
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಪಿತೂರಿ ನಡೆಸಲಾಗತ್ತಿದೆ ಎಂದು ಹಿರಿಯ ವಕೀಲ ಎಕೆ ಸುಬ್ಬಯ್ಯ ಹೇಳಿದ್ದಾರೆ.
ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆದಿದ್ದರೆ, ಅದರ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಆದರೆ ಯಾವುದೋ ಒಂದು ಕಾರಣನವನ್ನು ಇಟ್ಟುಕೊಂಡು ಇಡೀ ಸಂಸ್ಥೆಯ ನೈತಕಿ ಹಾಗೂ ಕಾನೂನಾತ್ಮಕ ಬಲವನ್ನು ದುರ್ಬಲಗೊಳಿಸುವುದು ಅಕ್ಷಮ್ಯವಾಗಿದೆ ಎಂದು ತಿಳಿಸಿದ್ದಾರೆ.
ಲೋಕಾಯುಕ್ತ ಭಾಸ್ಕರ್ ರಾವ್ ಅವರ ಮಗನ ಮೇಲೆ ಕೇಳಿಬರುತ್ತಿರುವ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು. ಹಾಗಂತ ಭಾಸ್ಕರ್ ರಾವ್ ಅವರು ಲೋಕಾಯುಕ್ತ ಸ್ಥಾನಕ್ಕೆ ರಾಜಿನಾಮೆ ನೀಡಬಾರದು. ಸರ್ಕಾರ ಎಸ್ ಐಟಿಯನ್ನು ರಚನೆ ಮಾಡಿದೆ. ಕೂಡಲೇ ಎಸ್ ಐಟಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದ ಅವರು, ಸತ್ಯ ತನಿಖೆಯಿಂದ ಬರಿಂಗವಾಗಬೇಕಿದೆ. ಅದಕ್ಕೆ ಅವಕಾಶ ನೀಡಿ. ಅದರ ಬದಲು ಭಾಸ್ಕರ್ ರಾವ್ ಅವರ ರಾಜಿನಾಮೆ ಅಪೇಕ್ಷಿಸುವುದು ಸರಿಯಲ್ಲ. ಲೋಕಾಯುಕ್ತ ಸಂಸ್ಥೆಯನ್ನು ರಕ್ಷಣೆ ಮಾಡುವುದು ಭಾಸ್ಕರ್ ರಾವ್ ಅವರ ಜವಾಬ್ದಾರಿಯಾಗಿರುತ್ತದೆ. ಲೋಕಾಯುಕ್ತ ಸಂಸ್ಥೆ ಶಾಂತಿಯುತವಾಗಿ ಕೆಲಸ ಮಾಡಲು ಬಿಡಿ ಎಂದು ಅವರು ಹೇಳಿದ್ದಾರೆ.
ಲೋಕಾಯುಕ್ತವನ್ನು ಶಕ್ತಿಹೀನ ಮಾಡಲಾಗುತ್ತಿದೆ. ದೂರು ದಾಖಲಿಸುವ ಅವಕಾಶ ಇಲ್ಲದಂತಾಗಿದೆ. ರಾಜಕೀಯ ಪಿತೂರಿಯಿಂದಾಗಿ ಈ ರೀತಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಆ ಸ್ಥಾನದಲ್ಲಿ ದೇವರೇ ಬಂದು ಕೂತರು ರಾಜಕೀಯದವರು ದೇವರ ಮೇಲೂ ಆರೋಪ ಮಾಡುತ್ತಾರೆ. ನ್ಯಾಯ ಸಿಗುವ ಸಂಸ್ಥೆಯನ್ನು ಸಾಯಿಸುವ ಕೆಲಸ ಮಾಡಲಾಗುತ್ತಿದೆ. ಈ ಸಂಸ್ಥೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಅವರು ತಿಳಿಸಿದ್ದಾರೆ.
Advertisement