
ಬೆಂಗಳೂರು: ಸಿನಿಮಾ ನಕಲಿ ಡಿವಿಡಿ-ಸಿಡಿ ತಯಾರಿಕೆ ಜಾಲ ಪತ್ತೆ ಮಾಡಿರುವ ಪೊಲೀಸರು 60 ಲಕ್ಷ ರೂ ಮೌಲ್ಯದ ಸಿಡಿಗಳು ಹಾಗೂ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನಕಲಿ ಸಿಡಿಗಳಿಂದಾಗಿ ದಕ್ಷಿಣ ಭಾರತ ಸಿನಿಮಾ ಕ್ಷೇತ್ರಗಳಿಗೆ ಕಳೆದ ಐದಾರು ವರ್ಷಗಳಿಂದ ರೂ 600 ರಿಂದ 700 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ, ನಕಲಿ ಡಿವಿಡಿ ಮಾರಾಟ ಜಾಲದಿಂದ ಚಿತ್ರೋದ್ಯಮದ ಮೇಲೆ ಭಾರಿ ಪೆಟ್ಟು ಬಿದ್ದಿರುವ ಬಗ್ಗೆ ಕನ್ನಡ, ತೆಲುಗು, ತಮಿಳು ಚಿತ್ರ ನಿರ್ಮಾಪಕರು ಅಳಲು ತೋಡಿಕೊಂಡಿದ್ದರು. ಅಲ್ಲದೇ ಈ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದಲೇ ಪೈರಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಬಂದಿತ್ತು. ಹೀಗಾಗಿ ಜಾಲದ ಪತ್ತೆಗೆ ಸಿಸಿಬಿಯ ವಿಶೇಷ ತಂಡ ರಚಿಸಲಾಗಿತ್ತು ಎಂದು ಹೇಳಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಜೂನ್ 26 ರಂದು ದೀಪಾಂಜಲಿನಗರ 9 ನೇ ಅಡ್ಡರಸ್ತೆಯ ಮನೆಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಎಂ ಕೃಷ್ಣಾ ರೆಡ್ಡಿ,ಟಿ ರಾಜೇಂದ್ರ, ಸಿಹೆಚ್ ವೆಂಕಟೇಶ್, ಇಮ್ರಾನ್, ರಂಗೇಶ ಹಾಗೂ ಬಸವರಾಜು ಬಂಧಿತ ಆರೋಪಿಗಳಾಗಿದ್ದು ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ರೆಡ್ಡಿ ತಿಳಿಸಿದ್ದಾರೆ.
ಸಿನಿಮಾ ಬಿಡುಗಡೆಯಾದ ದಿನವೇ ಚಿತ್ರ ಮಂದಿರದ ವ್ಯವಸ್ಥಾಪಕರ ನೆರವಿನಿಂದ ಚಿತ್ರ ಮಂದಿರದಲ್ಲೇ ಕ್ಯಾಮೆರಾದಲ್ಲಿ ಚಿತ್ರೀಕರಿಸಿ ನಕಲಿ ಡಿವಿಡಿ ತಯಾತಿಸಿ ಸಂಜೆಯಷ್ಟರಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ ಇತ್ತೀಚೆಗೆ ಬಿಡುಗಡೆಯಾದ ವಿವಿಧ ಭಾಷೆಗಳ ಸಿನಿಮಾಗಳು, ಅಶ್ಲೀಲ ಚಲನಚಿತ್ರಗಳ 16 ಸಾವಿರ ಡಿವಿಡಿ ಲ್ಯಾಪ್ ಟಾಪ್ ಗಳು ಡಿವಿಡಿ ರೀಡ್ ಮಾಡುವ 14 ರಿಪ್ಲಿಕೇಟರ್ ಯಂತ್ರಗಳು ಸೇರಿದಂತೆ 60 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ರೆಡ್ಡಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ನಕಲಿ ಸಿಡಿಯಿಂದ ಒಂದೂವರೆ ವರ್ಷದಲ್ಲಿ ಸುಮಾರು ಒಂದೂವರೆ ಕೋಟಿ ವಹಿವಾಟು ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ. ನಿರ್ಮಾಪಕರು, ಆಡಿಯೋ, ವಿಡಿಯೋ ಉದ್ಯಮ ಸೇರಿದಂತೆ ಇಡಿ ಚಲನಚಿತ್ರ ರಂಗಕ್ಕೆ ವಂಚಿಸಿ ಸರ್ಕಾರಗಳಿಗೆ ಮನರಂಜನಾ ಸೇವಾ ತೆರಿಗೆ ರೂಪದಲ್ಲಿ ಬರಬೇಕಾದ ಕೋಟ್ಯಂತರ ರೂಪಾಯಿ ನಷ್ಟ ಮಾಡುತ್ತಿದ್ದರು ಎಂದು ಸಿಸಿಬಿ ಡಿಸಿಪಿ ರಮೇಶ್ ಹೇಳಿದ್ದಾರೆ.
Advertisement