ಬಿಬಿಎಂಪಿ ಚುನಾವಣೆ: ಅಮಿತ್ ಶಾ ಮಾಸ್ಟರ್ ಪ್ಲ್ಯಾನ್

ಮುಂಬರುವ ಬೆಂಗಳೂರು ಮಹಾನಗರ ಪಾಲಿಕೆಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ರಣತಂತ್ರ ರೂಪಿಸುತ್ತಿದ್ದಾರೆ...
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
Updated on

ಬೆಂಗಳೂರು: ಮುಂಬರುವ ಬೆಂಗಳೂರು ಮಹಾನಗರ ಪಾಲಿಕೆಯನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ರಣತಂತ್ರ ರೂಪಿಸುತ್ತಿದ್ದಾರೆ.

ಜುಲೈ 4ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಅಮಿತ್ ಶಾ ವಿವಿಧ ಸಭೆ ನಡೆಸುತ್ತಿದ್ದಾರೆ. ಜುಲೈ 5ರಂದು ಸಂಜೆ 5 ಗಂಟೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಬಿಬಿಎಂಪಿಯ ಎಲ್ಲಾ ವಾರ್ಡ್ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ. ಚುನಾವಣೆ ಪೂರ್ವತಯಾರಿ ಕುರಿತಂತೆ ಅವರು ಮಾರ್ಗದರ್ಶನ ಮಾಡಲಿದ್ದಾರೆ.

ದಕ್ಷಿಣ ಭಾರತ ಮಟ್ಟದ ಸಭೆ:
ಅದೇ ದಿನ ಬೆಳಗ್ಗೆ 9.30ರಿಂದ ಸಂಜೆವರೆಗೆ ಗಾಯತ್ರಿ ವಿಹಾರ್‍ನಲ್ಲಿ ಬಿಜೆಪಿ ದಕ್ಷಿಣ ಭಾರತ ರಾಜ್ಯಗಳ ಪ್ರಮುಖರೊಂದಿಗೆ ಅಮಿತ್ ಶಾ ಸಭೆ ನಡೆಸುವರು.

ಎಂಟು ರಾಜ್ಯಗಳ ಮಹಾ ಸಂಪರ್ಕ ಅಭಿಯಾನದ ವಿವರಣೆ ಪಡೆದುಕೊಳ್ಳುವ ಶಾ, ಪಕ್ಷ ಸಂಘಟನೆಗೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ. ಸಭೆಯಲ್ಲಿ ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ ಸೇರಿದಂತೆ ಎಂಟು ರಾಜ್ಯ ಘಟಕದ ಅಧ್ಯಕ್ಷರು ಸೇರಿದಂತೆ 800 ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

`ಕಾಂಗ್ರೆಸ್‍ಗೆ ನಡುಕ': ಚುನಾವಣೆಗೆ ಬಿಜೆಪಿ ಎಲ್ಲಾ ರೀತಿಯಲ್ಲೂ ಸಿದ್ಧವಾಗಿದೆ, ಮಹಾಸಂಪರ್ಕ ಅಭಿಯಾನದ ಮೂಲಕ ಮನೆ ಮನೆ ಭೇಟಿಯನ್ನು ನಡೆಸುತ್ತಿದ್ದು ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನು ಕಂಡ ಸರ್ಕಾರಕ್ಕೆ ಬಿಜೆಪಿ ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂದು ಭಾವಿಸಿ ಚುನಾವಣೆ ಮುಂದೂಡಲು ಹವಣಿಕೆ ನಡೆಸುತ್ತಿದೆ ಎಂದು ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಸುಬ್ಬ ನರಸಿಂಹ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್‍ನಿಂದ ನಡೆದ ಸದಸ್ಯತ್ವ ಅಭಿಯಾನದಲ್ಲಿ 15 ಲಕ್ಷ ಸದಸ್ಯತ್ವ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಗುರಿ ಮೀರಿ 20 ಲಕ್ಷ ಜನರ ಸದಸ್ಯತ್ವ ಮಾಡಿಕೊಳ್ಳಲಾಗಿದೆ. ಈಗ ಮಹಾಸದಸ್ಯತ್ವ ಅಭಿಯಾನದ ಹೆಸರಿನಲ್ಲಿ ಈ ಸದಸ್ಯರನ್ನು ಮುಖತಃ ಭೇಟಿ ಮಾಡಿದ್ದೇವೆ. ಕೇಂದ್ರ ಸರ್ಕಾರದ ಸಾಧನೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬರೆದಿರುವ ಪತ್ರ, ಬಿಬಿಎಂಪಿ ಅಧಿಕಾರಾವಧಿಯಲ್ಲಿ ಮಾಡಿದ ಅಭಿವೃದ್ಧಿ ಸಾಧನೆಗಳನ್ನು ಬಿಂಬಿಸುವ ಕರಪತ್ರ ನೀಡುತ್ತಿದ್ದೇವೆ. ಈ ಅಂಶಗಳನ್ನು ಮನಗಂಡೇ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರ ಪ್ರಯತ್ನ ನಡೆಸಿದೆ ಎಂದು ಅವರು ಆರೋಪಿಸಿದರು.

