
ಸುವರ್ಣ ವಿಧಾನಸೌಧ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಪ್ತ ಸಚಿವ ಎಚ್. ಆಂಜನೇಯ ಸೇರಿದಂತೆ ಇತರೆ ಸಚಿವರ ಕಾರ್ಯವೈಖರಿ ಬಗ್ಗೆ ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮತ್ತೆ ಆಕ್ರೋಶ ವ್ಯಕ್ತವಾಯಿತು.
ಪರಿಶಿಷ್ಟ ಜಾತಿ ಮತ್ತು ಗಿರಿಜನ ವಿಶೇಷ ಉಪಯೋಜನೆ ಅನುಷ್ಠಾನವನ್ನು ಸಚಿವ ಎಚ್. ಆಂಜನೇಯ ಕೇವಲ ಕಡತ ಮತ್ತು ಮಾತಿಗೆ ಸೀಮಿತಗೊಳಿಸುತ್ತಿದ್ದಾರೆ. ವಿಶೇಷ ಉಪ ಯೋಜನೆಗೆ ಮೀಸಲಿಟ್ಟ 15 ಸಾವಿರ ಕೋಟಿ ಹಣಕ್ಕೆ ತಾವೊಬ್ಬರೇ ಮಾಲೀಕರು ಎಂಬಂತೆ ಆಂಜನೇಯ ವರ್ತಿಸುತ್ತಿದ್ದಾರೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರಾದ ಪ್ರಸಾದ್ ಅಬ್ಬಯ್ಯ, ನರೇಂದ್ರ ಸ್ವಾಮಿ, ಶಿವರಾಂ ಹೆಬ್ಬಾರ್, ಸಿದ್ದು ನ್ಯಾಮೇಗೌಡ ಸೇರಿದಂತೆ ಮೀಸಲು ಮತ್ತು ಸಾಮಾನ್ಯ ಕ್ಷೇತ್ರದ 20ಕ್ಕೂ ಹೆಚ್ಚು ಶಾಸಕರು ಭಾರಿ ಆಕ್ಷೇಪ ವ್ಯಕ್ತಪಡಿಸಿದರು. ತಮ್ಮ ಆಪ್ತ ಸಚಿವರ ಬಗ್ಗೆ ಈ ರೀತಿ ಆಕ್ಷೇಪ ವ್ಯಕ್ತವಾಗಿದ್ದರಿಂದ ತುಸು ವಿಚಲಿತರಾದ ಸಿಎಂ ಸಿದ್ಧರಾಮಯ್ಯ, ನಾನೇ ಇನ್ನು ಮುಂದೆ ಈ ಬಗ್ಗೆ ವೈಯಕ್ತಿಕ ಜವಾಬ್ದಾರಿ ತೆಗೆದುಕೊಳ್ಳುವುದರ ಜತೆಗೆ ಆಂಜನೇಯ ಅವರ ಜತೆ ಮಾತನಾಡುತ್ತೇನೆ ಎಂದು ಶಾಸಕರಿಗೆ ಭರವಸೆ ನೀಡಿದ್ದಾರೆ.
ಲೋಕಾಯುಕ್ತ ಸ್ವಾಯತ್ತ ಸಂಸ್ಥೆಯಾಗಿದ್ದು, ಸರ್ಕಾರ ಇದರಲ್ಲಿ ನೇರವಾಗಿ ಭಾಗವಹಿಸುವಂತಿಲ್ಲ. ಲೋಕಾಯುಕ್ತರು ಸೂಚನೆ ನೀಡಿದರೆ ಸರ್ಕಾರ ಸಿಬಿಐ ತನಿಖೆಗೆ ವಹಿಸುತ್ತದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಸ್ ಐಟಿ ರಚನೆ ಮಾಡುವಂತೆ ಲೋಕಾಯುಕ್ತರು ಹೇಳಿದ್ದರು. ಅದರಂತೆ ಎಡಿಜಿಪಿ ಕಮಲ್ ಪಂಥ್ ನೇತೃತ್ವದಲ್ಲಿ ಎಸ್ ಐಟಿ ರಚನೆ ಮಾಡಲಾಗಿದೆ ಎಂದರು.
Advertisement