ಪೊಲೀಸ್ ಆಯುಕ್ತರ ಹುದ್ದೆಗೆ ಲಾಬಿ ಶುರು

ಖಾಲಿಯಾಗಲಿರುವ ಪೊಲೀಸ್ ಆಯುಕ್ತರ ಹುದ್ದೆಗೆ ಡಜನ್ ಗೂ ಅಧಿಕ ಎಡಿಜಿಪಿಗಳಿಂದ ಮುಸುಕಿನ ಪೈಪೋಟಿ ಏರ್ಪಟ್ಟಿದೆ.
ಎಂ.ಎನ್ ರೆಡ್ಡಿ
ಎಂ.ಎನ್ ರೆಡ್ಡಿ

ಬೆಂಗಳೂರು: ತಿಂಗಳಾಂತ್ಯಕ್ಕೆ ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಅವರು ಪೊಲೀಸ್ ಮಹಾ ನಿರ್ದೇಶಕರ(ಡಿಜಿಪಿ) ಹುದ್ದೆಗೆ ಮುಂಬಡ್ತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಖಾಲಿಯಾಗಲಿರುವ ಪೊಲೀಸ್ ಆಯುಕ್ತರ ಹುದ್ದೆಗೆ ಡಜನ್ ಗೂ ಅಧಿಕ ಎಡಿಜಿಪಿಗಳಿಂದ ಮುಸುಕಿನ ಪೈಪೋಟಿ ಏರ್ಪಟ್ಟಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರ ನಂತರ ಪ್ರಭಾವಿ ಹಾಗೂ ಅತ್ಯಂತ ಪ್ರಚಲಿತದಲ್ಲಿರುವ ಹುದ್ದೆಯೆಂದರೆ ಅದು ನಗರ ಪೊಲೀಸ್ ಆಯುಕ್ತರ ಹುದ್ದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ದರ್ಜೆ ಅಧಿಕಾರಿಗಳನ್ನು ಪೊಲೀಸ್ ಆಯುಕ್ತರ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಎಡಿಜಿಪಿ ದರ್ಜೆಯ ಬಹುತೇಕ ಐಪಿಎಸ್ ಅಧಿಕಾರಿಗಳು ತಮ್ಮ ಸೇವಾವಧಿಯಲ್ಲಿ ಒಮ್ಮೆ ಆಯುಕ್ತರ ಹುದ್ದೆಗೆ ಏರಬೇಕೆಂಬ ಬಯಕೆ ಇದ್ದೇ ಇರುತ್ತದೆ.

ಸದ್ಯ ರಾಜ್ಯದಲ್ಲಿ ಎಡಿಜಿಪಿ ದರ್ಜೆಯ 20 ಅಧಿಕಾರಿಗಳಿದ್ದಾರೆ. ಆದರೆ ಈ ಪೈಕಿ ಕೆಲ ಅಧಿಕಾರಿಗಳು ಮುಖ್ಯಮಂತ್ರಿಗಳಿಂದ ತರಾಟೆಗೆ ಒಳಗಾಗಿದ್ದಾರೆ. ಮತ್ತೆ ಕೆಲವರು ಕಾನೂನು ಸುವ್ಯವಸ್ಥೆ ಹಾಗೂ ಬೆಂಗಳೂರಿನಲ್ಲಿ ಅನುಭವ ಇಲ್ಲದೇ ಬೇರೆ ಬೇರೆ ಘಟಕಗಳಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದೆ ಹೆಚ್ಚು. ಹೀಗಾಗಿ ಸುಮಾರು 12 ಕ್ಕೂ ಹೆಚ್ಚು ಅಧಿಕಾರಿಗಳು ನಾ ಮುಂದು ತಾ ಮುಂದು ಎಂದು ಆಯುಕ್ತರ ಹುದ್ದೆಗೆ ಪರೋಕ್ಷವಾಗಿ ಸರ್ಕಾರದೊಂದಿಗೆ ಮಾತುಕತೆಯಲ್ಲಿ ತೊಡಗಿದ್ದಾರೆ. ಗೃಹ ಸಚಿವ ಕೆ.ಜೆ ಜಾರ್ಜ್ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರು ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರ ಆಯ್ಕೆಯೇ ಅಂತಿಮ. ಹೀಗಾಗಿ ನಗರ ಆಯುಕ್ತರ ಹುದ್ದೆ ದಕ್ಕುವುದು ಸುಲಭದ ಮಾತಲ್ಲ.

ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಹಾಗೂ ಹೆಚ್ಚಿನ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಅನುಭವ ಇರುವ, ನಗರ ವ್ಯಾಪ್ರಿಯ ಅಪರಾಧ ಪ್ರಕರಣಗಳ ಬಗ್ಗೆ ಹೆಚ್ಚಿನ ಅನುಭವ ಹೊಂದಿರುವ ಅಧಿಕಾರಿಗಳನ್ನು ಆಯುಕ್ತರ ಆಯ್ಕೆ ವೇಳೆ ಮಾನದಂಡವಾಗಿ ಪರಿಗಣಿಸುವುದು ಒಂದು ನಿಯಮ. ಹೀಗಾಗಿ ಈ ಹುದ್ದೆಗೆ ರಾಜ್ಯ ಎಡಿಜಿಪಿ ಎಸ್.ಎಸ್ ಮೆಘರಿಕ್, ಕೆ.ಎಸ್.ಆರ್.ಪಿ ಎಡಿಜಿಪಿ ಪ್ರವೀಣ್ ಸೂದ್, ಆಡಳಿ ವಿಭಾಗದ  ಎಡಿಜಿಪಿ ಅಲೋಕ್ ಮೋಹನ್, ಗುಪ್ತ ದಳದ ಎಡಿಜಿಪಿ ಎ.ಎಂ ಪ್ರಸಾದ್, ಬಿಎಂಟಿಎಫ್ ಮುಖ್ಯಸ್ಥ ಟು ಸುನಿಲ್ ಕುಮಾರ್ ಮುಂಚೂಣಿಯಲ್ಲಿದ್ದಾರೆ.

ಆಯುಕ್ತರ ಹುದ್ದೆಗೆ ಆಯ್ಕೆ ಮಾಡುವಂತೆ ಕೇಂದ್ರದಲ್ಲಿರುವ ಕಾಂಗ್ರೆಸ್ ಹಿರಿಯ ಮುಖಂಡರ ಮೂಲಕವೂ ಮುಖ್ಯಮಂರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಬರುವ ಸಾಧ್ಯತೆ ಇದೆ. ಏಕೆಂದರೆ ಎಡಿಜಿಪಿ ದರ್ಜೆ ಅಧಿಕಾರಿಗಳು ಕಾಂಗ್ರೆಸ್ ಹೈಕಮಾಂಡ್ ಮೂಲಕವೂ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com