ಖಾಸಗಿ ಕಂಪನಿ ನೌಕರನ ಅಕ್ರಮ ಬಂಧನ : ಎಸ್.ಐ, ಇಬ್ಬರು ಪೇದೆ ಅಮಾನತು

ಖಾಸಗಿ ಕಂಪನಿ ಉದ್ಯೋಗಿಯನ್ನು ಅಕ್ರಮವಾಗಿ ಬಂಧಿಸಿ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿ ಚಿತ್ರ ಹಿಂಸೆ ನೀಡಿದ ಆರೋಪದ ಮೇಲೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಎಸ್.ಐ ಕಿರಣ್ ಅಮಾನತು.
ಎಸ್.ಐ ಅಮಾನತು(ಸಾಂಕೇತಿಕ ಚಿತ್ರ)
ಎಸ್.ಐ ಅಮಾನತು(ಸಾಂಕೇತಿಕ ಚಿತ್ರ)

ಬೆಂಗಳೂರು: ಖಾಸಗಿ ಕಂಪನಿ ಉದ್ಯೋಗಿಯನ್ನು ಅಕ್ರಮವಾಗಿ ಬಂಧಿಸಿ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿ ಚಿತ್ರ ಹಿಂಸೆ ನೀಡಿದ ಆರೋಪದ ಮೇಲೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಎಸ್.ಐ ಕಿರಣ್, ಕಾನ್ಸ್ ಟೇಬಲ್ ಗಳಾದ ರವೀಶ್ ಹಾಗೂ ತಹಸೀಲ್ದಾರ್ ಎಂಬುವವರನ್ನು ಅಮಾನತು ಮಾಡಲಾಗಿದೆ.

ವಸಂತ ನಗರ ನಿವಾಸಿ ಮೊಲೈಲ್ ಫೋನ್ ಸೇವಾ ಸಂಸ್ಥೆ ಫೀಲ್ಡ್ ಆಫೀಸರ್ ರಮೇಶ್(31 ) ಹಲ್ಲೆಗೊಳಗಾದವರು. ಕಾಲು ಸೇರಿದಂತೆ ದೇಹದ ವಿವಿಧೆಡೆ ಹಲ್ಲೆಗೊಳಗಾಗಿರುವ ರಮೇಶ್ ಅವರ ಕಾಲಿನ ಮೂಳೆ ಮುರಿದಿದ್ದು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಗ್ಗೆ ಹಲಸೂರು ಗೇಟ್ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ವಸಂತ ನಗರ ನಿವಾಸಿ ರಮೇಶ್ ವಿರುದ್ಧ ಅವರ ಮನೆ ಸಮೀಪದಲ್ಲೇ ವಾಸವಿರುವ ಸುರೇಶ್ ಎಂಬುವವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ಮೌಖಿಕ ದೂರು ನೀಡಿದ್ದರು. ತಮ್ಮ ಮನೆ ಬಳಿ ಬಂದು ಅಶ್ಲೀಲ ಪದಗಳಲ್ಲಿ ಮಾಅನಾಡುವ ರಮೇಶ್, ಸಾರ್ವಜನಿಕರು ಹಾಗೂ ಸ್ಥಳೀಯರಿಗೆ ತೊಂದರೆ ಕೊಡುತ್ತಾನೆ ಎಂದು ಎಸ್.ಐ ಕಿರಣ್ ಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್.ಐ ಕಿರಣ್ ಯಾವುದೇ ದೂರು ದಾಖಲಿಸಿಕೊಳ್ಳದೇ ಕಾನ್ಸ್ ಟೇಬಲ್ ಗಳ ಜತೆ ಹೋಗಿ ರಮೇಶ್ ಅವರನ್ನು ಠಾಣೆಗೆ ಕರೆತಂದಿದ್ದಾರೆ. ಠಾಣೆಯಲ್ಲಿ 6 ತಾಸುಗಳ ಕಾಲ ಅಕ್ರಮವಾಗಿ ಬಂಧಿಸಿ ಹಲ್ಲೆ ನಡೆಸಿ, ಮೈ ಮೇಲೆ ಬಿಸಿ ನೀರು ಹಾಕಿ ಚಿತ್ರ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಹೋದರನ ಆರೋಪ: ನನ್ನ ಸಹೋದರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವುದರ ಜತೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದಾನೆ. ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಪಕ್ಷಕ್ಕಾಗಿ ಓಡಾಟ ನಡೆಸುತ್ತಿದ್ದ. ಅಲ್ಲದೇ ರಾತ್ರಿ ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿ ಕಟೌಟ್ ಮಾಡಿಸಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಅದರಲ್ಲಿ ಬರೆಸಿದ್ದ. ಆದರೆ ಇದನ್ನು ಸಹಿಸದ ಬಿಜೆಪಿ ಪಕ್ಷದೊಂದಿಗೆ ಕಾಣಿಸಿಕೊಂಡಿರುವ ಸುರೇಶ್, ಪ್ರಭಾವ ಬಳಸಿ ಕಿರಣ್ ಮೂಲಕ ಸಹೋದರನ ಮೇಲೆ ಠಾಣೆಯಲ್ಲಿ ಚಿತ್ರಹಿಂಸೆ ಕೊಡಿಸಿದ್ದಾನೆಂದು ರಮೇಶ್ ಹಿರಿಯ ಸಹೋದರ ಮುನಿಕೃಷ್ಣ ಆರೋಪಿಸಿದ್ದಾರೆ.     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com