ರಾತ್ರೋರಾತ್ರಿ ಮರಕತ್ತರಿಸಿದ ಸಫೈರ್ ಮಾಲ್ ವಿರುದ್ಧ ದೂರು, ಎಫ್ಐ.ಆರ್ ದಾಖಲು

ಬನಶಂಕರಿ 3 ನೇ ಹಂತದ 100 ಅಡಿ ರಸ್ತೆಯ ನಡುವಿನ 10 ಮರಗಳನ್ನು ರಾತ್ರೋರಾತ್ರಿ ಕಡಿದಿರುವ ವಿಚಾರ ಮರುದಿನ ಸಾರ್ವಜನಿಕರು ಹಾಗೂ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ಬಂದಿದೆ.
ರಾತ್ರೋರಾತ್ರಿ ಕತ್ತರಿಸಲಾಗಿರುವ ಮರಗಳು
ರಾತ್ರೋರಾತ್ರಿ ಕತ್ತರಿಸಲಾಗಿರುವ ಮರಗಳು

ಬೆಂಗಳೂರು: ಬನಶಂಕರಿ 3 ನೇ ಹಂತದ 100 ಅಡಿ ರಸ್ತೆಯ ನಡುವಿನ 10 ಮರಗಳನ್ನು ರಾತ್ರೋರಾತ್ರಿ ಕಡಿದಿರುವ ವಿಚಾರ ಮರುದಿನ ಸಾರ್ವಜನಿಕರು ಹಾಗೂ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ಬಂದಿದೆ.

ರಸ್ತೆಬದಿಯಲ್ಲಿರುವ ಕೆಲವು ಶಾಪಿಂಗ್ ಮಾಲ್ ಹಾಗೂ ಮಳಿಗೆಗೆಳಿಗೆ ಅಡ್ಡಿ ಆಗಿರುವುದರಿಂದ ಮರಗಳನ್ನು ಕಡಿಯಲಾಗಿದೆ ಎಂದು ಸ್ಥಳೀಯರು ಹಾಗೂ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಸಫೈರ್ ಎಂಬ  ಆಟಿಕೆಗಳ ಮಳಿಗೆ ಮಾಲೀಕರು ಮರಗಳನ್ನು ಕಡಿಸಿದ್ದಾರೆ ಎಂದು ಸ್ಥಳೀಯರು ಹಾಗೂ ಬಿಬಿಎಂಪಿ ಅರಣ್ಯ ಘಟಕದ ಅಧಿಕಾರಿಗಳು ದೂರಿದ್ದಾರೆ. ಕೆಲವು ವರ್ಷಗಳ ಹಿಂದೆ ಈ ಜಾಗದಲ್ಲಿ ಇದೇ ಮಾದರಿಯಲ್ಲಿ ಮರಗಳನ್ನು ಕಡಿಯಲಾಗಿತ್ತು. ಈಗ ಮತ್ತೆ ಇದೇ  ಘಟನೆ ಪುನರಾವರ್ತನೆಯಾಗಿದೆ.

100 ಅಡಿ ಹೊರವರ್ತುಲ ರಸ್ತೆಯ ಮಧ್ಯ ಭಾಗದ ಡಿವೈಡರ್ ನಲ್ಲಿ ಮಗರಗಳನ್ನು ಬೆಳೆಸಿದ್ದು, ಅಶೋಕ ಮರಗಳ ಸಂಖ್ಯೆ ಹೆಚ್ಚಿದೆ. ರಸ್ತೆಯ ಎರಡೂ ಬದಿಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ಮಾಲ್, ಸಣ್ಣ ಮಳಿಗೆ ಹೋಟೆಲ್ ಗಳು ನಿರ್ಮಾಣವಾಗಿವೆ. 10  ಮರಗಳನ್ನು ಕಡಿಯಲಾಗಿದ್ದು ಕೆಲವು ಮರಗಳನ್ನು ಬುಡಸಹಿತ ಕೀಳಲಾಗಿದೆ.

ಕೆಲವು ಮರಗಳನು ಅರ್ಧಕ್ಕೆ ಕತ್ತರಿಸಲಾಗಿದೆ. ಇವು ಸಣ್ಣ ಕಾಂಡ ಹೊಂದಿರುವ ಮರಗಳಾಗಿದ್ದು, ಒಂದೇ ರಾತ್ರಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಮರಗಳ ಕೊಂಬೆ ಅಗಲವಾಗಿ ಹರಡುವುದರಿಂದ ವಿದ್ಯುತ್ ಕಂಬಗಳಿಗೆ ತಾಗುತ್ತದೆ. ಮಳೆಗಾಲದಲ್ಲಿ ಮರಗಳು ವಿದ್ಯುತ್ ಕಂಬ, ತಂತಿಗಳಿಗೆ ತಾಗುವ ಅಪಾಯವಿರುತ್ತದೆ. ಕೆಲವು ಮರಗಳ ಕೊಂಬೆಗಳು ವಿಸ್ತಾರವಾಗಿ ಹರಡುವುದರಿಂದ ರಸ್ತೆಯಿಂದ ಮಳಿಗೆಗಳಿ ಸರಿಯಾಗಿ ಕಾಣುವುದಿಲ್ಲ. ಹೀಗಾಗಿ ರಾತ್ರಿ ವೇಳೆ ಮರಗಳನ್ನು ಕದಿಯಲಾಗಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಸ್ಥಳೀಯರೊಬ್ಬರು ಸಫೈರ್ ಮಳಿಗೆ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್ಐಆರ್ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com