ಸರ್ವೆ ನಂಬರ್ ಗುರುತು ಇನ್ನು ಸುಲಭ

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿಗಳು ಯಾವ ಸರ್ವೆ ನಂಬರ್ ಗೆ ಸೇರುತ್ತವೆ...
ಭೂ ದಾಖಲೆ, ಸರ್ವೆ ಇಲಾಖೆ ಆಯುಕ್ತ ಮನೀಷ್ ಮೌದ್ಗಿಲ್ ಸುದ್ದಿಗೋಷ್ಠಿಯಲ್ಲಿ ಇಲಾಖೆಯ ನೂತನ ಕ್ರಮಗಳ ಬಗ್ಗೆ ವಿವರಿಸಿದರು
ಭೂ ದಾಖಲೆ, ಸರ್ವೆ ಇಲಾಖೆ ಆಯುಕ್ತ ಮನೀಷ್ ಮೌದ್ಗಿಲ್ ಸುದ್ದಿಗೋಷ್ಠಿಯಲ್ಲಿ ಇಲಾಖೆಯ ನೂತನ ಕ್ರಮಗಳ ಬಗ್ಗೆ ವಿವರಿಸಿದರು

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿಗಳು ಯಾವ ಸರ್ವೆ ನಂಬರ್ ಗೆ ಸೇರುತ್ತವೆ ಎಂಬ ಮಾಹಿತಿಯನ್ನು ಸಾರ್ವಜನಿಕರು ಇನ್ನು ಮುಂದೆ ಭೂಮಾಪನ ಇಲಾಖೆಯ landrecords.karnataka.gov.in ವೆಬ್ ಸೈಟ್ ನಲ್ಲಿ ಸುಲಭವಾಗಿ ವೀಕ್ಷಿಸಬಹುದು.

ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಭೂ ದಾಖಲೆ, ಸರ್ವೆ ಇಲಾಖೆ ಆಯುಕ್ತ ಮನೀಷ್ ಮೌದ್ಗಿಲ್, ಸದ್ಯ ಬೆಂಗಳೂರಿನ ಆಸ್ತಿಯ ಸರ್ವೆ ನಂಬರ್ ಮಾಹಿತಿಯನ್ನು ಮಾತ್ರ ವೆಬ್ ಸೈಟಿಗೆ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆಯ ಮಾಹಿತಿಯನ್ನು ಹಂತಹಂತವಾಗಿ ಅಳವಡಿಸಲಾಗುತ್ತದೆ ಎಂದರು.

ಹುಡುಕಾಟ ಬೇಕಿಲ್ಲ: 1965ರಲ್ಲಿ ಸಿದ್ಧಪಡಿಸಿರುವ ಗ್ರಾಮ ನಕಾಶೆಗಳನ್ನು ಡಿಜಿಟೈಸ್ ಮಾಡಿ, ಜಿಯೋ ರೆಫರೆನ್ಸ್ ಮೂಲಕ ಅವುಗಳನ್ನು ಗೂಗಲ್ ಸೆಟಲೈಟ್ ಇಮೇಜ್ ಮೇಲೆ ಅಳವಡಿಸಲಾಗಿದೆ.

ಸಾರ್ವಜನಿಕರು ಗೂಗಲ್ ಸೆಟಲೈಟ್ ಇಮೇಜ್ ನಲ್ಲಿ ತಮ್ಮ ಆಸ್ತಿ ಅಥವಾ ಮನೆಯನ್ನು ಗುರುತಿಸಿಕೊಂಡು, ಅದು ಈ ಹಿಂದಿನ ಯಾವ ಗ್ರಾಮದ ಯಾವ ಸರ್ವೆ ನಂಬರ್ ಗೆ ಸೇರಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಅದೇ ರೀತಿ, ಖರೀದಿಸುವ ನಿವೇಶನ ಅಥವಾ ಕಟ್ಟಡ ಯಾವ ಸರ್ವೆ ನಂಬರ್ ನಲ್ಲಿದೆ ಎಂದು ವೆಬ್ ಸೈಟ್ ನೋಡಿ ತಿಳಿದುಕೊಳ್ಳಬಹುದು. ಇದರಿಂದ ಖರೀದಿದಾರರು ಮೋಸ ಹೋಗುವ ಸಂದರ್ಭಗಳು ಕಡಿಮೆ ಎಂದು ವಿವರಿಸುತ್ತಾರೆ ಮನೀಶ್ ಮೌದ್ಗಿಲ್.