ನಕಲಿ ಗುರುತಿನ ಚೀಟಿ:
ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಗುರುತಿನ ಚೀಟಿಗೆ ಹೆಸರು ನೊಂದಾಯಿಸುವ ಪ್ರಕ್ರಿಯೆ ನಡೆದಿದೆ. ಇದೇ ಸಂದರ್ಭದಲ್ಲಿ ನಕಲಿ ಗುರುತಿನ ಚೀಟಿ ಪತ್ತೆ ಮಾಡುವ ಕೆಲಸವೂ ಆಗಬೇಕೆಂದು ಜಯನಗರ ಶಾಸಕ ವಿಜಯಕುಮಾರ್ ಒತ್ತಾಯಿಸಿದ್ದಾರೆ. ಸಾವಿರಾರು ನಕಲಿ ಗುರುತಿನ ಚೀಟಿಗಳಿವೆ. ಬಾಂಗ್ಲಾ ವಲಸಿಗರು ಗುರುತಿನ ಚೀಟಿ ಮಾಡಿಸಿಕೊಂಡ ಉದಾಹರಣೆಯೂ ಇದೆ. ಹೀಗಾಗಿ ವಾರ್ಡ್ ಮಟ್ಟದಲ್ಲಿ ನಕಲಿ ಗುರುತಿನ ಚೀಟಿ ಪತ್ತೆ ಮಾಡುವ ಕಾರ್ಯ ಮತ್ತು ಈಗ ಹೆಸರು ಸೇರಿಸಲು ಬರುವ ಅರ್ಜಿ ಹಳೇ ಕಡತವಾಗಿ ಮಾರ್ಪಾಡಾಗದೆ ಇದೇ ಚುನಾವಣೆಗೆ ಮತದಾನ ಹಕ್ಕು ಕಲ್ಪಿಸುವ ವ್ಯವಸ್ಥೆಯೂ ಆಗಬೇಕೆಂದು ಅವರು ಆಗ್ರಹಿಸಿದರು.

ಗೃಹ ಸಚಿವರು ವಿಫಲ:
ಬೆಂಗಳೂರಿನ ಕಾನೂನು ಸುವ್ಯವಸ್ಥೆ ಕುರಿತಂತೆ ಮಾತನಾಡಿದ ಅವರು, ದಿನನಿತ್ಯ ಸರಗಳ್ಳತನ ನಡೆಯುತ್ತಲೇ ಇದ್ದು, ಇದನ್ನು ತಡೆಯಲು ಗೃಹ ಸಚಿವರು ಮತ್ತು ನಗರ ಪೊಲೀಸ್ ಆಯುಕ್ತರು ಬಿಗಿ ಕ್ರಮಕೈಗೊಳ್ಳುತ್ತಿದ್ದಾರೆ ಎಂದೆನಿಸುತ್ತಿಲ್ಲ. ವಾರದ ಚಟುವಟಿಕೆಯಂತೆ ನಿರಂತರವಾಗಿ ಸರಗಳ್ಳತನ ನಡೆಯುತ್ತಲೇ ಇದೆ. ಗೃಹ ಸಚಿವರು ಒಟ್ಟಾರೆ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರೂ ಸಹ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೆನಿಸುತ್ತಿಲ್ಲ. ಇನ್ನಾದರೂ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸುವುದಾಗಿ ವಿಜಯಕುಮಾರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com