ಮುಂದಿನ ವರ್ಷವೇ 90 ಕಾಲೇಜಿಗೆ ಕಟ್ಟಡ ಭಾಗ್ಯ

ಇಂಜಿನಿಯರಿಂಗ್ ಕಾಲೇಜುಗಳೂ ಸೇರಿದಂತೆ ಒಟ್ಟು 90 ಕಾಲೇಜುಗಳಿಗೆ ಮುಂದಿನ ವರ್ಷದಲ್ಲಿ ಕಟ್ಟಡ ಭಾಗ್ಯ ಲಭಿಸಲಿದೆ ಎಂದು ಆರ್.ವಿ ದೇಶಪಾಂಡೆ ಭರವಸೆ ನೀಡಿದ್ದಾರೆ.
ಮುಂದಿನ ವರ್ಷವೇ 90 ಕಾಲೇಜಿಗೆ ಕಟ್ಟಡ ಭಾಗ್ಯ

ಬೆಳಗಾವಿ: ಘೋಷಣೆಯಾಗಿಯೂ ಹಳೇ ಗೋದಾಮುಗಳಲ್ಲಿ ನಡೆಯುತ್ತಿರುವ 10 ಇಂಜಿನಿಯರಿಂಗ್ ಕಾಲೇಜುಗಳೂ ಸೇರಿದಂತೆ ಒಟ್ಟು 90 ಕಾಲೇಜುಗಳಿಗೆ ಮುಂದಿನ ವರ್ಷದಲ್ಲಿ ಕಟ್ಟಡ ಭಾಗ್ಯ ಲಭಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ ದೇಶಪಾಂಡೆ ಭರವಸೆ ನೀಡಿದ್ದಾರೆ.

ರಾಜ್ಯದ 411 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 330 ಕಾಲೇಜುಗಳಿಗೆ ಸ್ವಂತ ಕಟ್ಟಡವಿದ್ದು 22 ಕಾಲೇಜುಗಳಿಗೆ ನಿವೇಶನಗಳಿದ್ದರೂ ಅಲ್ಲಿ ಕಟ್ಟಡ ಹೊಂದಲು ಸಾಧ್ಯವಿಲ್ಲ, ಇನ್ನೂ 59 ಕಾಲೇಜುಗಳಿಗೆ ನಿವೇಶನವಿಲ್ಲ ಎಂದು ಸದನಕ್ಕೆ ಮಾಹಿತಿ ನೀಡಿದ್ದಾರೆ.

ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ 81 ಸರ್ಕಾರಿ ಪಾಲಿಟೆಕ್ನಿಕ್ ಗಳಿಗೂ ನಿವೇಶನಗಳಿವೆ. ಅವುಗಳಲ್ಲಿ 60 ಕಾಲೇಜುಗಳಿಗೆ ಸ್ವಂತ ಕಟ್ಟಡಗಳಿದ್ದು, 21 ಕಾಲೇಜುಗಳ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿವೆ. ಸರ್ಕಾರ ಈ ಕಾಲೇಜುಗಳಿಗೆಲ್ಲ ಕಟ್ಟಡ ಒದಗಿಸುವ ನಿಟ್ಟಿನಲ್ಲಿ ಸ್ಪಷ್ಟ ಹೆಜ್ಜೆಗಳನ್ನು ಇಟ್ಟಿದೆ. ಪ್ರತಿಯೊಂದು ಕಾಲೇಜಿಗೂ ಕಟ್ಟಡ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಗೊಂದು ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 10 ಇಂಜಿನಿಯರಿಂಗ್ ಕಾಲೇಜು ಮತ್ತು 1 ಸಂಜೆ ಇಂಜಿನಿಯರಿಂಗ್ ಕಾಲೇಜನ್ನು ಸರ್ಕಾರ ತೆರೆದಿದೆ. ಅವುಗಳಲ್ಲಿ 6 ಕಾಲೇಜುಗಳಿಗೆ ಸ್ವಂತ ಕಟ್ಟಗಳಿದ್ದು 4 ಕಾಲೇಜುಗಳಿಗೆ ವಿಟಿಯು ಮೂಲಕ ಕಟ್ಟಡ ಒದಗಿಸುವ ಕಾರ್ಯ ನಡೆದಿದೆ ಎಂದು ವಿವರಿಸಿದ್ದಾರೆ.  

2015 -16 ಆಯವ್ಯಯದಲ್ಲಿ ಕಾಲೇಜುಗಳಿಗೆ ಕಟ್ಟಡ ಒದಗಿಸುವುದಕ್ಕಾಗಿಯೇ ರೂ 80 ಕೋಟಿ ನಿಗದಿ ಮಾಡಲಾಗಿದೆ. ಕಡಿಮೆ ಬಿದ್ದರೆ ಅಗತ್ಯ ನೆರವು ನೀಡಲಾಗುವುದು. ನಿವೇಶನ ಒದಗಿಸುವ ಜವಾಬ್ದಾರಿ ಆಯಾ ಜಿಲ್ಲಾಧಿಕಾರಿಯ ಹೊಣೆ ಎಂದು ಸ್ಪಷ್ಟಪಡಿಸಿದ ಅವರು, ಇಲಾಖೆ ಅಧಿಕಾರಿಗಳು ಮೇಲಿಂದ ಮೇಲೆ ಕಾಮಗಾರಿಗಳ ಪರಿಶೀಲನೆ ನಡೆಸಿ ತೀವ್ರಗತಿಯಲ್ಲಿ ಅವು ಪೂರ್ಣಗೊಳ್ಳುವಂತೆ ನೋಡಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com