
ತುಮಕೂರು: ಬ್ಯಾಂಕ್ ಸಾಲಕ್ಕಿಂತ ಮೀಟರ್ ಬಡ್ಡಿ, ಚೀಟಿ ಅವ್ಯವಹಾರದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾನೂನು ಸಚಿವ ಟಿ.ಬಿ ಜಯಚಂದ್ರ ಹೇಳಿದ್ದಾರೆ.
ತುಮಕೂರಿನಲ್ಲಿ ಪತ್ರಿಕಾ ದಿಚಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳಿಗೆ ಸಹಕಾರಿ ಮತ್ತು ರಾಷ್ಟ್ರೀಯ ಬ್ಯಾಂಕ್ ಗಳಲ್ಲಿನ ಸಾಲಕ್ಕಿಂತ ಮೀಟರ್ ಬಡ್ಡಿ ಹಾಗೂ ಚೀಟಿಗಳಲ್ಲಿ ರೈತ ಮಹಿಳೆಯರು, ರೈತರು ಹಣ ತೊಡಗಿಸುತ್ತಿರುವುದು ಸಹ ಕಾರಣ ಎಂಬುದು ಗಮನಾರ್ಹ ಎಂದರು. ಇದನ್ನು ನಿಯಂತ್ರಿಸುವ ಸಲುವಾಗಿ ಪ್ರತ್ಯೇಕ ಕಾನೂನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವರು ತಿಳಿಸಿದ್ದಾರೆ.
ನಾನಾ ಕಾರಣ: ರೈತರ ಆತ್ಮಹತ್ಯೆಗೆ ನಾನಾ ಕಾರಣಗಳಿವೆ. ಕೇವಲ ರಾಷ್ಟ್ರೀಕೃತ ಬ್ಯಾಂಕ್ ಸಾಲವೊಂದೇ ಕಾರಣ ಅಲ್ಲ ಗ್ರಾಮೀಣ ಪ್ರದೇಶದ ಪುರುಷರು, ಮಹಿಳೆಯರು, ಚೀಟಿ ದಂಧೆ ಕಪಿ ಮುಷ್ಠಿಗೆ ಸಿಲುಕಿದ್ದು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ತಮ್ಮ ಸ್ವಕ್ಷೇತ್ರ ಶಿರಾ ತಾಲೂಕಿನ ಮೈತ್ರಿ ಎಂಬ ಮಹಿಳಾ ಸಂಘಟನೆಯೊಂದು ಸುಮಾರು 200 ಕೋಟಿ ರೂ ವಂಚನೆ ಮಾಡಿದೆ. ಇವರಿಂದ ವಂಚನೆಗೊಳಗಾದವರು ತಮ್ಮ ಬಳಿ ದೂರು ತಂದಾಗ ಆಘಾತಕ್ಕೊಳಗಾದೆ. ಅಲ್ಲದೇ ಅವರನ್ನು ತರಾಟೆಗೆ ತೆಗೆದುಕೊಂಡದ್ದಾಗಿಯೂ ಸಚಿವರು ಹೇಳಿದ್ದಾರೆ.
ಚೀಟಿಗಳಲ್ಲಿ ಹಣ ತೊಡಗಿಸುವ ಸರ್ಕಾರವನ್ನು ಕೇಳದ ಜನ ವಂಚನೆಗೊಳಗಾದ ಕೂಡಲೇ ಬರುತ್ತಾರೆ. ಈ ಕುರಿತು ಸಿಐಡಿಯಿಂದ ತನಿಖೆ ನಡೆಸಿದಾಗ ವಂಚಕರೆಲ್ಲಾ ಆಂಧ್ರ ಪ್ರದೇಶದ ಮೂಲದವರು ಎಂದು ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳುವವರೆಲ್ಲಾ ರೈತರಲ್ಲ. ರೈತರು ಬ್ಯಾಂಕ್ ಗಳಲ್ಲಿ ಕೇವಲ ಕೃಷಿ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಅದಕ್ಕೆ ನಾನಾ ಕಾರಣಗಳಿರುತ್ತವೆ. ಈ ಕಾರಣಗಳನ್ನು ಪತ್ತೆ ಮಾಡಿ ವಸ್ತುನಿಷ್ಠ ವರದಿ ಮಾಡುವಂತಾಗಬೇಕು ಎಂದು ಹೇಳಿದರು.
ನಿಜಕ್ಕೂ ಕೃಷಿ ಸಾಲದಿಂದಾಗಿ ಸಂಕಷ್ಟದಲ್ಲಿರುವ ರೈತರು ಆತ್ಮಹತ್ಯೆಗೆ ಮುಂದಾಗಬಾರದು. ಸರ್ಕಾರ ನಿಮ್ಮ ಜತೆಯಲ್ಲಿದೆ ಎಂದು ಸಚಿವರು ಧೈರ್ಯ ತುಂಬಿದರು.
Advertisement