲಿದೆಎಂದು ಪಿಯು ಶಿಕ್ಷಣ ಇಲಾಖೆ ನಿರ್ದೇಶಕಿ ಸುಷ್ಮಾ ಗೋಡಬೋಲೆ ತಿಳಿಸಿದರು. ಎಂದಿನಂತೆ ಪ್ರಥಮ ಪಿಯುಸಿಗೆ ಪ್ರವೇಶ ಪ್ರಕ್ರಿಯೆಗಳು ನಡೆಯಲಿವೆ. ಆದರೆ ಪ್ರವೇಶ ಖಾತ್ರಿಯಾದ ಬಳಿಕ ಕಾಲೇಜಿನ ಪ್ರಾಂಶು ಪಾಲರು ತಮ್ಮ ವೆಬ್ ಪೋರ್ಟಲ್ ಮೂಲಕ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಅರ್ಜಿ ನೀಡಬೇಕು. ವಿದ್ಯಾರ್ಥಿಗಳಿಂದ ಭರ್ತಿ ಮಾಡಿದ ಅರ್ಜಿ ಪಡೆದು, ಸ್ಕ್ಯಾನ್ ಮಾಡಿ ಮತ್ತೆ ತಮ್ಮ ಪೋರ್ಟಲ್‍ಗೆ ಅಪ್‍ಲೋಡ್ ಮಾಡಬೇಕು. ತಂತ್ರಾಂಶದ ನೆರವಿನಿಂದ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಡಿಜಿಟಲೀಕರಣಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಎಲ್ಲ ಶೈಕ್ಷಣಿಕ ವ್ಯವಹಾರಗಳು ಇಲ್ಲಿಂದಲೇ ನಡೆಯುತ್ತವೆ. ಇದೇ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಮುಗಿಸಿ ಸಿಇಟಿ ತೆಗೆದುಕೊಂಡಾಗಲೂ ಅದೇ ಡಾಟಾಬೇಸ್ ಬಳಸಿಕೊಳ್ಳಲಾಗುತ್ತದೆ. ಉನ್ನತ ಶಿಕ್ಷಣದ ಇತರೆ ಕೋರ್ಸ್‍ಗಳಿಗೂ ಬಳಸಿಕೊಳ್ಳುವ ಬಗ್ಗೆ ಸರ್ಕಾರದಲ್ಲಿ ಗಂಭೀರ ಚಿಂತನೆ ನಡೆಯುತ್ತಿದೆಹಾಗಾಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಅಕ್ರಮ ಹಾಗೂ ಸರ್ಕಾರಿ ಸವಲತ್ತುಗಳ ದುರ್ಬಳಕೆಗೆ ಕಡಿವಾಣ ಹಾಕಬಹುದಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರು ವಿವರಿಸಿದರು. ಸೀಟು ಹಂಚಿಕೆಗೆ ಆನ್‍ಲೈನ್ ಪ್ರಕ್ರಿಯೆ ಅನ್ವಯವಾಗುವುದಿಲ್ಲ. ಆದರೆ ವಿದ್ಯಾರ್ಥಿಗಳ ಫಲಿತಾಂಶ, ಶೈಕ್ಷಣಿಕ ಸಾಧನೆ, ಹಾಜರಾತಿ ಸೇರಿದಂತೆ ಇತರೆ ಮಾಹಿತಿಗಳು ಈ ಪೋರ್ಟಲ್‍ನಲ್ಲಿ ದೊರೆಯಲಿದೆ. ಪ್ರತಿ ವಿದ್ಯಾರ್ಥಿಗೂ ನಿರ್ದಿಷ್ಟ ಗುರುತಿನ ಸಂಖ್ಯೆ ಕೊಡಲಾಗುತ್ತದೆ. ಇದೇ ವಿದ್ಯಾರ್ಥಿಗಳು ಮುಂದೆ ಸಿಇಟಿ ಅಥವಾ ಇನ್ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಾಗ ಇದೇ ಗುರುತಿನ ಸಂಖ್ಯೆ ಆಧಾರವಾಗಿ ಇರಿಸಿಕೊಳ್ಳಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಮಾಹಿತಿ ತಿರುಚುವುದು, ಬದಲಿ ಅಭ್ಯರ್ಥಿ ಗಳು ಪರೀಕ್ಷೆ ಬರೆಯುವಂತಹ ಅಕ್ರಮಗಳನ್ನು ತಡೆಯಬಹುದು. ಪಿಯು ಇಲಾಖೆಗೆ ಸಂಬಂಧಿಸಿ ಇದು ಅತಿ ಮುಖ್ಯ ಹೆಜ್ಜೆಯಾಗಿದೆ ಎಂದು ಗೋಡಬೋಲೆ ತಿಳಿಸಿದರು.
ಪ್ರಾಯೋಗಿಕವಾಗಿ ಜಿಲ್ಲೆಗೊಂದರಂತೆ ಕೆಲ ಕಾಲೇಜುಗಳಲ್ಲಿ ತಂತ್ರಾಂಶ ಬಳಸಿ ಪ್ರಕ್ರಿಯೆ ಪಡೆದು ಮೇ-ಜೂನ್‍ನಲ್ಲಿ ನಡೆಯುವ ಪ್ರವೇಶ ಪ್ರಕ್ರಿಯೆಯ ಸಂದರ್ಭದಲ್ಲಿ ತಂತ್ರಾಂಶ ಅನುಷ್ಠಾನಕ್ಕೆ ತರಲಾಗುವುದು. ಕರ್ನಾಟಕ ಪರೀಕ್ಷಾ ಪ್ರಾ„ಕಾರದ ಸಿಇಟಿ ಆನ್‍ಲೈನ್ ಪ್ರಕ್ರಿಯೆ ಗೆ ಸಹಕಾರ ನೀಡುತ್ತಿರುವ ಎನ್‍ಐಸಿ ತಂಡ ಇದನ್ನು ನಿಭಾಯಿಸಲಿದೆ ಎಂದರು.