ಸದ್ಯ ಅಳವಡಿಸಿರುವ ಮಾಹಿತಿ ಕೇವಲ ತಿಳುವಳಿಕೆಗಷ್ಟೇ, ಇದು ಇಲಾಖೆ ನೀಡುವ ಅಧಿಕೃತ ಮಾಹಿತಿಯಲ್ಲ ಎಂದೂ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಶೀಫ್ರವೇ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಲಾಗುತ್ತಿದ್ದು. ಅದರಲ್ಲಿ ಸರ್ವೆ ನಂಬರ್ ಪತ್ತೆ ಮಾಡುವ ಸುಲಭ ಅವಕಾಶ ಮಾಡಿಕೊಡಲಾಗುತ್ತಿದೆ. ಯಾವ ಜಾಗದಲ್ಲಿ ನಿಂತು ಮೊಬೈಲ್ ಆ್ಯಪ್ ಮೂಲಕ ಕೋರಿಕೆ ಸಲ್ಲಿಸಲಾಗುತ್ತದೋ ಆ ನಿವೇಶನ ಸರ್ವೆ ನಂಬರ್ ತಕ್ಷಣವೇ ಸಂದೇಶ ರೂಪದಲ್ಲಿ ಬರುವ ವ್ಯವಸ್ಥೆ ಮಾಡಲಾಗಿದೆ ಎಂದು ಮನೀಶ್ ತಿಳಿಸಿದರು.

ಕೆರೆಯಂಗಳದಲ್ಲಿದ್ದೀರಾ ನೋಡಿಕೊಳ್ಳಿ: ಎಲ್ಲಕ್ಕಿಂತಲೂ ಮುಖ್ಯವಾಗಿ, ಬೆಂಗಳೂರಿನ ಯಾವುದೇ ಆಸ್ತಿಯು ಕೆರೆಗಳಲ್ಲಿ ಅಥವಾ ರಾಜ ಕಾಲುವೆಗಳಲ್ಲಿ ನಿರ್ಮಾಣವಾಗಿದ್ದರೆ ಅಂತಹ ಮಾಹಿತಿಯನ್ನು ಸಹ ಪರಿಶೀಲಿಸಿಕೊಳ್ಳಲು ಅವಕಾಶವಿದೆ.

ಬೆಂಗಳೂರಿನ ಕೆರೆಗಳ ಸರ್ವೆ ಕಾರ್ಯ ನಡೆಸಿ ವೆಬ್ ಸೈಟ್ ನಲ್ಲಿ ಹಾಕಲಾಗುತ್ತಿದೆ. ಅಲ್ಲದೆ 1965ರಲ್ಲಿದ್ದ ಕೆರೆಯನ್ನು ಮರು ಸರ್ವೆ ನಡೆಸುವ ಜೊತೆಗೆ ಎಷ್ಟು ಒತ್ತುವರಿಯಾಗಿದೆ, ಯಾವ ಮನೆಗಳೆಲ್ಲಾ ಒತ್ತುವರಿಯಾಗಿದೆ ಎಂಬುದನ್ನೂ ವೆಬ್ ಸೈಟ್ ನಲ್ಲಿ ಹಾಕಲಾಗುತ್ತದೆ. ಸರ್ವೆ ನಂಬರ್ ನ್ನು ಭೂ ಮಾಪನ ಇಲಾಖೆ ವೆಬ್ ಸೈಟ್ ನೋಡಿ ತಿಳಿದುಕೊಳ್ಳಬಹುದು. ಬೆಂಗಳೂರು ನಗರದ ಕೆಲವು ಗ್ರಾಮಗಳ ಆರ್. ಟಿ.ಸಿ ಮಾಹಿತಿ ಈಗ ಲಭ್ಯವಿಲ್ಲ, ಸದ್ಯದಲ್ಲಿಯೇ ಅವುಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮನೀಶ್ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com