
ಬೆಂಗಳೂರು: ದಲಿತ ಜನಾಂಗಕ್ಕೆಂದು ಮೀಸಲಿಟ್ಟ ನಿವೇಶನಗಳನ್ನು ಇನ್ನೂ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿ ದಾಖಲಾಗಿದ್ದ ಅರ್ಜಿಗೆ ಸರ್ಕಾರ ಮತ್ತು ಬಿಡಿಎ ವಿರುದ್ಧ ಹೈಕೋರ್ಟ್ ಕೆಂಡ ಕಾರಿದೆ.
2004 ರಲ್ಲೇ ದಲಿತ ಜನಾಂಗಕ್ಕೆ ನಿವೇಶನ ನೀಡಬೇಕೆಂದು ಸರ್ಕಾರ ಅದೇಶಿಸಿದ್ದರೂ ಈವರೆಗೂ ಹಂಚಿಕೆಯಾಗಿಲ್ಲ ಎಂದು ಆರೋಪಿಸಿ ವಿಜಯ ಲಕ್ಷಮ್ಮ ಸೇರಿ 20 ಜನ ಹೈಕೋರ್ಟ್ ನಲ್ಲಿ ತಕರಾರು ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ. ರಾಮಮೋಹನ ರೆಡ್ಡಿ ಅವರಿದ್ದ ಏಕಸದಸ್ಯ ಪೀಠ, ಯಾವ ರೀತಿಯ ಸರ್ಕಾರವಿದು? ದಲಿತರಿಗೆ ನಿವೇಶನ ಹಂಚಿಕೆ ಮಾಡುವಂತೆ ಈ ಹಿಂದೆಯೇ ಕೋರ್ಟ್ ಅದೇಶಿಸಿದ್ದರೂ ಆದೇಶ ಪಾಲನೆ ಮಾಡುತ್ತಿಲ್ಲ. ಸರ್ಕಾರದ ಈ ಬೇಕವಬ್ದಾರಿತನ ನೇರ ನ್ಯಾಯಾಂಗ ನಿಂದನೆಗೆ ಒಳಪಡುತ್ತದೆ. ಇದೊಂದು ಕೆಲಸಕ್ಕೆ ಬಾರದ ಸರ್ಕಾರ ಎಂದು ಚಾಟಿ ಬೀಸಿದರು. ಅರ್ಜಿ ದಾಖಲಿಸಿದವರೆಲ್ಲರೂ ಆರ್ಥಿಕವಾಗಿ ಹಿಂದುಳಿದವರು ಮತ್ತು ಅತಿ ಬಡವರಾಗಿದ್ದಾರೆ. ಅವರಿಗೆ ನ್ಯಾಯಾಲಯದ ಮೆಟ್ಟಿಲೇರಲು ಸಹ ಶಕ್ತಿ ಇರುವುದಿಲ್ಲ. ಇವರು ವಕೀಲರಿಗೆ ಶುಲ್ಕ ನೀದಬೇಕಾದಲ್ಲಿ ಅವರ ಮನೆ ಚಾಕರಿ ಮಾಡಬೇಕು. ವಾಸ್ತವ ಹೀಗಿದ್ದರೂ ಅವರಿಗೆ ನಿವೇಶನ ಹಂಚಲು ಬಿಡಿಎ ಗೆ ಇರುವ ಸಮಸ್ಯೆಯಾದರೂ ಏನು? ಅವರೇನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ದಲಿತರು ಎಂದು ರಾಜಕೀಯವಾಗಿ ಕಾಣುತಿದ್ದರೆ? ಎಂದು ಪೀಠ ಬಿಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಸದ್ಯ ಹೈಕೋರ್ಟ್ ಗೆ ಅರ್ಜಿ ದಾಖಲಿಸದವರು, ಪಟ್ಟಿಯಲ್ಲಿ ಇರದವರು ಎಂದು ಸಬೂಬು ಹೇಳಲು ಮುಂದಾದರು. ಅಷ್ಟಕ್ಕೇ ತಡೆದ ನ್ಯಾಯಮೂರ್ತಿಗಳು ಇವರು ದಲಿತರಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿ ಅವರೇನೆಂದು ನಾನು ನಿಮಗೆ ತೋರಿಸುತ್ತೇನೆ ಎಂದರು. ನಂತರ ಮುಂದಿನ ವಿಚಾರಣೆಯಲ್ಲಿ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಲಾಯಿತು.
Advertisement