ನಿಯಮದಲ್ಲಿ ಬದಲಾವಣೆ: ಪರೀಕ್ಷಾಪ್ರಾಧಿಕಾರಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ಹಾಗೂ ಪಿಯು ಇಲಾಖೆಯಲ್ಲಿ ನಿವೃತ್ತರಾದ ಭ್ರಷ್ಟ ಅಧಿಕಾರಿಗಳನ್ನು ನೇಮಿಸಿ ಕೊಳ್ಳಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಗೋಡಬೋಲೆ, ಇದು ನನ್ನ ಗಮನಕ್ಕೂ ಬಂದಿದ್ದು ವೃಂದ ಹಾಗೂ ನೇಮಕ ನಿಯಮಕ್ಕೆ ಬದಲಾವಣೆ ತಂದು ನೇರ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸುತ್ತಿದ್ದೇನೆ. ಪ್ರಾಧಿಕಾರಕ್ಕೆ ಹೊಸ ಜವಾಬ್ದಾರಿಗಳು ಬರುತ್ತಿರುವುದರಿಂದ ಪ್ರತ್ಯೇಕ ಕಾಯಂ ಉದ್ಯೋಗಿಗಳ ಅಗತ್ಯವಿದೆ. ಭವಿಷ್ಯದಲ್ಲಿ ಇಂತಹ ತಪ್ಪು ಗಳು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಸಹಾಯಕ ನಿರ್ದೇಶಕಿ!
ದ್ವಿತೀಯ ಪಿಯು ವಿದ್ಯಾರ್ಥಿಗಳ ಸಿಇಟಿ ತರಬೇತಿಯ ಕಡತಗಳು ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೊಳೆಯುತ್ತಿದೆ, ಯಾವಾಗ ತರಬೇತಿ ಆರಂಬಿsಸುತ್ತೀರಿ ಎಂಬ ಪ್ರಶ್ನೆಗೆ ಅಸಹಾಯಕ ಉತ್ತರ ನೀಡಿದ ನಿರ್ದೇಶಕಿ ಸುಷ್ಮಾ, ಹಿರಿಯ ಅಧಿಕಾರಿಗಳು ಅನುಮತಿ ನೀಡಿದ ತಕ್ಷಣ ತರಬೇತಿ ಆರಂಭಿಸುತ್ತೇವೆ, ನಾನು ಏನೂ ಹೇಳೋಕೆ ಆಗಲ್ಲ. ಯಾವಾಗ ಆರಂಭವಾಗುತ್ತದೆ ಎನ್ನುವುದು ತಿಳಿದಿಲ್ಲ ಎಂದು ಹೇಳಿದರು. ಉನ್ನತ ಶಿಕ್ಷಣ ಇಲಾಖೆ ಏಕೆ ಹೀಗೆ ಮಾಡುತ್ತಿದೆ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡಲಿಲ್ಲ.
ಆನ್‍ಲೈನ್ ಅರ್ಜಿ ಯಶಸ್ಸು ಆಧರಿಸಿ ದಾಖಲೆ ಪರಿಶೀಲನೆ
ಸಿಇಟಿಗೆ ಆನ್‍ಲೈನ್ ಅರ್ಜಿ ಪ್ರಕ್ರಿಯೆ ಆರಂಭಿಸಿದಂತೆ ದಾಖಲೆ ಪರಿಶೀಲನೆಯನ್ನೂ ಆನ್ ಲೈನ್ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿರುವುದು ನಿಜ. ಆದರೆ ಆನ್‍ಲೈನ್ ಅರ್ಜಿ
ಪ್ರಕ್ರಿಯೆ ಸುಗಮವಾಗಿ ನಡೆದರೆ ಮಾತ್ರ ಅದನ್ನು ಜಾರಿಗೆ ತರುತ್ತೇವೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ ಅಂತ್ಯದ ಬಳಿಕ ಅಂತಿಮ ನಿರ್ಧಾರ ಹೊರಬೀಳಲಿದೆ. ಈ ಸಂಬಂಧ ಎನ್‍ಐಸಿ ತಂಡವು ತಂತ್ರಾಂಶ ಅಂತಿಮಗೊಳಿಸುತ್ತಿದೆ. ವಿದ್ಯಾರ್ಥಿಗಳಿಗೆ ಆಗುವ ತಾಂತ್ರಿಕ ಸಮಸ್ಯೆಗಳು ಆನ್‍ಲೈನ್ ಅರ್ಜಿ ಪ್ರಕ್ರಿಯೆಯಲ್ಲಿ ತಿಳಿಯುತ್ತದೆ. ಆ ನಂತರ ಮುಂದಿನ
ಹೆಜ್ಜೆ ಇಡಲಾಗುವುದು ಎಂದು ಗೋಡಬೋಲೆ ತಿಳಿಸಿದ್ದಾರೆ.
Advertisement