
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆಎನ್ನಲಾದ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ)ವು ಲೋಕಾಯುಕ್ತ ಪೊಲೀಸ್ ಘಟಕದಿಂದ ದಾಖಲೆಗಳನ್ನು ಪಡೆದು ತನಿಖೆ ಆರಂಭಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಹಾಗೂ ಕಡತಗಳನ್ನು ಎಸ್ ಐಟಿಗೆ ಹಸ್ತಾಂತರಿಸಿ ಎಂದು ಸರ್ಕಾರ ಲೋಕಾಯುಕ್ತ ಎಡಿಜಿಪಿಗೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಎಸ್‍ಐಟಿ ಮುಖ್ಯಸ್ಥ ಕಮಲ್ ಪಂತ್ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ. ಹೀಗಾಗಿ ತನಿಖಾಧಿಕಾರಿಯಾಗಿರುವ ಬೆಂಗಳೂರು ನಗರ ಪಶ್ಚಿಮ ವಿಭಾಗ ಡಿಸಿಪಿ ಲಾಬೂರಾಮ್ ಲೋಕಾಯುಕ್ತ ಸಂಸ್ಥೆಗೆ ಖುದ್ದು ಭೇಟಿ ನೀಡಿ ಮಾಹಿತಿ ಪಡೆದರು. ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡುವವರೆಗೆ ನಗರ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ನಡೆಸಿರುವ ತನಿಖೆಯ ಪೂರ್ಣ ಪ್ರಮಾಣದ ವಿವರ ಒಳಗೊಂಡ ಸುಮಾರು 200ಕ್ಕೂ ಹೆಚ್ಚು ಕಡತಗಳನ್ನು ಎಸ್‍ಐಟಿಗೆ ಹಸ್ತಾಂತರಿಸಲಾಗಿದೆ. ಜತೆಗೆ ಪ್ರಕರಣ ಕುರಿತು ಸುದೀರ್ಘವಾಗಿ ಸೋನಿಯಾ ನಾರಂಗ್ ಅವರೊಂದಿಗೆ ಲಾಬೂರಾಮ್ ಚರ್ಚಿಸಿ ಕೆಲವು ಗೌಪ್ಯ ಮಾಹಿತಿಗಳನ್ನು ಸಂಗ್ರಹಿಸಿದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಲೋಕಾಯುಕ್ತ ನ್ಯಾ.ವೈ.ಭಾಸ್ಕರ್‍ರಾವ್ ಅವರ ಪುತ್ರ ಅಶ್ವಿನ್‍ರಾವ್, ಲೋಕಾಯುಕ್ತ ಸಂಸ್ಥೆಯಲ್ಲಿರುವ ಅಧಿಕಾರಿಗಳು ಹಾಗೂ ಹೊರಗಿನ ವ್ಯಕ್ತಿಗಳು ಸೇರಿ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣ ಮಾಹಿತಿ ಕಡತದಲ್ಲಿದೆ. ಅಲ್ಲದೇ, ದೂರುದಾರರೂ ನೀಡಿರುವ ಮಾಹಿತಿ, ಶಂಕಿತ ಆರೋಪಿಗಳು ಹಾಗೂ ಭಾಗಿಯಾಗಿದ್ದಾರೆ ಎನ್ನಲಾದ ಲೋಕಾಯುಕ್ತ ಕಚೇರಿ ಅಧಿಕಾರಿಗಳ ವಿವರಗಳು ಕಡತದಲ್ಲಿವೆ. ಇದನ್ನು ಹೊರತುಪಡಿಸಿ ಬೇರೆ ಅಧಿಕಾರಿಗಳ ಕೈವಾಡದ ಬಗ್ಗೆಯೂ ಲಾಬೂರಾಮ್ ಮಾಹಿತಿ ಸಂಗ್ರಹಿಸಿದ್ದಾರೆಂದು ತಿಳಿದು ಬಂದಿದೆ.
ಚರ್ಚೆ: ಎಸ್‍ಐಟಿ ತಂಡದಲ್ಲಿರುವ ಅಧಿಕಾರಿಗಳೊಂದಿಗೆ ಎಡಿಜಿಪಿ ಕಮಲ್ ಪಂತ್ ಅವರು ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಲೋಕಾಯುಕ್ತ ಪೊಲೀಸರು ಇದುವರೆಗೂ ನಡೆಸಿರುವ ತನಿಖೆಯ ಬಗ್ಗೆ ಲಘು ಅಧ್ಯಯನ ಜತೆಗೆ ಮುಂದೆ ನಡೆಸಬೇಕಿರುವ ತನಿಖೆಯ ವ್ಯಾಪ್ತಿಯ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಹೆಚ್ಚಾಗಿ ಮೂಗರ್ಜಿಗಳು ಬಂದಿವೆ. ಲೋಕಾಯುಕ್ತ ದಾಳಿ ಬೆದರಿಕೆಗೆ ಒಳಗಾದ ಹಲವು ಅಧಿಕಾರಿಗಳು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ಆದರೆ, ಲಿಖಿತ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ, ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯ
ಸಂಗ್ರಹಿಸಲು ಲಿಖಿತ ದೂರು ಅಗತ್ಯ. ಹೀಗಾಗಿ, ಈ ಬಗ್ಗೆಯೂ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಕುರಿತ ತನಿಖೆಯ ಕಡತ ಎಸ್‍ಐಟಿಗೆ ಹಸ್ತಾಂತರಿಸಲಾಗಿದೆ. ತನಿಖೆಯ ವೇಳೆ ಸಹಕಾರ ಕೋರಿದರೆ ನೀಡಲಾಗುವುದು ಎಂದು ಎಸ್ಪಿ ಸೋನಿಯಾ ನಾರಂಗ್ ಹೇಳಿದ್ದಾರೆ.
Advertisement