ಮುಕ್ತ, ವಸ್ತುನಿಷ್ಠ ಚರ್ಚೆ ತುಳಿಯುವ ವಾತಾವರಣ

ಅನ್ನಭಾಗ್ಯದ ಬಗೆಗೆ ನಾನು ಆಡಿರುವ ಮಾತುಗಳಿಗೆ ಆರ್ಥಿಕ ತಜ್ಞರು, ವಿದ್ಯಾ ವಂತರು ವಸ್ತುನಿಷ್ಠವಾಗಿ ಪ್ರತಿಕ್ರಿಯಿಸ ಬೇಕು. ಅದು ಬಿಟ್ಟು ದೊಡ್ಡ...
ಡಾ.ಎಸ್.ಎಲ್. ಭೈರಪ್ಪ
ಡಾ.ಎಸ್.ಎಲ್. ಭೈರಪ್ಪ
Updated on

ಮೈಸೂರು:  ಅನ್ನಭಾಗ್ಯದ ಬಗೆಗೆ ನಾನು ಆಡಿರುವ ಮಾತುಗಳಿಗೆ ಆರ್ಥಿಕ ತಜ್ಞರು, ವಿದ್ಯಾ ವಂತರು ವಸ್ತುನಿಷ್ಠವಾಗಿ ಪ್ರತಿಕ್ರಿಯಿಸ ಬೇಕು. ಅದು ಬಿಟ್ಟು ದೊಡ್ಡ ಗಂಟಲಿನಲ್ಲಿ ಅರಚುತ್ತಾ, ನನ್ನ ಬಗ್ಗೆ ವೈಯಕ್ತಿಕ ನಿಂದನೆ ಮಾಡುತ್ತಾ ಆಳುವ ಧಣಿಗಳ ಭಂಟರಂತೆ  ವರ್ತಿಸುತ್ತಿರುವವರು ಪ್ರತಿಕ್ರಿಯಿಸುತ್ತಿದ್ದಾರೆ. ಇದು ಮುಕ್ತ, ವಸ್ತುನಿಷ್ಠ ಚರ್ಚೆ ಯನ್ನು ತುಳಿಯುವಂಥ ವಾತಾವರಣ ವಾಗಿದೆ ಎಂದು ಸಾಹಿತಿ ಡಾ.ಎಸ್.ಎಲ್.
ಭೈರಪ್ಪ ಸ್ಪಷ್ಟನೆ ನೀಡಿದ್ದಾರೆ. `ನಾನು ಕಳೆದ ತಿಂಗಳು ಒಂದು ಕಾರ್ಯಕ್ರಮಕ್ಕಾಗಿ ಚಿಕ್ಕಮಗಳೂರಿಗೆ ಹೋಗಿದ್ದಾಗ ಪತ್ರಕರ್ತರೊಂದಿಗೆ ಮಾತ ನಾಡಿದ್ದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸ ಮತ್ತು ಸಿದ್ದರಾಮಯ್ಯ ಮಾಡುತ್ತಿರುವ ಕೆಲಸದ ಬಗ್ಗೆ ಪ್ರಸ್ತಾಪಿಸಿದ್ದೆ. ಕೃಷ್ಣ ಅವರೂ ಸಿದ್ದರಾಮಯ್ಯನವರಂತೆ ಕಾಂಗ್ರೆಸ್ ಪಕ್ಷದವರು. ಆದರೆ, ಅವರು ಜಾತಿ ರಾಜ ಕೀಯ ಮಾಡದೆ, ಅತಿಯಾಗಿ ಮಾತೂ ಆಡದೆ, ಸದ್ದುಗದ್ದಲ ಅಬ್ಬರವೂ ಇಲ್ಲದೆ ಅಭಿವೃದ್ಧಿ  ಕೆಲಸ ಮಾಡಿದರು. ಆದರೆ, ಸಿದ್ದರಾಮಯ್ಯನವರು ಮಾಡಿದ್ದು ಬರೀ ಜಾತಿ ರಾಜಕೀಯವೇ' ಎಂದು ಪ್ರತಿಕ್ರಿಯಿಸಿದ್ದೆ.`ಅನ್ನಭಾಗ್ಯ ಯೋಜನೆಯನ್ನು ಶಾಂತ ವಾಗಿ, ಸಮಚಿತ್ತದಲ್ಲಿ ಅವಲೋಕಿಸಿದರೆ, ಸಂಶೋಧಿಸಿದರೆ ಅದರ ಪರಿಣಾಮವು ಎಲ್ಲರಿಗೂ ಗೊತ್ತಾಗುತ್ತದೆ ಮತ್ತು ಗೊತ್ತಾಗಿಯೂ ಇದೆ. ಇದು ಜನರನ್ನು ಸೋಮಾರಿಗಳನ್ನಾಗಿಸುವ ಪರಿಣಾಮವುಳ್ಳದ್ದು. ಉದ್ಯೋಗವನ್ನು ಸೃಷ್ಟಿಸುವ ಮೂಲಕ ಜನರಿಗೆ ಅಕ್ಕಿಯನ್ನು ಕೊಳ್ಳುವ ಶಕ್ತಿಯನ್ನು ನೀಡುವುದು ಸರ್ಕಾರದ ಕೆಲಸ. ಬಡ ಮಕ್ಕಳಿಗೂ ಒಳ್ಳೆಯ ಗುಣಮಟ್ಟದ ವಿದ್ಯಾಭ್ಯಾಸ, ಬಡಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುವಂತೆ ಮಾಡುವುದು ಸರ್ಕಾರದ ಕರ್ತವ್ಯ. ಈ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಏನುಮಾಡಿದೆ ಎಂಬುದನ್ನು ನೋಡಬೇಕು' ಎಂದಿದ್ದೆ. ಈ ನನ್ನ ಮಾತುಗಳನ್ನು ಪತ್ರಿಕೆಯವರು ಅವರಿಗೆ ಬೇಕಾದ ರೀತಿಯಲ್ಲಿ ಬರೆದು ಕೊಂಡು, `ಅನ್ನಭಾಗ್ಯ ಯೋಜನೆಯು ಜನರನ್ನು  ಸೋಮಾರಿಗಳನ್ನಾಗಿಸುತ್ತದೆ- ಎಸ್.ಎಲ್. ಭೈರಪ್ಪ' ಎಂದು ಶೀರ್ಷಿಕೆ ಕೊಟ್ಟು ಬರೆದರು. ಇದಕ್ಕೆ ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ನನ್ನ ವಿರುದ್ಧ ಟೀಕಿಸಿದ್ದಾರೆ. ಭೈರಪ್ಪ ಬಾಲ್ಯವನ್ನು ಮರೆತಿದ್ದಾರೆ ಎಂಬ ಉದ್ವೇಗದ ಮಾತುಗಳನ್ನು ಆಡಿದ್ದಾರೆ. ಕೆಲಸಕ್ಕೆ ಹೋಗುತ್ತಿದ್ದ ಯುವಕರು ಅನ್ನಭಾಗ್ಯ ಬಂದ ಮೇಲೆ ವಾರಕ್ಕೆ ಮೂರು ನಾಲ್ಕು ಬಾರಿ ಚಕ್ಕರ್ ಹೊಡೆಯುತ್ತಿದ್ದಾರೆ ಎಂಬುದು ಅಹಿಂದ ವರ್ಗದ ಹೇರ್ ಕಟಿಂಗ್ ಶಾಪ್ ನಲ್ಲಿ ಗೊತ್ತಾಯಿತು. ಹುಡುಗರು ಅನ್ನಭಾಗ್ಯ ಬಂದಾಗಿನಿಂದ ಕೆಲಸಕ್ಕೆ ಬರುತ್ತಿಲ್ಲ ಎಂದು ಆ ಅಂಗಡಿ ಮಾಲೀಕರು ತಿಳಿಸಿದರು. ಆ  ಮಾಲೀಕ ಸಮಾಜವಾದವಾಗಿದ್ದರೂ ಅನ್ನಭಾಗ್ಯವನ್ನು ಶಪಿಸುತ್ತಿದ್ದಾರೆ. ಇಲ್ಲೆ ಈ ಪರಿಸ್ಥಿತಿ ಇರುವಾಗ ಗ್ರಾಮಾಂತರ ಪ್ರದೇಶದಲ್ಲಿ ಇದರ ಪರಿಣಾಮವನ್ನು ಜನರೇ ಊಹಿಸಿಕೊಳ್ಳಬೇಕು. ನಮ್ಮ ದುರಂತವೆಂದರೆ ನಮ್ಮ ಮುಖ್ಯಮಂತ್ರಿಗಳ ಸಲಹೆಗಾರರು ಅಮೆರಿಕದ ಅಧ್ಯಕ್ಷ ರೂಸ್‍ವೆಲ್ಟ್‍ಗೆ ಸಲಹೆಗಾರರಾಗಿದ್ದ ಜಾನ್ ಮೇನಾರ್ಡ್  ಕೀನ್ಸ್‍ನಂತವರಲ್ಲ. ಕೀನ್ಸ್‍ನಂತವರು ಮುಖ್ಯಮಂತ್ರಿಗಳಿಗೆ ಬೇಕಿಲ್ಲ. ಯಾಕೆಂದರೆ ಅವರು ರೂಸ್‍ವೆಲ್ಟ್ ಅಲ್ಲ. 1929 ರಲ್ಲಿ ಅಮೆರಿಕದಲ್ಲಿ ಸಂಭವಿಸಿದ ವಿಶ್ವ ಆರ್ಥಿಕ ಕುಸಿತದಿಂದ ದೇಶವನ್ನು ರಕ್ಷಿಸಲು ರೂಸ್ ವೆಲ್ಟ್ ಜನರಿಗೆ ಉಚಿತವಾಗಿ ಗೋದಿ ಹಂಚಲಿಲ್ಲ. ಬದಲಾಗಿ ಗೋದಿಯನ್ನು ಕೊಂಡುಕೊಳ್ಳುವಂತೆ ಉದ್ಯೋಗಾವಕಾಶ ಸೃಷ್ಟಿಸಿದರು. ಆಗ ಅಮೆರಿಕ ವಿಶ್ವದಲ್ಲಿ
ಅಗ್ರಸ್ಥಾನಕ್ಕೇರಿತು ಎಂಬುದನ್ನು ಜನರು ಅರಿತುಕೊಳ್ಳುಬೇಕು ಎಂದು ಅವರು ಉದಾಹರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com